Site icon Vistara News

Karnataka Elections : ಕೋಲಾರ ಸೇಫಲ್ಲ ಎಂದ ರಾಹುಲ್‌; ಗೆಲ್ಲಿಸ್ತೀವಿ ಎಂದ ಕೈ ನಾಯಕರು, ಸೋಮವಾರ ಫೈನಲ್‌ ಎಂದ ಸಿದ್ದು

siddaramaiah

#image_title

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಲು ಬಯಸಿರುವ (Karnataka Elections) ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ತಲುಪಿದೆ. ಇದೇ ಕಾರಣಕ್ಕಾಗಿ ಅವರು ಕೋಲಾರದಿಂದ ವರುಣಾಗೆ ಶಿಫ್ಟ್‌ ಆಗಿ ಎಂಬ ಸಲಹೆ ನೀಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.

ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಿದ ಮರಳಿದ ಸಿದ್ದರಾಮಯ್ಯ ಅವರು ಶನಿವಾರ ಬೆಂಗಳೂರಿನಲ್ಲಿ ಕೋಲಾರದ ಕಾಂಗ್ರೆಸ್‌ ನಾಯಕರ ಜತೆ ಸಭೆ ನಡೆಸಿದರು. ಈ ವೇಳೆ ಅವರು ರಾಹುಲ್‌ ಆಡಿದ ಮಾತುಗಳನ್ನೂ ಉಲ್ಲೇಖ ಮಾಡಿದ್ದಾರೆ. ಕೋಲಾರ ಕಾಂಗ್ರೆಸ್‌ನಲ್ಲಿರುವ ಒಳಜಗಳದ ಬಗ್ಗೆ ಗಮನ ಸೆಳೆದಿದ್ದನ್ನೂ ಹೇಳಿದರು. ಆಗ ಕೋಲಾರ ನಾಯಕರು ʻಎಲ್ಲ ಸರಿ ಹೋಗಿದೆ ಬನ್ನಿ ಸರ್‌ʼ ಎಂದು ಮನವೊಲಿಸಿದರು. ಆದರೆ, ಸಿದ್ದರಾಮಯ್ಯ ಅವರು ಸೋಮವಾರ ಬೆಳಗಾವಿಯಲ್ಲಿ ರಾಹುಲ್‌ ಗಾಂಧಿ ಅವರ ಜತೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಿ ಫೈನಲ್‌ ಮಾಡುವುದಾಗಿ ಹೇಳಿದ್ದಾರೆ.

ಕೋಲಾರ ಕಾಂಗ್ರೆಸ್‌ ನಾಯಕರ ಬಗ್ಗೆ ಹೈಕಮಾಂಡ್‌ನಲ್ಲಿ ಅಸಮಾಧಾನ ಇದೆ ಎಂಬ ಬಗ್ಗೆ ಸಿದ್ದರಾಮಯ್ಯ ಅವರು ಸಭೆಯಲ್ಲಿ ಗಮನ ಸೆಳೆದರು ಎನ್ನಲಾಗಿದೆ. ಚುನಾವಣಾ ಸಮಿತಿ ಸಭೆಯ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ʻಕೋಲಾರ ಕಾಂಗ್ರೆಸ್ ಬಗ್ಗೆ ನೆಗೆಟಿವ್ ರಿಪೋರ್ಟ್ ಇದೆ. ರಮೇಶ್ ಕುಮಾರ್, ಮುನಿಯಪ್ಪ ಬಣಗಳ ನಡುವೆ ಗದ್ದಲ ಕಡಿಮೆ ಆಗುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ನಿವು ಹೀಗಾಗಿ ಸೇಫ್ ಆಗಿರುವ ಕ್ಷೇತ್ರಕ್ಕೆ ಹೋಗಿʼʼ ಎಂದು ಹೇಳಿದರು ಎನ್ನಲಾಗಿದೆ.

ರಾಹುಲ್ ಹೇಳಿದ ವಿಚಾರಗಳನ್ನು ಸಿದ್ದರಾಮಯ್ಯ ಅವರು ಕೋಲಾರ ನಾಯಕರ ಮುಂದೆ ಹೇಳಿದ್ದಾರೆ. ಆಗ ಕೋಲಾರ ಕಾಂಗ್ರೆಸ್‌ ನಾಯಕರು, ʻʻಇಲ್ಲ, ಎಲ್ಲ ಸರಿ ಹೋಗಿದೆ ಬನ್ನಿ ಸರ್ʼ ಎಂದು ಹೇಳಿದ್ದಾರೆ. ಸೋಮವಾರ ಮತ್ತೊಮ್ಮೆ ರಾಹುಲ್ ಜತೆ ಚರ್ಚೆ ಮಾಡಿ ನಿರ್ಧಾರ ಪ್ರಕಟಿಸುವುದಾಗಿ ಸಿದ್ದರಾಮಯ್ಯ ತಿಳಿಸಿದರು ಎನ್ನಲಾಗಿದೆ.

