ತುಮಕೂರು: ತುಮಕೂರು ನಗರ ಕ್ಷೇತ್ರದ (Karnataka Elections) ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಪಕ್ಷೇತರನಾಗಿ ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ. ಅವರು ಏಪ್ರಿಲ್ 20ರಂದು ನಾಮಪತ್ರ ಸಲ್ಲಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ತುಮಕೂರು ನಗರ ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿರುವ ಜ್ಯೋತಿ ಗಣೇಶ್ ಅವರ ಬದಲಿಗೆ ತನಗೆ ಟಿಕೆಟ್ ನೀಡಬೇಕು ಎಂದು ಸೊಗಡು ಶಿವಣ್ಣ ಒತ್ತಡ ಹಾಕಿದ್ದರು. ಆದರೆ, ಪಕ್ಷ ಅದಕ್ಕೆ ಸೊಪ್ಪು ಹಾಕಿರಲಿಲ್ಲ. ಈ ಸಿಟ್ಟಿನಿಂದ ಅವರು ಬಿಜೆಪಿ ತೊರೆದು ಬಳಿಕ ಜೆಡಿಎಸ್ ಸೇರುವ ಪ್ರಯತ್ನ ನಡೆಸಿದ್ದರು. ಎಚ್.ಡಿ.ಕುಮಾರಸ್ವಾಮಿಯನ್ನು ಭೇಟಿ ಮಾಡಿದ್ದ ಸೊಗಡು ಶಿವಣ್ಣ ಅವರು ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಆದರೆ, ಈ ಮನವಿ ಫಲಪ್ರದವಾಗದ ಹಿನ್ನೆಲೆಯಲ್ಲಿ ಅವರು ಏಪ್ರಿಲ್ 20ರಂದು ಪಕ್ಷೇತರನಾಗಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೊಗಡು ಶಿವಣ್ಣ ಹೇಳಿದ್ದೇನು?
ʻʻಇವತ್ತಿಂದ ಹೊಸ ಅಧ್ಯಾಯ ಶುರು ಆಗುತ್ತಿದೆ. ನಾನು ಸ್ವಾಭಿಮಾನಿ, ಜೊತೆಯಲ್ಲಿರುವವರು ಕೂಡ ಸ್ವಾಭಿಮಾನಿಗಳು. ಎಲ್ಲರೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ. ಹಾಗಾಗಿ ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆʼʼ ಎಂದು ಪ್ರಕಟಿಸಿದರು.
ʻʻನಾನು ಶಾಂತಿ ಮಂತ್ರ, ಸಮಾನತೆ ಮಂತ್ರ ಜಪಿಸುತ್ತೇನೆ. ವ್ಯವಸ್ಥೆ ಭ್ರಷ್ಟಾಚಾರ ಮುಕ್ತವಾಗಿರಬೇಕು ಎನ್ನುವುದು ನನ್ನ ಬಯಕೆʼʼ ಎಂದು ಹೇಳಿದ ಅವರು, ʻʻನಾನು ಇನ್ಮೇಲೆ ಮನೆ ಮನೆಗೆ ತೆರಳಿ ಮತ ಕೇಳ್ತೀನಿ. ಎರಡು ಜೋಳಿಗೆ ಹಿಡಿದು ಹೋಗ್ತೀನಿ. ಹಿಂದೆ ಋಷಿ ಮುನಿಗಳು ಜೋಳಿಗೆ ಹಿಡಿದು ಮಠಮಾನ್ಯಗಳ ಅಭಿವೃದ್ಧಿಗೆ ಹೋಗುತ್ತಿದ್ದರು. ನಾನು ಹಾಗೆಯೇ ಜೋಳಿಗೆ ಹಿಡಿದು ಹೋಗುತ್ತೇನೆ. ಒಂದು ವೋಟು, ಇನ್ನೊಂದು ನೋಟಿಗಾಗಿ ಜೋಳಿಗೆ ಹಾಕಿದ್ದೇನೆ. ನಾನು ಯಾವತ್ತೂ ಸ್ವಜನ ಪಕ್ಷಪಾತ ಮಾಡೋದಿಲ್ಲʼʼ ಎಂದು ಹೇಳಿದರು.
ʻʻನನಗೆ ಹತ್ತಿರವಿದ್ದ ರಾಜಕಾರಣಿಗಳನ್ನು ಭೇಟಿ ಮಾಡುತ್ತೇನೆ. ನನ್ನ ಜೊತೆ ಇದ್ದವರು ದೇವೇಗೌಡರು, ಎಸ್.ಮಲ್ಲಿಕಾರ್ಜುನಯ್ಯ ಹೀಗೆ ಅನೇಕರು. ಅವರನ್ನು ಭೇಟಿ ಮಾಡ್ತೇನೆʼʼ ಎಂದು ಹೇಳಿದ ಸೊಗಡು ಶಿವಣ್ಣ, ʻʻಮಂಡ್ಯದ ಸಂಸದೆ ಸುಮಲತಾ ಅವರು ಮೋದಿಜೀ ಅನ್ನುತ್ತಲೇ ಮೋದಿಯನ್ನು ಪ್ರಶ್ನೆ ಮಾಡುತ್ತಾರೆ. ನಾನು ಕೂಡಾ ಹಾಗೇ ಸ್ವತಂತ್ರವಾಗಿದ್ದುಕೊಂಡು ಎಲ್ಲರನ್ನೂ ಪ್ರಶ್ನಿಸುತ್ತೇನೆʼʼ ಎಂದರು.
ʻʻಭ್ರಷ್ಟಾಚಾರದ ವಿರುದ್ಧ ನಾನು ಹೋರಾಟ ಮಾಡುತ್ತೇನೆ. 1972ರಲ್ಲಿ ನನ್ನನ್ನು ಜೈಲಿಗೆ ಹಾಕಿಸಿದಂಥ ವ್ಯಕ್ತಿಗಳನ್ನು ತಾಳ್ಮೆಯಿಂದ ಸಹಿಸಿಕೊಂಡಿದ್ದೇನೆ. ಅಪ್ಪ, ಮಗ ಬಂದ ಮೇಲೆ ಯಾಕೆ ಭ್ರಷ್ಟಾಚಾರ, ಬೇನಾಮಿ ಕೆಲಸಗಳು ಹೆಚ್ಚಾಗಿವೆ. ಕೊಡದಲ್ಲಿ ನೀರು ತುಂಬಿದ ಮೇಲೆ ಅದನ್ನ ಚೆಲ್ಲಲೇಬೇಕು. ನಾನು ಮುಂದೆ ಮಾಡಬೇಕಿರುವ ಕೆಲಸ ಬೇಕಾದಷ್ಟು ಇದೆʼʼ ಎಂದರು.