Site icon Vistara News

Karnataka Elections : ಹತ್ತನೇ ವಿಧಾನಸಭಾ ಚುನಾವಣೆ ಎದುರಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ರೆಡಿ, ಏ. 18ರಂದು ನಾಮಪತ್ರ

Araga jnanendra

#image_title

ತೀರ್ಥಹಳ್ಳಿ (ಶಿವಮೊಗ್ಗ): ʻʻಇದು ನನ್ನ 10ನೇ ವಿಧಾನಸಭಾ ಚುನಾವಣೆ (Karnataka Elections). ಒಂದೇ ಪಕ್ಷ, ಒಂದೇ ಚಿಹ್ನೆಗೆ ಬದ್ಧನಾಗಿದ್ದೇನೆ. ಪಕ್ಷ ನನಗೆ ಎಲ್ಲವನ್ನು ನೀಡಿದೆ. ಇಲ್ಲಿ ತನಕ ಶಕ್ತಿಮೀರಿ ಜನತೆಯ ಕೆಲಸ ಮಾಡಿದ್ದೇನೆʼʼ ಎಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.

ತೀರ್ಥಹಳ್ಳಿ ಬಂಟರ ಭವನದಲ್ಲಿ ಶನಿವಾರ (ಏಪ್ರಿಲ್‌ 15) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜ್ಞಾನೇಂದ್ರ ಅವರು, ʻʻಒಂದು ಕಾಲದಲ್ಲಿ ಬಿಜೆಪಿಯನ್ನು ಮೇಲ್ವರ್ಗದವರ, ವ್ಯಾಪಾರಿಗಳ ಪಕ್ಷವೆಂದು ಜರಿಯಲಾಗಿತ್ತು. ಅದರೆ ಇಂದು ಬಿಜೆಪಿ ದಲಿತರ ಮನೆ ಬಾಗಿಲಿಗೆ ಬಂದಿದೆ ಬಂದಿದೆ. ರೈತರ ಜಮೀನಿಗೆ ಆಗಮಿಸಿದೆ. ಸರ್ವವ್ಯಾಪಿ ಹಾಗೂ ಸರ್ವಶಕ್ತಿಯಾಗಿದೆ. ಪ್ರತಿ ಮತಗಟ್ಟೆಗಳಲ್ಲೂ ನಮ್ಮ ದೊಡ್ಡ ಪಡೆಯಿದೆʼʼ ಎಂದು ಹರ್ಷಿಸಿದರು.

ʻʻನಾನು ಈ ಬಾರಿ ಪ್ರಗತಿ ಮತ್ತು ಅಭಿವೃದ್ಧಿ ಆಧಾರದಲ್ಲಿ ಮತಯಾಚನೆ ಮಾಡುತ್ತಿದ್ದು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಸುಸಂಸ್ಕೃತ ಜನರು ಅಭಿವೃದ್ಧಿಗೆ ಮಣೆ ಹಾಕುತ್ತಾರೆ ಎಂಬ ವಿಶ್ವಾಸ ನನಗಿದೆʼʼ ಎಂದರು.

ದಾಖಲೆ ಅನುದಾನ ಮತ್ತು ದಾಖಲೆ ಅಭಿವೃದ್ಧಿ

ʻʻತೀರ್ಥಹಳ್ಳಿ ಕ್ಷೇತ್ರಕ್ಕೆ ದಾಖಲೆಯ 3254 ಕೋಟಿ ರೂ.ಹಣ ತಂದಿದ್ದೇನೆ. ಬರೀ ಕುಡಿಯುವ ನೀರಿಗಾಗಿಯೇ 700 ಕೋಟಿ ಬಂದಿದೆ. ಹಳ್ಳಿಗಳಲ್ಲಿ ಹೊಸ ರಸ್ತೆಗಳು, ಕಾಲು ಸಂಕಗಳು, ಸೇತುವೆಗಳು, ಸಮುದಾಯ ಭವನಗಳು, ಶಾಲಾ ಕಟ್ಟಡಗಳು ನಿರ್ಮಾಣಗೊಂಡಿವೆ. ಯಾವುದೇ ಜನಪ್ರತಿನಿಧಿ ಈತನಕ ತರದಷ್ಟು ಅನುದಾನ ತಂದಿದ್ದೇನೆ. ಕಳೆದ ಬಾರಿಯೇ ದಾಖಲೆಯ ಅಂತರದಲ್ಲಿ ಗೆದ್ದಿದ್ದೇನೆ. ಈ ಸಲ ಈ ಅಂತರ ಇನ್ನೂ ಜಾಸ್ತಿಯಾಗುವ ವಿಶ್ವಾಸವಿದೆʼʼ ಎಂದು ಜ್ಞಾನೇಂದ್ರ ತಿಳಿಸಿದರು.

ಏ. 18ರಂದು ಮಂಗಳವಾರ ತಾನು ನಾಮಪತ್ರ ಸಲ್ಲಿಸುತ್ತಿದ್ದು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶುಭ ಹಾರೈಸುವಂತೆ ಆರಗ ವಿನಂತಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ ಅವರು ಮಾತನಾಡಿ, ಇದು ಜ್ಞಾನೇಂದ್ರ ಅವರ ಕೊನೆಯ ಚುನಾವಣೆ. ಕ್ಷೇತ್ರದ ಅಭಿವೃದ್ಧಿಗಾಗಿ ಶಕ್ತಿಮೀರಿ ಶ್ರಮಿಸಿರುವ ಜ್ಞಾನೇಂದ್ರರಿಗೆ ಕ್ಷೇತ್ರದ ಜನತೆ ನೀಡುವ ವಿದಾಯ ನೆನಪಿನಲ್ಲಿರುವಂತಾಗಲಿ ಎಂದು ಆಶಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಆರ್.ಮದನ್, ಸಂದೇಶ್ ಜವಳಿ, ಬೇಗುವಳ್ಳಿ ಕವಿರಾಜ್ , ಹೆದ್ದೂರು ನವೀನ, ಸೊಪ್ಪುಗುಡ್ಡೆ ರಾಘವೇಂದ್ರ , ರಕ್ಷಿತ್ ಮೇಗರವಳ್ಳಿ , ಹೊಸಳ್ಳಿ ಸುಧಾಕರ್, ಮೆದೋಳಿಗೆ ಜಯರಾಮ್ ಮುಂತಾದವರಿದ್ದರು.

ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿ ಕ್ಷೇತ್ರದಿಂದ ಇದುವರೆಗೆ ಒಂಬತ್ತು ಬಾರಿ ಸ್ಪರ್ಧಿಸಿದ್ದಾರೆ. ನಾಲ್ಕು ಬಾರಿ ಗೆದ್ದಿದ್ದು, ಐದು ಬಾರಿ ಸೋತಿದ್ದಾರೆ. ಇದು ಅವರ ಹತ್ತನೇ ಚುನಾವಣೆಯಾಗಿದೆ.

ಇದನ್ನೂ ಓದಿ : Karnataka Elections : ಅವರಿಬ್ಬರು ಒಂದೇ ಹಾರ ಹಾಕ್ಕೊಂದು ಓಡಾಡಿದ್ರೆ ಏನು ಭೂಕಂಪ ಆಗುತ್ತಾ?; ಕಿಮ್ಮನೆ-ಮಂಜುನಾಥ್‌ ಜೋಡಿಗೆ ಆರಗ ವ್ಯಂಗ್ಯ

Exit mobile version