ಹಾಸನ: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Elections 2023) ಸಂಬಂಧಿಸಿ ಜಾತ್ಯತೀತ ಜನತಾದಳದ ಅಭ್ಯರ್ಥಿಗಳ ಎರಡನೇ ಪಟ್ಟಿ ಶುಕ್ರವಾರ ರಾತ್ರಿಯೊಳಗೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಭಾರಿ ಚರ್ಚೆಗೆ ಕಾರಣವಾಗಿದ್ದು, ಬಿಕ್ಕಟ್ಟು ಸೃಷ್ಟಿಯಾಗಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಎಚ್.ಪಿ ಸ್ವರೂಪ್ ಪಾಲಾಗುವುದು ಪಕ್ಕಾ ಎಂದು ಹೇಳಲಾಗಿದೆ.
ಹಾಸನ ಟಿಕೆಟ್‌ನ ಕಾರಣದಿಂದಾಗಿಯೇ ಜೆಡಿಎಸ್‌ನ ಎರಡನೇ ಪಟ್ಟಿ ವಿಳಂಬವಾಗಿತ್ತು. ಇದೀಗ ಟಿಕೆಟ್‌ಗೆ ಸಂಬಂಧಿಸಿ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ ಎನ್ನಲಾಗಿದೆ. ಅದರನ್ವಯ ಹಾಸನದ ಟಿಕೆಟ್ ತನಗೇ ಕೊಡಬೇಕು ಎಂಬ ಭವಾನಿ ರೇವಣ್ಣ ಮತ್ತು ಎಚ್.ಡಿ. ರೇವಣ್ಣ ಅವರ ಬೇಡಿಕೆಯನ್ನು ತಿರಸ್ಕರಿಸಲಾಗಿದೆ. ಈ ವಿಚಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ನಿಲುವಿಗೆ ಜಯ ಸಿಕ್ಕಿದೆ ಎನ್ನಲಾಗುತ್ತಿದ್ದು, ಎಚ್.ಪಿ ಸ್ವರೂಪ್ ಅವರೇ ಟಿಕೆಟ್ ಪಡೆಯುವುದು ನಿಶ್ಚಿತವಾಗಿದೆ.
ಎರಡನೇ ಪಟ್ಟಿಯಲ್ಲಿ ಹಾಸನ ಕ್ಷೇತ್ರಕ್ಕೆ ಎಚ್.ಪಿ. ಸ್ವರೂಪ್ ಅವರ ಹೆಸರಿದೆ ಎನ್ನುವುದನ್ನು ಅರಿತ ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಮನೆಯತ್ತ ಧಾವಿಸುತ್ತಿದ್ದಾರೆ. ಮನೆಯ ಎದುರು ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಟಿಕೆಟ್ ಘೋಷಣೆಯಾದ ಕೂಡಲೇ ದೊಡ್ಡ ಮೆರವಣಿಗೆಯೊಂದು ನಡೆಯುವ ಸಾಧ್ಯತೆ ಇದೆ.
ಹಾಸನ ಟಿಕೆಟ್‌ಗೆ ಸಂಬಂಧಿಸಿ ಜಾತ್ಯತೀತ ಜನತಾದಳದಲ್ಲಿ ಕುಟುಂಬವೇ ಒಡೆದು ಹೋಗುವ ಅಪಾಯಕಾರಿ ಸನ್ನಿವೇಶವೂ ನಿರ್ಮಾಣವಾಗಿತ್ತು. ಯಾವ ಕಾರಣಕ್ಕೂ ಹಾಸನ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ಭವಾನಿ ರೇವಣ್ಣ ಹಠ ತೊಟ್ಟಿದ್ದರು. ಎಚ್.ಡಿ ರೇವಣ್ಣ ಅವರ ಬೆಂಬಲವೂ ಅವರಿಗಿತ್ತು. ಬಿಜೆಪಿ ಅಭ್ಯರ್ಥಿಯಾಗಿರುವ ಪ್ರೀತಂ ಗೌಡ ಅವರ ಸವಾಲನ್ನು ಎದುರಿಸಲು ಸ್ವತಃ ಭವಾನಿ ರೇವಣ್ಣ ಅವರೇ ಮುಂದಾಗಿದ್ದರು. ಆದರೆ, ಇದು ಕೌಟುಂಬಿಕ ರಾಜಕಾರಣಕ್ಕೆ ಇಂಬು ನೀಡಿದಂತಾಗುತ್ತದೆ. ನಾವು ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕಾಗುತ್ತದೆ ಎಂಬ ಕಾರಣವಿಟ್ಟುಕೊಂಡು ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಅಂತಿಮವಾಗಿ ವಿವಾದ ದೇವೇಗೌಡರ ಅಂಗಳ ತಲುಪಿತ್ತು. ದೇವೇಗೌಡರು ಕೂಡಾ ಕುಮಾರಸ್ವಾಮಿ ಅವರದೇ ಮಾತಿಗೆ ಮಣೆ ಹಾಕಿದಾಗ ಒಂದು ಹಂತದಲ್ಲಿ ಭವಾನಿ ರೇವಣ್ಣ ಸಿಟ್ಟಿಗೆದ್ದಿದ್ದರು.
ಹಾಸನದಲ್ಲಿ ಜೆಡಿಎಸ್ ಟಿಕೆಟ್ ನೀಡದೆ ಹೋದರೆ ಪಕ್ಷೇತರರಾಗಿ ಕಣಕ್ಕಿಳಿಯುವ ಬೆದರಿಕೆಯನ್ನೂ ಹಾಕಲಾಗಿತ್ತು. ಆದರೆ, ಕುಮಾರಸ್ವಾಮಿ ಯಾವ ಬ್ಲ್ಯಾಕ್ ಮೇಲ್‌ಗೂ ತಲೆ ಬಾಗುವುದಿಲ್ಲ ಎಂದು ತಮ್ಮ ನಿಲುವಿಗೆ ಕಟ್ಟುಬಿದ್ದಿದ್ದರು.
ಒಂದು ಹಂತದಲ್ಲಿ ಭವಾನಿ ರೇವಣ್ಣ ಅವರಿಗೆ ಮೈಸೂರಿನ ಚಾಮರಾಜ ಕ್ಷೇತ್ರದಿಂದ ಟಿಕೆಟ್ ನೀಡುವ ಚರ್ಚೆಯೂ ನಡೆದಿತ್ತು ಎನ್ನಲಾಗಿದೆ. ಆದರೆ, ಇದನ್ನು ರೇವಣ್ಣ ಅವರೇ ತಿರಸ್ಕರಿಸಿದ್ದರು.
ಅಂತಿಮವಾಗಿ ಈ ಸ್ವರೂಪ್‌ಗೆ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಜೆಡಿಎಸ್ ಪಟ್ಟಿ ಬಿಡುಗಡೆ ಆದ ಮೇಲೆ ಭವಾನಿ ರೇವಣ್ಣ, ಎಚ್.ಡಿ.ರೇವಣ್ಣ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದುನೋಡಬೇಕಾಗಿದೆ.
ಇದನ್ನೂ ಓದಿ : JDS Politics: ಭವಾನಿಗೆ ಟಿಕೆಟ್ ಇಲ್ಲ, ಹಾಸನ- ಹೊಳೆನರಸೀಪುರ ಎರಡೂ ಕಡೆ ರೇವಣ್ಣ? ಇಂದು ಅಂತಿಮ ತೀರ್ಮಾನ