ಕೋಲಾರದಿಂದಲೇ ಸ್ಪರ್ಧಿಸುವಂತೆ ಮನವೊಲಿಕೆ

ಸಿದ್ದರಾಮಯ್ಯ ಅವರು ಕೋಲಾರ ಕಾಂಗ್ರೆಸ್‌ ನಾಯಕರ ಜತೆ ಮಾತುಕತೆ ನಡೆದ ಬಳಿಕ ಹಿರಿಯ ನಾಯಕ ಎಂ.ಆರ್‌. ಸೀತಾರಾಂ ಅವರು ಹೇಳಿಕೆ ನೀಡಿ, ʻʻಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ಬೇಕು ಅನ್ನೋ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡ್ತದೆ ಎಂದು ಸಿದ್ದರಾಮಯ್ಯ ಹೇಳುತ್ತಾ ಬಂದಿದ್ದಾರೆ. ರಾಹುಲ್ ಗಾಂಧಿ ಹಾಗೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ನಮಗೂ ಹೇಳಿದ್ದಾರೆ. ಕೋಲಾರದಲ್ಲಿ ಸ್ಪರ್ಧೆ ಮಾಡುವುದಾಗಿ ಹೈಕಮಾಂಡ್‌ಗೆ ಹೇಳಬೇಕು ಎಂದು ನಾವೂ ಮನವಿ ಮಾಡಿದ್ದೇವೆ. ಕೋಲಾರ ಸ್ಪರ್ಧೆ ಸುರಕ್ಷಿತ ಎಂದು ನಾವು ಅವರಲ್ಲಿ ಹೇಳಿದ್ದೇವೆ. ನೀವು ನಾಮಪತ್ರ ಸಲ್ಲಿಕೆ ಮಾಡಿ, ನಾವು ನೋಡಿಕೊಳ್ಳುತ್ತೇವೆ ಎಂದಿದ್ದೇವೆ. ಮತ್ತೊಮ್ಮೆ ಹೈಕಮಾಂಡ್ ಬಳಿ ಮಾತನಾಡಿ ಎಂದು ಮನವಿ ಮಾಡಿದ್ದೇವೆʼʼ ಎಂದರು ಹೇಳಿದರು.

ʻʻಸಿದ್ದರಾಮಯ್ಯ ಅವರಿಗೆ ಕೋಲಾರದ ಮೇಲೆ ಈಗಲೂ ವಿಶ್ವಾಸ ಇದೆ. ಆದರೆ ಅರ್ಜಿಯಲ್ಲಿ ಕ್ಷೇತ್ರ ಆಯ್ಕೆ ಹೈಕಮಾಂಡ್ ಗೆ ಬಿಟ್ಟಿದ್ದು ಎಂದಿದ್ದಾರೆ. ರಾಹುಲ್ ಗಾಂಧಿ ಅವರನ್ನು ಈ ಸಂಬಂಧ ಭೇಟಿ ಮಾಡುತ್ತೇವೆ. ನಾವೆಲ್ಲಾ ಬೆಳಗಾವಿಗೆ ಹೋಗಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತೇವೆʼʼ ಎಂದು ಹೇಳಿದ ಅವರು, ʻʻಕ್ಷೇತ್ರ ಹದವಾಗಿದೆ. ಈ ಕಾರಣಕ್ಕೆ ಕೋಲಾರದಲ್ಲಿ ಸ್ಪರ್ಧೆ ಮಾಡಿ ಎಂದು ಮನವಿ ಮಾಡಿದ್ದೇವೆʼʼ ಎಂದರು.

ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆದ ಕೋಲಾರ ಕಾಂಗ್ರೆಸ್‌ ನಾಯಕರ ಸಭೆಯಲ್ಲಿ ನಸೀರ್ ಅಹಮದ್, ಅನಿಲ್ ಕುಮಾರ್, ಎಂ.ಆರ್ ಸೀತಾರಾಂ ಮತ್ತಿತರರು ಭಾಗವಹಿಸಿದ್ದರು.

Exit mobile version