Site icon Vistara News

Karnataka Elections : ಜೆಡಿಎಸ್‌ಗೆ ಹೊಡೆತ; ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ದೆಹಲಿಯಲ್ಲಿ ಬಿಜೆಪಿ ಸೇರ್ಪಡೆ

AT Ramaswamy joins BJP

#image_title

ಬೆಂಗಳೂರು: ಜೆಡಿಎಸ್‌ನ ಗಟ್ಟಿ ನೆಲವಾದ ಹಾಸನದಲ್ಲಿ ತೆನೆ ಪಕ್ಷಕ್ಕೆ ಆಘಾತ ಎದುರಾಗಿದೆ. ಅರಕಲಗೂಡಿನ ಜೆಡಿಎಸ್‌ ಶಾಸಕರಾಗಿದ್ದ ಎ.ಟಿ. ರಾಮಸ್ವಾಮಿ (AT Ramaswamy) ಅವರು ಜೆಡಿಎಸ್‌ ಬಿಟ್ಟು ಬಿಜೆಪಿ ಪಾಳಯ ಸೇರಿದ್ದಾರೆ. ಅವರು ಶುಕ್ರವಾರ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದು, ಶನಿವಾರ ದಿಲ್ಲಿಗೆ ಪಯಣಿಸಿ ಬಿಜೆಪಿ ಪ್ರಧಾನ ಕಚೇರಿಯಲ್ಲೇ ಕಮಲ ಪಕ್ಷ ಸೇರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜೆಡಿಎಸ್‌ನಿಂದ ಮಾನಸಿಕವಾಗಿ ದೂರವಾಗಿದ್ದ ಅವರು ಪಕ್ಷ ಬಿಡುವುದು ಖಚಿತವಾಗಿತ್ತು. ಒಂದು ಹಂತದಲ್ಲಿ ಕಾಂಗ್ರೆಸ್‌ ಪಕ್ಷ ಸೇರಬಹುದು ಎಂಬ ಚರ್ಚೆ ಇತ್ತಾದರೂ ಅಂತಿಮವಾಗಿ ಅವರು ಬಿಜೆಪಿ ತೆಕ್ಕೆಗೆ ಬಿದ್ದಿದ್ದಾರೆ.

ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸೇರ್ಪಡೆ ಪಕ್ಷ ಸೇರಿದ ಅವರನ್ನು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಧ್ವಜ ಕೊಟ್ಟು ಬರಮಾಡಿಕೊಂಡರು. ಬಿಜೆಪಿ ಸದಸ್ಯತ್ವದ ರಸೀದಿ, ಶಾಲು ಹೋದಿಸಿ ಪಕ್ಷಕ್ಕೆ ಸ್ವಾಗತಿಸಲಾಯಿತು.

ಎ.ಟಿ. ರಾಮಸ್ವಾಮಿ ಅವರನ್ನು ಸ್ವಾಗತಿಸಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು, ರಾಮಸ್ವಾಮಿ ಅವರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ದೇಶದ ಅತಿದೊಡ್ಡ ಪಕ್ಷವನ್ನು ಸೇರಿದ್ದಾರೆ. ಅವರ ಸೇರ್ಪಡೆಯಿಂದ ಬಿಜೆಪಿಗೂ ಶಕ್ತಿ ಸಿಗಲಿದೆ ಎಂದರು. ನಾಲ್ಕು ಬಾರಿ ಶಾಸಕರಾಗಿರುವ ಎ.ಟಿ. ರಾಮಸ್ವಾಮಿ ಅವರು ನಮ್ಮ ಪಕ್ಷ ಸೇರಿದ ಮೇಲೆಯೂ ಉತ್ತಮ ಕೆಲಸಗಳನ್ನು ಮುಂದುವರಿಸಲಿ ಎಂದು ಅವರು ಹೇಳಿದರು.

ಶಾಸಕ ಸ್ಥಾನದ ಆಕಾಂಕ್ಷಿ ಅಲ್ಲ ಎಂದ ಎ.ಟಿ. ರಾಮಸ್ವಾಮಿ

ʻʻʻಬಿಜೆಪಿಗೆ ಸೇರ್ಪಡೆಯಾಗುತ್ತಿರುವುದು ಖುಷಿಯ ಸಂಗತಿ. ನರೇಂದ್ರ ಮೋದಿ, ಬಿಎಸ್ ಯಡಿಯೂರಪ್ಪ, ಬೊಮ್ಮಾಯಿ ಸೇರಿ ಹಲವು ನಾಯಕರ ಜೊತೆ ಕೆಲಸ ಮಾಡುವುದು ಖುಷಿ ಸಂಗತಿ. ಯಾವುದೇ ಷರತ್ತುಗಳು ಇಲ್ಲದೆ ನಾನು ಸೇರ್ಪಡೆಯಾಗಿದ್ದೇನೆ. ನಾನು ಟಿಕೆಟ್‌ ಆಕಾಂಕ್ಷಿ ಅಲ್ಲ. ನಾನು ಯಾವುದೇ ಕಂಡೀಶನ್ ಹಾಕಿ ಬಿಜೆಪಿಗೆ ಬಂದಿಲ್ಲʼʼ ಎಂದು ಬಿಜೆಪಿ ಸೇರಿದ ಬಳಿಕ ಎ.ಟಿ. ರಾಮಸ್ವಾಮಿ ಹೇಳಿದರು.

