Site icon Vistara News

Karnataka Elections : ಹರತಾಳು ಹಾಲಪ್ಪ ಮನೆ ಹಾಳು ಮಾಡೋದ್ರಲ್ಲಿ ನಂಬರ್ ಒನ್; ಬೇಳೂರು ಗೋಪಾಲಕೃಷ್ಣ ಆರೋಪ

Beluru Gopalakrishna

ರಿಪ್ಪನ್ ಪೇಟೆ (ಶಿವಮೊಗ್ಗ): ʻʻಹರತಾಳು ಹಾಲಪ್ಪ ಅವರು ಹಿಂದೆ ಸೊರಬದಲ್ಲಿ ಬಂಗಾರಪ್ಪ ಕುಟುಂಬವನ್ನು ಒಡೆದು, ಮನೆ ಹಾಳು ಮಾಡಿದ್ರು. ಈಗ ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಅವರ ಕುಟುಂಬ ಒಡೆದು, ಮನೆ ಹಾಳು ಮಾಡೋಕೆ ರೆಡಿ ಆಗಿದ್ದಾರೆʼʼ ಎಂದು ಮಾಜಿ ಶಾಸಕ ಹಾಗೂ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ರಾಜಕೀಯ ಜೀವನಕ್ಕಾಗಿ ಮನೆ ಹಾಳು ಮಾಡೋ ಕೆಲಸ ಗೊತ್ತಿರುವುದು ರಾಜ್ಯದಲ್ಲಿ ಹಾಲಪ್ಪನವರಿಗೆ ಮಾತ್ರ. ಹಾಲಪ್ಪನ ಬಗ್ಗೆ ನಾನು ಟೀಕೆ ಮಾಡೋದೇ ಬೇಡ. ಅವರ ಭ್ರಷ್ಟಾಚಾರ, ಅವರು ಪಕ್ಷ ಒಡೆದಿರುವುದನ್ನು ಅವರ ಪಕ್ಷದವರೇ ಹೇಳ್ತಿದ್ದಾರೆ ಎಂದರು. ʻʻವಿರೋಧ ಪಕ್ಷವಾಗಿ ನಾವು ಕೂಡ ನಮ್ಮ ಕೆಲಸ ಮಾಡಿದ್ದೇವೆ. ಈಗಾಗಲೇ ಹೊಸನಗರ- ಸಾಗರದಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿದ್ದೇನೆʼʼ ಎಂದು ಬೇಳೂರು ಗೋಪಾಲಕೃಷ್ಣ ತಿಳಿಸಿದರು. ʻʻನಾಮಪತ್ರ ಸಲ್ಲಿಕೆ ವೇಳೆ ಭಾರಿ ಸಂಖ್ಯೆಯ ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದು ಭರ್ಜರಿ ಓಪನಿಂಗ್ ನನಗೆ ನೀಡಿದ್ದಾರೆ ಎಂದು ಖುಷಿಪಟ್ಟರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಶೆಟ್ಟರ್ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಂತೆ ಆಗಿದೆ ಎಂದರು ಬೇಳೂರು.

