ಕುಮಟಾ: ʻʻಪಕ್ಷವನ್ನು ನಂಬಿ ಕೆಟ್ಟೆವು, ಪಕ್ಷಕ್ಕಾಗಿ ದುಡಿದ ನನಗೆ ಟಿಕೆಟ್ ತಪ್ಪಿಸಿ ತುಂಬಾ ಅನ್ಯಾಯ ಮಾಡಿದ್ದಾರೆʼʼ ಎಂದು ಮಾಜಿ ಶಾಸಕಿ, ಕುಮಟಾ ವಿಧಾನಸಭಾ ಕ್ಷೇತ್ರದ (Karnataka Elections 2023) ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಶಾರದಾ ಶೆಟ್ಟಿ ದುಃಖಿತರಾಗಿ ನುಡಿದಿದ್ದಾರೆ.
ʻʻಕಳೆದ 25 ವರ್ಷಗಳಿಂದ ನಮ್ಮ ಯಜಮಾನರು (ಮೋಹನ್ ಶೆಟ್ಟಿ), ಅವರ ಬಳಿಕ ನಾನು, ಮಕ್ಕಳೆಲ್ಲ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ್ದೆವು, ನಾನು ಒಮ್ಮೆ ಶಾಸಕಿಯಾಗಿದ್ದೆ. ಆದರೆ ಕಳೆದ ಚುನಾವಣೆಯಲ್ಲಿ ಸೋತಿದ್ದೆ. ಐದು ವರ್ಷ ಅಧಿಕಾರ ಅನುಭವಿಸಿದೆ ಎಂದು ಸುಮ್ಮನೆ ಕೂರದೆ ಸೋತ ಐದು ವರ್ಷಗಳ ಕಾಲ ಪಕ್ಷ ಸಂಘಟನೆಗಾಗಿ, ಕಾರ್ಯಚಟುವಟಿಕೆಗಳಿಗಾಗಿ ದುಡಿದಿದ್ದೆ. ಕಾಂಗ್ರೆಸ್‌ಗೆ ಗೆಲುವಿನ ವೇದಿಕೆ ಕಟ್ಟಿಕೊಟ್ಟಿದ್ದೆ. ಹೀಗಾಗಿ ನನಗೆ ನಂಬಿಕೆ ಇತ್ತು ನನಗೆ ಪಕ್ಷ ಟಿಕೆಟ್ ಕೊಡುತ್ತದೆ ಎಂದು. ಆದರೆ ಆ ನಂಬಿಕೆ ಹುಸಿಯಾಗಿದ್ದು, ತುಂಬಾ ದುಃಖವಾಗಿದೆʼʼ ಎಂದಿದ್ದಾರೆ.
ʻʻಶಾರದಾ ಶೆಟ್ಟರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಗೆದ್ದು ಬರುತ್ತಾರೆಂಬ ಅಲೆ ಕುಮಟಾ ಕ್ಷೇತ್ರದಲ್ಲಿ ಇತ್ತು. ಆದರೆ ಹೈಲೆವೆಲ್‌ನಲ್ಲೇ ಕುತಂತ್ರ ನಡೆದು ಟಿಕೆಟ್ ಕೈ ತಪ್ಪಿದೆ. ಬಹಳಷ್ಟು ದಿನಗಳಿಂದ ಈ ಕುತಂತ್ರ ನಡೆಯುತ್ತಿತ್ತು. ಆದರೆ ಈ ಬಾರಿ ಕೊನೆಯ ಅವಕಾಶ ಕೊಡಿ ಎಂದು ಮಾನು ಕೇಳಿಕೊಂಡಿದ್ದೆʼʼ ಎಂದು ಅವರು ಹೇಳಿದ್ದಾರೆ.
ನಾಯಕರು ಭರವಸೆ ನೀಡಿದ್ದರು.. ಅದರೆ, ನಿರ್ಧಾರ ಬೇರೆಯೇ ಆಗಿದೆ!
ʻʻನಮ್ಮ ನಾಯಕರನ್ನು ಭೇಟಿಯಾದಾಗ ನನಗೆ ಭರವಸೆ ಇತ್ತು. ಇತ್ತೀಚಿನ ದಿನಗಳವರೆಗೆ ನಾಯಕರುಗಳು ಕೈಬಿಡಲ್ಲ ಎಂಬ ನಂಬಿಕೆಯಲ್ಲಿದ್ದೆ. ಕುಮಟಾದಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಜನರು ಕೂಡ ಕಾಂಗ್ರೆಸ್ ಕಡೆ ಒಲವು ತೋರಿದ್ದರು. ಆದರೆ ಪಕ್ಷ ನಂಬಿ ಕೆಟ್ಟೆವು ಎನಿಸುತ್ತಿದೆ. ಈಗ ಟಿಕೆಟ್ ಘೋಷಣೆಯಾಗಿದೆ. ಮುಂದೇನೂ ಮಾಡಲು ಅಗುವುದಿಲ್ಲ. ಮಹಿಳೆಯಾಗಿ ನನಗೆ ಅವಕಾಶ ನೀಡಬೇಕಿತ್ತುʼʼ ಎಂದ ಅವರು, ಎರಡು ದಿನಗಳ ಬಳಿಕ ಕಾರ್ಯಕರ್ತರ ಸಭೆ ನಡೆಸಿ, ಅವರ ಸೂಚನೆಯಂತೆ ನಡೆಯುತ್ತೇನೆ ಎಂದು ತಿಳಿಸಿದ್ದಾರೆ.
ಕುಮಟಾದಲ್ಲಿ ಕಾಂಗ್ರೆಸ್ ಈ ಬಾರಿ ಮಾರ್ಗರೇಟ್ ಆಳ್ವಾ ಅವರ ಪುತ್ರ ನಿವೇದಿತ್ ಆಳ್ವಾ ಅವರಿಗೆ ಟಿಕೆಟ್ ನೀಡಿದೆ. ನಿವೇದಿತ್ ಆಳ್ವ ಅವರಿಗೆ ಟಿಕೆಟ್ ನೀಡಬಾರದು ಎಂದು ಬಹುತೇಕ ಎಲ್ಲ ಆಕಾಂಕ್ಷಿಗಳೂ ಒತ್ತಡ ಹೇರಿದ್ದರು.
ಕುಮಟಾ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಶಾಸಕ ದಿನಕರ ಶೆಟ್ಟಿ ಅವರಿಗೆ ಟಿಕೆಟ್ ನೀಡಿದ್ದು, ಎಲ್ಲ ಪಕ್ಷಗಳು ಭರ್ಜರಿ ಪ್ರಚಾರಕ್ಕೆ ಮುಂದಾಗಿವೆ.
ಇದನ್ನೂ ಓದಿ : Karnataka Elections : ನಿವೇದಿತ್ ಆಳ್ವಾಗೆ ಕುಮಟಾ ಟಿಕೆಟ್ ಕೊಟ್ಟರೆ ನಾವೇ ಸೋಲಿಸುತ್ತೇವೆ; ಯುವ, ಮಹಿಳಾ ಕಾಂಗ್ರೆಸ್