ʻʻಅತ್ಯಂತ ಸಂತೋಷದಿಂದ ನಾನು ಇವತ್ತು ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ. ಇವತ್ತು ಸಂಜೆ ಮತ್ತೆ ನಾಳೆ ಬೆಳಿಗ್ಗೆ ಪ್ರಧಾನಿ ಮೋದಿಯವರು ಹಾಗೂ ಗೃಹ ಸಚಿವ ಅಮಿತ್‌ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡುತ್ತೇನೆʼʼ ಎಂದರು.

ʻʻನನಗೆ ಬಹಳ ಸಂತೋಷ ಆಗುತ್ತಿದೆ. ಯಾಕೆಂದರೆ, ನಮ್ಮ ಭಾರತ ರಾಷ್ಟ್ರ ಇಡೀ ವಿಶ್ವದಲ್ಲಿ ದಾಪುಗಾಲು ಹಾಕುತ್ತಿದೆ. ಇದ್ಕೆ ಕಾರಣ ಮೋದಿ ಹಾಗೂ ಬಿಜೆಪಿ ಪಕ್ಷʼʼ ಎಂದರು.

ʻʻನಾನು 2006-07ರಲ್ಲಿ ಭೂಗಳ್ಳರ ವಿರುದ್ಧ ವರದಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಬೆಂಗಳೂರು ಸುತ್ತ ಮುತ್ತ 41000 ಎಕರೆ ಭೂ ಗಳ್ಳರು ನಖಲಿ ದಾಖಲೆ ಸೃಷ್ಟಿ ಮಾಡಿದ್ದರು. ಸರ್ಕಾರಿ ಜಮೀನನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಂಡಿದ್ದರು. ಇವೆಲ್ಲಾ ಬಡವರು, ಸಾಮಾನ್ಯ ಜನರಿಂದ ಸಾಧ್ಯವಿಲ್ಲ. ಇದರ ಹಿಂದೆ ದೊಡ್ಡವರ ಹಾಗೂ ಅಧಿಕಾರಿಗಳ ಕೈವಾಡ ಇದೆʼʼ ಎಂದು ಹೇಳಿದ ಅವರು, ಯಾವತ್ತೂ ಸಹ ನನ್ನ ವೈಯಕ್ತಿಕ ಜೀವನಕ್ಕೇ ಏನೂ ಮಾಡಿಲ್ಲ. ಸಮಾಜಕ್ಕಾಗಿ ದುಡಿದಿದ್ದೇನೆ ಎಂದರು.

ನಾಲ್ಕು ಬಾರಿ ಗೆಲುವು ಸಾಧಿಸಿದ ಎ.ಟಿ.ರಾಮಸ್ವಾಮಿ

ಎ.ಟಿ. ರಾಮಸ್ವಾಮಿ ಅವರಿಗೆ ಈಗ 71 ವರ್ಷ. ಅರಕಲಗೂಡು ತಾಲೂಕು ಪಂಚಾಯಿತಿ ಸದಸ್ಯರಾಗಿ ರಾಜಕೀಯ ಆರಂಭಿಸಿದ ಅವರು, ಬಳಿಕ ನಾಲ್ಕು ಬಾರಿ ಶಾಸಕರಾಗಿದ್ದಾರೆ. 1989, 1994ರಲ್ಲಿ ಅರಕಲಗೂಡು ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಅವರು ಮುಂದೆ ಜೆಡಿಎಸ್‌ ಸೇರಿದ್ದರು. 2004 ಮತ್ತು 2018ರಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದರು.

ದಾಖಲೆಗಳ ಅಧ್ಯಯನ ಮತ್ತು ಕರಾರುವಕ್‌ ಮಂಡನೆಗೆ ಹೆಸರಾಗಿರುವ ಎ.ಟಿ. ರಾಮಸ್ವಾಮಿ ಅವರು ಭೂ ಒತ್ತುವರಿ ಅಧ್ಯಯನ ಸಮಿತಿಯ ಅಧ್ಯಕ್ಷರಾಗಿದ್ದರು. ಅವರು ಸಲ್ಲಿಸಿದ ವರದಿ ಭಾರಿ ಜನಪ್ರಿಯವಾಗಿದೆ.

ಇದನ್ನೂ ಓದಿ : Karnataka Election: ಜೆಡಿಎಸ್‌, ಬಿಜೆಪಿಯ ತಲಾ ಒಂದು ವಿಕೆಟ್‌ ಪತನ: A.T. ರಾಮಸ್ವಾಮಿ, N.Y. ಗೋಪಾಲಕೃಷ್ಣ ರಾಜೀನಾಮೆ

Exit mobile version