ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಘೋಷಣೆಗೂ ಮೊದಲೇ ಬಂಡಾಯ ಸ್ಫೋಟಗೊಂಡಿದೆ. ಯಾವ ಕಾರಣಕ್ಕೂ ನಿವೇದಿತ್ ಆಳ್ವಾ ಅವರಿಗೆ ಟಿಕೆಟ್ ಕೊಡಬಾರದು, ಕೊಟ್ಟರೆ ಬಂಡಾಯ ಗ್ಯಾರಂಟಿ ಎಂದು ಯುವ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಮಾಜಿ ರಾಜ್ಯಪಾಲರು, ಹಿರಿಯ ಕಾಂಗ್ರೆಸ್ ನಾಯಕಿಯೂ ಆಗಿರುವ ಮಾರ್ಗರೆಟ್ ಆಳ್ವಾ ಅವರ ಪುತ್ರನಾಗಿರುವ ನಿವೇದಿತ್ ಆಳ್ವಾ ಅವರಿಗೆ ಕುಮಟಾ ಟಿಕೆಟ್ ನೀಡುವ ಪ್ರಸ್ತಾವನೆ ಇದೆ ಎಂಬುದು ತಿಳಿಯುತ್ತಲೇ ಯುವ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್‌ಗಳು ಸೇರಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದವು.
ಹಳದಿಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸಂದೇಶ್ ಶೆಟ್ಟಿ ಅವರು, ಕ್ಷೇತ್ರಕ್ಕೆ ಟಿಕೆಟ್ ಬಯಸಿ ಅರ್ಜಿ ಹಾಕದೆ ಇರುವ ಹೊರಗಿನವರಿಗೆ ಟಿಕೆಟ್ ನೀಡಿದರೆ, ಕಾಂಗ್ರೆಸ್ ಪಕ್ಷಕ್ಕೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿಯೂ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಡುತ್ತೇವೆ ಎಂದು ಹೇಳಿದರು.
ʻʻಕಾಂಗ್ರೆಸ್ ಪಕ್ಷಕ್ಕೆ ಯುವ ಕಾಂಗ್ರೆಸ್ ಅಧ್ಯಕ್ಷ ಬೇಕೇ ಹೊರತು ನನಗೆ ಹುದ್ದೆ, ಪಕ್ಷ ಬೇಕೆಂದಿಲ್ಲ. ಅಧ್ಯಕ್ಷ ಹುದ್ದೆಯಿಂದ ತೆಗೆಯುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದ್ದು, ರಾಜೀನಾಮೆ ಪತ್ರ ಕಿಸೆಯಲ್ಲಿಟ್ಟು ತಿರುಗಾಡುತ್ತಿದ್ದೇನೆ. ಅಂತಹ ಸಂದರ್ಭ ಬಂದರೆ ನಾನು ಒಬ್ಬನೇ ರಾಜೀನಾಮೆ ಕೊಡುವುದಿಲ್ಲ. ನನ್ನ ಜೊತೆ ಇರುವ ಎಲ್ಲ ಸಮೂಹದವರು ರಾಜೀನಾಮೆ ಕೊಡುತ್ತಾರೆ. ಇದನ್ನೆಲ್ಲಾ ವಿರೋಧಿಸಿದರೆ ನಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎನ್ನುವ, ಬೆದರಿಕೆ ಕರೆಗಳು ಬರುತ್ತಿದೆ. ನಾವು ಪಕ್ಷವನ್ನು ಯಾವತ್ತೂ ವಿರೋಧ ಮಾಡೋದಿಲ್ಲ. ಆದರೆ ಪಕ್ಷ ಶಿಸ್ತನ್ನು ಬಿಟ್ಟು ಹೊರಗಿನವರಿಗೆ ಟಿಕೇಟ್ ಕೊಟ್ಟರೆ ನಾವು ಪಕ್ಷದ ವಿರುದ್ಧ ಕೆಲಸ ಮಾಡಬೇಕಾಗುತ್ತದೆʼʼ ಎಂದು ಹೇಳಿದರು.
