ಸೊರಬ (ಶಿವಮೊಗ್ಗ): ಸೊರಬದ ಹಾಲಿ ಬಿಜೆಪಿ ಶಾಸಕ ಎಸ್. ಕುಮಾರ್ ಬಂಗಾರಪ್ಪ ಅವರು ಏ.17ರಂದು ಬೆಳಿಗ್ಗೆ 11 ಗಂಟೆಗೆ ಬೆಂಬಲಿಗರೊಂದಿಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ತಿಳಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ತಾಲೂಕಿನ 239 ಬೂತ್‌ಗಳಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿ ಪಕ್ಷ ಸಂಘಟಿಸಲಾಗಿದೆ. ನಾಮಪತ್ರ ಸಲ್ಲಿಸಲು ಪೂರ್ವಭಾವಿಯಾಗಿ ಕ್ಷೇತ್ರದ ಎಲ್ಲಾ ಮಹಾಶಕ್ತಿ ಕೇಂದ್ರದಲ್ಲಿ ಸಭೆ ನಡೆಸಲಾಗಿದೆ. ನಾಮಪತ್ರ ಸಲ್ಲಿಸುವ ದಿನದಂದು ಅಧಿಕ ಸಂಖ್ಯೆಯಲ್ಲಿ ಜನರನ್ನು ಕರೆ ತರುವ ಬಗ್ಗೆ ಮಾಹಿತಿ ನೀಡಲಾಗಿದೆ. ಪಕ್ಷದ ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಫಲಾನುಭವಿಗಳು ಹಾಗೂ ಮತದಾರರು ಸಾವಿರಾರು ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇದೆ ಎಂದರು.
ಸೋಮವಾರ ಬೆಳಗ್ಗೆ 10ಕ್ಕೆ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮುಖ್ಯ ರಸ್ತೆ ಮಾರ್ಗವಾಗಿ ಮೆರವಣಿಗೆ ಮೂಲಕ ತಾಲೂಕು ಕಚೇರಿವರೆಗೆ ತೆರಳಿ ನಾಮಪತ್ರ ಸಲ್ಲಿಸಲಾಗುವುದು.
ಕ್ಷೇತ್ರದಲ್ಲಿ ನಡೆಯುವ ಪ್ರಚಾರ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ರಾಜ್ಯ ಮತ್ತು ಕೇಂದ್ರದಿಂದ ಅನೇಕ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಮತಯಾಚನೆ ಮಾಡಲಿದ್ದೇವೆ ಎಂದರು.
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕುಮಾರ್ ಸೂಚನೆ
ಶಾಸಕ ಕುಮಾರ್ ಬಂಗಾರಪ್ಪ ಅವರು ಚುನಾವಣಾ ಪ್ರಚಾರದ ನಡುವೆಯೂ ಅಧಿಕಾರಿಗಳ ಜೊತೆ ಮಾತನಾಡಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ ಹಾಗೂ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆದ್ಯತೆ ಮೇರೆಗೆ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದ್ದಾರೆ. ಕುಡಿಯುವ ನೀರು, ವಿದ್ಯುತ್ ಒದಗಿಸಲು ಚುನಾವಣಾ ನೀತಿ ಸಂಹಿತೆ ಅನ್ವಯಿಸುವುದಿಲ್ಲ. ಅಧಿಕಾರಿಗಳು ಅಗತ್ಯವಿರುವ ಭಾಗಗಳಲ್ಲಿ ಕೂಡಲೇ ಕೊಳವೆ ಬಾವಿ ಕೊರೆಸಿ ಪರಿಹಾರ ಕಾರ್ಯಕ್ಕೆ ಮುಂದಾಗಬೇಕು ಎಂದು ತಿಳಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಉಪಾಧ್ಯಕ್ಷ ದೇವೇಂದ್ರಪ್ಪ ಚನ್ನಾಪುರ, ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಕಡಸೂರು, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಎಂ.ಡಿ. ಉಮೇಶ್, ಅಶೋಕ ಶೇಟ್, ಗುರುಕುಮಾರ್ ಪಾಟೀಲ್, ಪರಶುರಾಮಪ್ಪ, ಪ್ರಭು, ಜಾನಕಪ್ಪ, ಕನಕದಾಸ, ರಮೇಶ್ ಕೊರಕೋಡು, ಓಂಕಾರಪ್ಪ, ಶಿವು, ಕೃಷ್ಣಮೂರ್ತಿ ಇತರರಿದ್ದರು.
ಇದನ್ನೂ ಓದಿ : Karnataka Elections : ರಾಜನಂದಿನಿ ಬಿಜೆಪಿ ಸೇರ್ಪಡೆಯಿಂದ ಪರಿಣಾಮವಿಲ್ಲ ಎಂದ ಮಧು ಬಂಗಾರಪ್ಪ, ತಮ್ಮನ ಪರ ನಿಂತ ಬಂಗಾರಪ್ಪ ಹಿರಿಯ ಪುತ್ರಿ