ಬೆಂಗಳೂರು: ಬೆಳಗಾವಿಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುವ ಜಾರಕಿಹೊಳಿ ಬ್ರದರ್ಸ್ (Jarakiholi brothers) ರಾಜಕೀಯಕ್ಕೆ ಬ್ರೇಕ್ ಹಾಕಲು ಬಿಜೆಪಿ ಹೈಕಮಾಂಡ್ ಪ್ಲ್ಯಾನ್ ಮಾಡಿದೆಯಾ? ಹೀಗೊಂದು ಸುದ್ದಿ ಬಿಜೆಪಿ ಪಡಸಾಲೆಯಲ್ಲಿ ಹರಿದಾಡುತ್ತಿದೆ.
ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ಬೇರೆ ಬೇರೆ ಪಕ್ಷಗಳಲ್ಲಿ ಇದ್ದುಕೊಂಡು ರಾಜಕೀಯವನ್ನು ತಮ್ಮ ಕಿರುಬೆರಳಲ್ಲಿ ಕುಣಿಸುತ್ತಾರೆ ಎನ್ನುವುದು ಹಿಂದಿನಿಂದಲೂ ಕೇಳಿಬರುತ್ತಿರುವ ಆರೋಪ. ಅದರಲ್ಲೂ ರಮೇಶ್ ಜಾರಕಿಹೊಳಿ ಬಿಜೆಪಿಗೆ ಬಂದ ಮೇಲಂತೂ ಎಲ್ಲವೂ ತಾವು ಹೇಳಿದಂತೆ ನಡೆಯಬೇಕು ಎನ್ನುವ ವರ್ತನೆ ಜಾಸ್ತಿಯಾಗಿದೆ ಎನ್ನಲಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಬಿಜೆಪಿ ಹೈಕಮಾಂಡ್ ಪ್ರಯತ್ನ ಎನ್ನಲಾಗುತ್ತಿದೆ.
ಇದರ ಜತೆಗೆ ಬೆಳಗಾವಿ ಬಿಜೆಪಿಯ ಕೆಲವು ನಾಯಕರು ಕೂಡಾ ಕುಟುಂಬ ರಾಜಕಾರಣದ ಬಗ್ಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಬಿಜೆಪಿ ನಾಯಕರು ಬೆಳಗಾವಿ ರಾಜಕಾರಣದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹೀಗೆ ನೀಡಿರುವ ಮನವಿಯಲ್ಲಿ ಮಾಡಿರುವ ಅತ್ಯಂತ ಪ್ರಮುಖ ಕೋರಿಕೆಯೆಂದರೆ, ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಅವರ ವಿರುದ್ಧ ರಮೇಶ್ ಜಾರಕಿಹೊಳಿ ಇಲ್ಲವೇ ಬಾಲಚಂದ್ರ ಜಾರಕಿಹೊಳಿ ವಿರುದ್ಧ ಕಣಕ್ಕಿಳಿಸಬೇಕು ಎನ್ನುವುದು.
ಮೂವರೂ ಸಹೋದರರು ಒಬ್ಬರನ್ನೊಬ್ಬರು ಆಂತರಿಕವಾಗಿ ಬೆಂಬಲಿಸುತ್ತಾ ಹೊರಗಡೆ ವಿರೋಧಿಗಳೆಂಬಂತೆ ವರ್ತಿಸುತ್ತಾ ಇರುತ್ತಾರೆ. ಹೀಗಾಗಿ, ಅವರ ನಡುವೆಯೇ ಸ್ಪರ್ಧೆ ಹಚ್ಚಿ ಅವರ ಒಳ ಒಪ್ಪಂದಗಳನ್ನು ಮುರಿಯಬೇಕು ಎನ್ನುವುದು ಬಿಜೆಪಿಯ ಬೆಳಗಾವಿ ನಾಯಕರ ವಾದ.
ಆದರೆ, ಬೆಳಗಾವಿಯ ಬಿಜೆಪಿ ನಾಯಕರ ಈ ಕೋರಿಕೆಯನ್ನು ಬಿಜೆಪಿ ಹೈಕಮಾಂಡ್ ಎಷ್ಟರ ಮಟ್ಟಿಗೆ ಒಪ್ಪುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಮೊದಲ ಹಂತದಲ್ಲಿ ಇಂಥ ಪ್ರಸ್ತಾವನೆಯನ್ನು ಸ್ವೀಕರಿಸಿರುವ ಹೈಕಮಾಂಡ್ ಅಂತಿಮವಾಗಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲವೂ ಅವಲಂಬಿತವಾಗಿದೆ.
ಈ ವಿಚಾರ ರಾಜ್ಯ ಕೋರ್ ಕಮಿಟಿ ಸಭೆಯಲ್ಲೂ ಚರ್ಚೆಗೆ ಒಳಗಾಗಿದೆ ಎನ್ನಲಾಗಿದ್ದು, ಇದಕ್ಕೆ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಇಬ್ಬರೂ ಆಕ್ಷೇಪ ವ್ಯಕ್ತಪಡಿಸಿಸಿದ್ದಾರೆ ಎನ್ನಲಾಗಿದೆ. ಸತೀಶ್ ಜಾರಕಿಹೊಳಿ ಅವರು ಕಣಕ್ಕಿಳಿಯುವ ಯಮಕನಮರಡಿ ಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿ ಇಲ್ಲವೇ ರಮೇಶ್ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಬೇಕು ಎನ್ನುವುದು ಅವರ ಪ್ಲ್ಯಾನ್.
ಯಮಕನಮರಡಿ ಮೀಸಲು ಕ್ಷೇತ್ರವಾಗಿದ್ದು, ಅದನ್ನು ಗೆಲ್ಲಬೇಕು. ಇಲ್ಲಿ ಮೀಸಲು ಅಭ್ಯರ್ಥಿಗಳೇ ಆಗಿರುವ ಬಾಲಚಂದ್ರ ಜಾರಕಿಹೊಳಿ ಇಲ್ಲವೇ ರಮೇಶ್ ಜಾರಕಿಹೊಳಿ ನಿಲ್ಲಬೇಕು. ಈಗ ರಮೇಶ್ ಜಾರಕಿಹೊಳಿ ಅವರು ಪ್ರತಿನಿಧಿಸುತ್ತಿರುವ ಗೋಕಾಕ್ ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ಸ್ಪರ್ಧಿಸುತ್ತಿರುವ ಅರಭಾವಿ ಕ್ಷೇತ್ರ ಜನರಲ್ ಕ್ಷೇತ್ರಗಳಾಗಿದ್ದು, ಇಲ್ಲಿ ಜನರಲ್ ಅಭ್ಯರ್ಥಿಗಳನ್ನೇ ನಿಲ್ಲಲು ಅವಕಾಶ ನೀಡಬೇಕು ಎನ್ನುವುದು ಬಿಜೆಪಿ ನಿಲುವು ಎನ್ನಲಾಗಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೆಳಗಾವಿಯ ಕ್ಷೇತ್ರಗಳ ಟಿಕೆಟ್ ವಿಚಾರದಲ್ಲಿ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ತಲೆ ಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : Karnataka Election: ಮಂಗಳವಾರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಬಿ.ಎಸ್.ಯಡಿಯೂರಪ್ಪ