ʻʻಮಾಜಿ ಸಿಎಂ ಯಡಿಯೂರಪ್ಪ ಅವರನ್ನು ರಾಜ್ಯದಲ್ಲಿ ಮೂಲೆಗುಂಪು ಮಾಡಿ ಕಣ್ಣೀರು ಹಾಕಿಸಿ, ಅಧಿಕಾರದಿಂದ ಕೆಳಗೆ ಇಳಿಸಲಾಯಿತು. ಪಕ್ಷಕ್ಕಾಗಿ ದುಡಿದ ನಾಯಕರಿಗೆ ಬಿಜೆಪಿ ಪಕ್ಷದಲ್ಲಿ ಬೆಲೆ ಇಲ್ಲದಂತೆ ಮಾಡಿದ್ದಾರೆ. ಮೋದಿ ಬಿಟ್ಟರೆ, ಬೇರೆ ಯಾರಿಗೂ ಬೆಲೆ ಇಲ್ಲ ಎಂಬಂತೆ ಆಗಿದೆ. ಲಕ್ಷಣ್ ಸವದಿ ಡಿಸಿಎಂ ಆಗಿದ್ದವರು. ಅವರಿಗೂ ಸಹ ಟಿಕೆಟ್ ನೀಡಲಿಲ್ಲ ಎಂದರು. ಹೋಗಿ ಹೋಗಿ ರಮೇಶ್ ಜಾರಕಿಹೊಳಿ ಅಂತವರಿಗೆ ಟಿಕೆಟ್ ಕೋಡ್ತಾರೆ. ಇದನ್ನ ಗಮನಿಸಿದರೆ, ಪಕ್ಷ ದುರಂತದ ಹಾದಿ ಹಿಡಿದಿರೋದು ಗೊತ್ತಾಗುತ್ತದೆʼʼ ಎಂದು ಹೇಳಿದರು ಬೇಳೂರು ಗೋಪಾಲಕೃಷ್ಣ.

ಈ ಬಾರಿ ಗೆಲುವು ನನ್ನದೇ ಎಂದ ಬೇಳೂರು

ʻʻಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಗೆಲುವು ನನ್ನದೇ. ಬಿಜೆಪಿ ರಾಜ್ಯದಲ್ಲಿ ಹಾಗೂ ನನ್ನ ಕ್ಷೇತ್ರದಲ್ಲಿ ಮನೆಯೊಂದು ಮೂರು ಬಾಗಿಲಿನಂತಾಗಿದೆ. ಈಗಾಗಲೇ ಬಿಜೆಪಿ ಪಕ್ಷದಲ್ಲಿದ್ದ ಹಿರಿಯ ಮುಖಂಡರು ಹಾಗೂ ಪ್ರಾಮಾಣಿಕ ಕಾರ್ಯಕರ್ತರು ಹರತಾಳು ಹಾಲಪ್ಪ ವಿರುದ್ಧ ಸಿಡಿದೆದ್ದಿದ್ದಾರೆʼʼ ಎಂದು ಬೇಳೂರು ಹೇಳಿದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಿ.ಪಿ ರಾಮಚಂದ್ರ, ಶ್ವೇತಾ ಆರ್ ಬಂಡಿ. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಾಸಪ್ಪ ಗೌಡ, ಕೆರೆಹಳ್ಳಿ ಚಂದ್ರೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಈಶ್ವರಪ್ಪ ಗೌಡ, ಕಾಂಗ್ರೆಸ್ ಮುಖಂಡರಾದ ಬಿ.ಜಿ ನಾಗರಾಜ, ಡಿ,ಈ.ಮಧುಸೂದನ್. ಪ್ರಕಾಶ್ ಪಾಲೇಕರ್. ಆಸಿಫ್. ಉಲ್ಲಾಸ್, ಶ್ರೀನಿವಾಸ್ ಆಚಾರ್, ದೇವರಾಜ್ ಕೆರಹಳ್ಳಿ, ಮಳವಳ್ಳಿ ಮಂಜುನಾಥ್, ಶ್ರೀಧರ್, ಜಿ ಆರ್ ಗೋಪಾಲಕೃಷ್ಣ, ಧನಲಕ್ಷ್ಮಿ, ಸಾಹಿದ, ಲೇಖನ, ಇನ್ನಿತರರಿದ್ದರು.

ಇದನ್ನೂ ಓದಿ : Karnataka Elections : ಬಿಎಸ್‌ವೈಗೆ ಕಣ್ಣೀರು ಹಾಕಿಸಿದವರು ಈಗ ಮತದಾರರ ಮುಂದೆ ಕಣ್ಣೀರು ಹಾಕ್ತಿದಾರೆ: ಬೇಳೂರು ಬಗ್ಗೆ ಹಾಲಪ್ಪ ವ್ಯಂಗ್ಯ

Exit mobile version