ನವ ದೆಹಲಿ: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಅಂತಿಮಗೊಳಿಸುವ ಪ್ರಕ್ರಿಯೆ ರಾಜ್ಯದಿಂದ ದಿಲ್ಲಿಗೆ ಶಿಫ್ಟ್ ಆಗಿದೆ. ರಾಜ್ಯದ ಸ್ಕ್ರೀನಿಂಗ್ ಕಮಿಟಿ ತನ್ನ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿದ್ದಾಗಿ ತಿಳಿಸಿದೆ. ಹೀಗಾಗಿ ಈಗ ಟಿಕೆಟ್ ಲಾಬಿ ನಡೆಸೋದು ದಿಲ್ಲಿಗೆ ತಲುಪಿದೆ. ಮಾಜಿ ಸಚಿವ ಎಚ್. ಆಂಜನೇಯ (H Anajaneya) ಹಾಗೂ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ (KH Muniyappa) ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮವರಿಗಾಗಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.
ಮಾದಿಗ ಸಮುದಾಯಕ್ಕೆ ಸೀಟು ಕೇಳಿದ ಆಂಜನೇಯ
ಸಿದ್ದರಾಮಯ್ಯ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್. ಆಂಜನೇಯ ಅವರು ದಿಲ್ಲಿಯಲ್ಲಿ ಖರ್ಗೆ ಅವರನ್ನು ಭೇಟಿ ಮಾಡುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದರು.
ʻʻದೆಹಲಿಯ ಅಕ್ಬರ್ ರಸ್ತೆಯಲ್ಲಿ ಕಾಂಗ್ರೆಸ್ ದೇವಾಲಯ ಇದೆ. ಅಲ್ಲಿ ನಮ್ಮ ಮನವಿಯನ್ನು ಮುಂದಿಡುತ್ತೇವೆ. ಮಾದಿಗ ಸಮುದಾಯದ ರಾಜಕೀಯ ಪ್ರಾತಿನಿಧ್ಯ ಕ್ಷಿಣಿಸುತ್ತಿದೆ. ಸಮುದಾಯದ ರಾಜಕೀಯ ಪ್ರಾತಿನಿಧ್ಯ ಬಲಪಡಿಸಬೇಕಿದೆ. ಹೀಗಾಗಿ ಸಮುದಾಯದ ನಾಯಕರು ದೆಹಲಿಗೆ ಬಂದಿದ್ದೇವೆʼʼ ಎಂದು ಹೇಳಿದರು.
ʻʻಖರ್ಗೆಯವರು ಅಧ್ಯಕ್ಷರಾಗಿರುವುದು ನಮ್ಮ ದುರಂತ. ಅವರಲ್ಲಿ ಮನವಿ ಮಾಡಿ ಅವಕಾಶ ಕೇಳುತ್ತೇವೆ. ಹೆಚ್ಚು ಸೀಟುಗಳನ್ನು ಪಡೆದು ಕಾಂಗ್ರೆಸ್ ಪಕ್ಷನ್ನು ಗೆಲ್ಲಿಸುತ್ತೇವೆ. ದೇವನಹಳ್ಳಿಯಲ್ಲಿ ಕೆ.ಎಚ್. ಮುನಿಯಪ್ಪ ಅವರಿಗೆ ಟಿಕೆಟ್ ಕೇಳುತ್ತಿದ್ದೇವೆ. ಪಾವಗಡ ಬೇಕೇ ಬೇಕು ಎಂದು ನಾವು ಕೇಳುತ್ತಿದ್ದೇವೆʼʼ ಎಂದರು ಆಂಜನೇಯ. ಮಾಯಕೊಂಡ, ಶಿವಮೊಗ್ಗ ಗ್ರಾಮೀಣ, ಮುಧೋಳ್, ಕಡಚಿ, ಶಿರಹಟ್ಟಿ , ಲಿಂಗಸಗೂರು ಕ್ಷೇತ್ರಗಳನ್ನು ಮಾದಿಗರಿಗೆ ನೀಡುವಂತೆ ಮನವಿ ಮಾಡುವುದಾಗಿ ಹೇಳಿದರು.
ಕೆ.ಎಚ್. ಮುನಿಯಪ್ಪ ಹೇಳಿದ್ದೇನು?
ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಅವರು, ʻʻಕಾಂಗ್ರೆಸ್ 150 ಸೀಟ್ ಗೆಲ್ಲಲೇಬೇಕಾಗಿದೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲ ಆಗಬಾರದು. ಚಿತ್ರದುರ್ಗ, ತುಮಕೂರಿನಲ್ಲಿ ಗೊಲ್ಲ ಸಮುದಾಯಕ್ಕೆ ಟಿಕೆಟ್ ನೀಡಬೇಕು. ಗೊಲ್ಲ ಸಮುದಾಯಕ್ಕೆ ಟಿಕೆಟ್ ನೀಡಲೇಬೇಕಾಗಿದೆ. ಅಲ್ಪಸಂಖ್ಯಾತರಿಗೂ ಟಿಕೆಟ್ ನೀಡಬೇಕು. ಅವರನ್ನು ಗೆಲ್ಲಿಸುವಂತಹ ಕೆಲಸ ಮಾಡಬೇಕು. ಹೀಗೆ ಮಾಡಿದರೆ ಅವರು ಬೇರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ. ಹಿಂದುಳಿದ ಸಮುದಾಯಗಳಿಗೂ ಟಿಕೆಟ್ ನೀಡಬೇಕುʼʼ ಎಂದು ಹೇಳಿದರು.
ಇದನ್ನೂ ಓದಿ : Toll collection : ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