Site icon Vistara News

Karnataka Elections 2023 : 2ನೇ ಇನಿಂಗ್ಸ್‌ ಕೊಪ್ಪಳದಲ್ಲಿ ಶುರು; ಗಂಗಾವತಿಯ ಮತದಾರರ ಪಟ್ಟಿ ಸೇರಿಕೊಂಡ ಗಾಲಿ ಜನಾರ್ದನ ರೆಡ್ಡಿ

Janardhana Reddy

#image_title

ಗಂಗಾವತಿ (ಕೊಪ್ಪಳ):- ತಮ್ಮ ರಾಜಕೀಯ ಬದುಕಿನ ಎರಡನೇ ಇನಿಂಗ್ಸ್‌ನ್ನು ಕೊಪ್ಪಳ ಜಿಲ್ಲೆಯಲ್ಲಿ ಆರಂಭಿಸಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಗಂಗಾವತಿಯ ಮತದಾರರ ಪಟ್ಟಿಯಲ್ಲಿ (Karnataka Elections 2023) ಸೇರ್ಪಡೆಯಾಗಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಆರ್ ಪಿಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಜನಾರ್ದನ ರೆಡ್ಡಿ ಗಂಗಾವತಿಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಗಂಗಾವತಿ ವಿಧಾನಸಭಾ ಕ್ಷೇತ್ರ-62 ರ ಪರಿಷ್ಕೃತ ಮತದಾರರ ಪಟ್ಟಿ ಬಿಡುಗಡೆಯಾಗಿದ್ದು ಇದರಲ್ಲಿ ರೆಡ್ಡಿಗೆ ಉಪ್ಪಿನಮಾಳಿ ಕ್ಯಾಂಪ್-ಮಾರುತೇಶ್ವರ ನಗರದ ಮತಗಟ್ಟೆಯ ವ್ಯಾಪ್ತಿಯಲ್ಲಿ ಹೆಸರು ಸೇರ್ಪಡೆ ಮಾಡಲಾಗಿದೆ.

ಗಂಗಾವತಿ ನಗರದ ಕನಕಗಿರಿ ರಸ್ತೆಯಲ್ಲಿನ ಕ್ರಿಯೇಟಿವ್ ಪಾರ್ಕ್‌ನಲ್ಲಿರುವ ಮನೆಯ ವಿಳಾಸವನ್ನೇ ಮತದಾರರ ಪಟ್ಟಿಗೆ ಸೇರ್ಪಡೆಗೆ ನೀಡಿದ್ದಾರೆ. ರೆಡ್ಡಿಯ ಜೊತೆಗೆ ತಮ್ಮ ಆಪ್ತ ಅಲಿ ಖಾನ್ ಅವರ ಹೆಸರೂ ಗಂಗಾವತಿಯ ಮತದಾರರ ಪಟ್ಟಿಯಲ್ಲಿ ಸೇರಿಸಿದ್ದಾರೆ.

ಅಚ್ಚರಿ ಎಂದರೆ ಜನಾರ್ದನರೆಡ್ಡಿ ಮತ್ತು ಆಪ್ತಸಹಾಯಕ ಅಲಿಖಾನ ಇಬ್ಬರೂ ಒಂದೇ ಮನೆಯ ಸಂಖ್ಯೆ-2-9-81/12 ಎಂಬ ವಿಳಾಸವನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ನೀಡಿದ್ದಾರೆ. ಜನಾರ್ದನ ರೆಡ್ಡಿ ಮತ್ತು ಆಪ್ತ ಅಲಿಖಾನ್ ಗೆ ಇಲಾಖೆಯಿಂದ ನೀಡಲಾಗಿರುವ ಮತದಾರರ ಚೀಟಿಯಲ್ಲಿ ಸಿಬ್ಬಂದಿಗಳಿಂದ ಕಾಗುಣಿತದ ದೋಷವಾಗಿರುವುದು ಕಾಣುತ್ತಿದೆ.