ಗಣಪತಿ ಮೇಸ್ತ ಅವರು ಮಾತನಾಡಿ, ಪರೇಶ್ ಮೇಸ್ತ ಹತ್ಯೆಯಾದಾಗ ಈ ಕೃತ್ಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಕೊಲೆಗಡುಕರಂತೆ ಬಿಂಬಿಸಿದಾಗ ಧೈರ್ಯದಿಂದ ಎದುರಿಸಿದ್ದು ನಾವು. ಅಂತಹ ಸಂದರ್ಭದಲ್ಲೂ ನಾವು ಎಲ್ಲಾ ಕಾರ್ಯಕರ್ತರು ಪಕ್ಷದ ಪರವಾಗಿ ನಿಂತಿದ್ದೇವೆ. ಯಾವೊಬ್ಬ ರಾಜ್ಯ ನಾಯಕರು, ರಾಷ್ಟ್ರ ನಾಯಕರು ಕೂಡ ಇಲ್ಲಿ ಬರಲಿಲ್ಲ. ಇದೀಗ ಹೊರಗಿನವರಿಗೆ ಟಿಕೆಟ್ ನೀಡಿದರೆ ಬಲವಾದ ವಿರೋಧವಿದೆ ಎಂದರು.
ಚಂದಾವರ ಗ್ರಾಮ ಪಂಚಾಯತಿ ಸದಸ್ಯ ಇಮಾಮ್ ಗಣಿ ಸಾಬ ಮಾತನಾಡಿ, ಬಿಜೆಪಿ ವೈಫಲ್ಯಗಳು ಹಾಗು ನಮ್ಮ ಪಕ್ಷದ ಹಿರಿಯರು ಕೊಟ್ಟಂತಹ ಜನರ ಅಭಿಪ್ರಾಯ ನೋಡಿದಾಗ ನಾವು ನೂರಕ್ಕೆ ನೂರು ಈ ಬಾರಿ ಪಕ್ಷವನ್ನು ಗೆಲ್ಲಿಸಬಹುದು ಎಂಬಂತೆ ಕಾಣುತ್ತಿದೆ. ಐದು ವರ್ಷದಿಂದ ನಮ್ಮ ಹಿರಿಯರು ಟಿಕೆಟ್ ಆಕಾಂಕ್ಷಿಗಳು ಜನರ ಸಮಸ್ಯೆಯನ್ನು ಕುಂದು ಕೊರತೆಯನ್ನು ಹಾಗು ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ. ಅಂತವರಿಗೆ ಪಕ್ಷ ಟಿಕೆಟ್ ಕೊಡಬೇಕು. ಕ್ಷೇತ್ರದ ಹೊರಗಿನವರಿಗೆ ಟಿಕೆಟ್ ಕೊಟ್ಟಾಗ ಕಾರ್ಯಕರ್ತರು ಬೇಸರವಾಗುವುದು ಸಹಜ ಎಂದರು.
ಈ ಸಂದರ್ಭದಲ್ಲಿ ಮುಗ್ವಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೌರಿ ಕೃಷ್ಣ ಅಂಬಿಗ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಮಹೇಶ್, ಕಾಂಗ್ರೆಸ್ ಯಂಗ್ ಬ್ರಿಗೇಡ್ ಅಧ್ಯಕ್ಷ ಅಕ್ಷಯ್ ನಾಯ್ಕ, ಪಕ್ಷದ ಮುಖಂಡರುಗಳಾದ ಮಹೇಶ್ ನಾಯ್ಕ, ಪ್ರವೀಣ ನಾಯ್ಕ, ರವಿ ಮೊಗೇರ್, ನವೀನ್ ನಾಯ್ಕ, ಶ್ರೀನಾಥ್ ಶೆಟ್ಟಿ, ವಸಂತ ಶೆಟ್ಟಿ, ಈಶ್ವರ ಮುಕ್ರಿ, ವಿಷ್ಣು ಸಭಾಹಿತ, ಆರ್. ಕೆ. ಮೇಸ್ತ, ಮೋಹನ್ ಆಚಾರಿ ಮತ್ತಿತರಿದ್ದರು.
ಇದನ್ನೂ ಓದಿ : Karnataka Congress: ಕೆಪಿಸಿಸಿ ಕಚೇರಿಯೆದುರು ವಿಷ ಸೇವಿಸಲು ಮುಂದಾಗ ಕಾರ್ಯಕರ್ತರು: ಕಾಂಗ್ರೆಸ್‌ನಲ್ಲಿ ಬಂಡಾಯದ ಬಿಸಿ