ಜನಾರ್ದನ ರೆಡ್ಡಿ ಅವರ ತಂದೆ ಹೆಸರು ಜಿ. ಚೆಂಗಾರೆಡ್ಡಿ. ಆದರೆ ಒಂದು ಕಡೆ ಚಂಗ ರೆಡ್ಡಿ ಎಂದು ಮತ್ತೊಂದು ಕಡೆ ಚಂಗರೇದ್ದೀ ಎಂದು ಬರೆಯಲಾಗಿದೆ. ಮತ್ತೊಂದು ಕಡೆ ರೆಡ್ಡಿ ಆಪ್ತ ಅಲಿಖಾನ್ ಅವರ ಹೆಸರಲ್ಲೂ ಇದೇ ಮರುಕಳಿಸಿದೆ. ಅಲಿಖಾನ್ ಅವರ ಹೆಸರನ್ನು ಒಂದು ಕಡೆ ಕೆ. ಮೆಹಪೂಜ್ ಅಲಿಖಾನ್ ಎಂದು ಸರಿಯಾಗಿ ನಮೂದಿಸಿದರೆ ಮತ್ತೊಂದು ಕಡೆ ಆಲೀಖನ್ ಎಂದು ಬರೆಯಲಾಗಿದೆ. ಇವರ ತಂದೆ ಹೆಸರು ಕೆ. ಇಕ್ಬಾಲ್ ಇದ್ದರೆ ಮತದಾರರ ಪಟ್ಟಿಯಲ್ಲಿ ಖೆ ಇಕ್ಬಲ್ ಎಂದು ನಮೂದಿಸಲಾಗಿದೆ. ಈ ಕಾಗುಣಿತ ದೋಷಗಳು ಎದ್ದು ಕಾಣುತ್ತಿದೆ.

ಗಣಿ ಹಗರಣಕ್ಕೆ ಸಂಬಂಧಿಸಿ ಬಳ್ಳಾರಿ ಪ್ರವೇಶದ ನಿಷೇಧ ಎದುರಿಸುತ್ತಿರುವ ಗಾಲಿ ಜನಾರ್ದನ ರೆಡ್ಡಿ ಈಗ ಗರಿಷ್ಠ ಎಂದರೆ ಕೊಪ್ಪಳದವರೆಗೆ ಹೋಗಬಹುದು. ಅಲ್ಲಿಂದಲೇ ನಿಂತು ಬಳ್ಳಾರಿ ರಾಜಕಾರಣವನ್ನೂ ನಿಯಂತ್ರಿಸುತ್ತೇನೆ ಎಂದು ಹೊರಟಿರುವ ರೆಡ್ಡಿ ಅವರು ಅಲ್ಲಿನ ಜವಾಬ್ದಾರಿಯನ್ನು ತಮ್ಮ ಪತ್ನಿಗೆ ವಹಿಸಿದ್ದಾರೆ. ಅವರನ್ನು ಬಳ್ಳಾರಿಯ ಅಭ್ಯರ್ಥಿಯಾಗಿಯೂ ಘೋಷಿಸಿದ್ದಾರೆ. ಕಲ್ಯಾಣ ಕರ್ನಾಟಕದ ಆಯ್ದ 35ರಷ್ಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪ್ಲ್ಯಾನ್‌ ಹೊಂದಿರುವ ಜನಾರ್ದನ ರೆಡ್ಡಿ ಅದರಿಂದ ಗೆಲ್ಲಬಹುದಾದ ಬೆರಳೆಣಿಕೆಯ ಸೀಟುಗಳನ್ನೇ ಹಿಡಿದುಕೊಂಡು ರಾಜ್ಯ ರಾಜಕೀಯವನ್ನು ಬೆರಳಲ್ಲಿ ಆಡಿಸುವ ಮಹತ್ವಾಕಾಂಕ್ಷೆಯನ್ನೂ ಹೊಂದಿದ್ದಾರೆ. ಆದರೆ, ಇದು ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಎನ್ನುವುದನ್ನು ಮಾತ್ರ ಮೇ 13ರ ಫಲಿತಾಂಶವೇ ಹೇಳಬೇಕು.

ಇದನ್ನೂ ಓದಿ Pulse of Karnataka: ವಿಸ್ತಾರ-ಅಖಾಡಾ ಸಮೀಕ್ಷೆ: ಕಲ್ಯಾಣ ಕರ್ನಾಟಕ: ಗಣಿ ರೆಡ್ಡಿ ಪಕ್ಷದ ಭವಿಷ್ಯವೇನು? ಇದು ಬಿಜೆಪಿಗೆ ಹೆಚ್ಚು ನಷ್ಟ ತರುತ್ತದೆಯೇ?

Exit mobile version