Site icon Vistara News

Karnataka Elections : ಲಕ್ಷ್ಮಣ ಸವದಿ ದೊಡ್ಡ ತಪ್ಪು ಮಾಡಿದಾರೆ, ಮುಂದೆ ಪಶ್ಚಾತ್ತಾಪಪಡುವ ಕಾಲ ಬರಲಿದೆ ಎಂದ ಅರುಣ್‌ ಸಿಂಗ್‌

Arun singh Laxman savadi

#image_title

ಬೆಂಗಳೂರು: ʻಲಕ್ಷ್ಮಣ ಸವದಿ (Laxman savadi) ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರುವ ಮೂಲಕ ಭಾರಿ ದೊಡ್ಡ ತಪ್ಪು ಮಾಡಿದ್ದಾರೆ. ಅವರು ತಮ್ಮ ತಪ್ಪಿಗೆ ಪಶ್ಚಾತ್ತಾಪಪಡುವ ಕಾಲ ಬರಲಿದೆʼʼ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ (Arun singh) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ʻʻಈಗ ಅವರು ಜಗಳಗಂಟ ಪಕ್ಷಕ್ಕೆ ಹೋಗಿದ್ದಾರೆ. ಕಾಂಗ್ರೆಸ್ ನಲ್ಲಿ ಅವರಿಗೆ ಭವಿಷ್ಯ ಇಲ್ಲ. ಹತ್ತು ವರ್ಷ ಆದರೂ ಅವರು ರಾಹುಲ್ ಗಾಂಧಿಯವರ ಮುಖ ನೋಡ್ತಾರೋ ಇಲ್ಲವೋ ಗೊತ್ತಿಲ್ಲʼʼ ಎಂದು ವ್ಯಂಗ್ಯವಾಡಿದರು.

ಅಥಣಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು, ಬಿಜೆಪಿ ಟಿಕೆಟ್‌ ನೀಡದ ಹಿನ್ನೆಲೆಯಲ್ಲಿ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ ಅವರು ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಬಳಿಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಅವರು ಕಾಂಗ್ರೆಸ್‌ ಸೇರ್ಪಡೆಯನ್ನು ಪ್ರಕಟಿಸಿದರು.

ಈ ಎಲ್ಲ ಬೆಳವಣಿಗೆಗಳು ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ಬೆಳಗಾವಿ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ನಿಗಾ ಇಡುವಂತೆ ಹೈಕಮಾಂಡ್‌ ಸೂಚನೆ ನೀಡಿದೆ ಎನ್ನಲಾಗಿದೆ. ಈಗಾಗಲೇ ಟಿಕೆಟ್‌ ನಿರಾಕರಣೆಯಾಗಿರುವ, ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್‌ ಬೆನಕೆ ಅವರು ಕೂಡಾ ಕಾಂಗ್ರೆಸ್‌ ಕಡೆಗೆ ಹೋಗುವ ಸೂಚನೆ ನೀಡಿದ್ದಾರೆ.

ಇದೆಲ್ಲದರ ಬಗ್ಗೆ ಪ್ರತಿಕ್ರಿಯಿಸಿರುವ ಅರುಣ್‌ ಸಿಂಗ್‌ ಅವರು, ಲಕ್ಷ್ಮಣ ಸವದಿ ಅವರು ಇಷ್ಟು ದಿನ ಬಿಜೆಪಿಯಲ್ಲಿದ್ದರು. ಕಾಂಗ್ರೆಸ್ ಗೆ ಸೇರುವ ನಿರ್ಧಾರ ಮಾಡಬಾರದಿತ್ತು. ಅವರು ಚುನಾವಣೆಯಲ್ಲಿ ಸೋತಾಗಲು ಅವರನ್ನು ಎಂಎಲ್‌ಸಿ ಮಾಡಲಾಯಿತು. ಡಿಸಿಎಂ ಕೂಡಾ ಮಾಡಲಾಯಿತು ಎಂದು ನೆನಪಿಸಿದರು.

ಪಕ್ಷಕ್ಕೇನೂ ನಷ್ಟವಿಲ್ಲ ಬಿಡಿ.. ಅವರಿಗೆ ಬಾಗಿಲು ಮುಚ್ಚಲಿದೆ

ಇದರ ಜತೆಗೇ, ʻʻಯಾರೋ ನಾಲ್ಕು ಜನ ಪಕ್ಷ ಬಿಟ್ ಹೋದ್ರೆ ಪಕ್ಷಕ್ಕೆ ಏನೂ ನಷ್ಟ ಆಗಲ್ಲ. ಆದ್ರೆ ಹೋಗೋರು ದುಡುಕಿನ ನಿರ್ಧಾರ ತಗೊಂಡು ಹೋಗಿದಾರೆ. ಅಂಥವರಿಗೆ ನಮ್ಮ ಪಕ್ಷದ ಬಾಗಿಲು ಶಾಶ್ವತವಾಗಿ ಬಂದ್ ಆಗಲಿದೆ. ಪಕ್ಷ ಬಿಟ್ಟು ಹೋದವರನ್ನು ಮತ್ತೆ ಸೇರಿಸಿಕೊಳ್ಳಲು 15-20 ವರ್ಷವಾಗಬಹುದುʼʼ ಎಂದು ಎಚ್ಚರಿಸಿದರು.

ಟಿಕೆಟ್‌ ಭರವಸೆ ನೀಡಿ ಮೋಸ ಮಾಡಿದರು ಎಂದ ಸವದಿ

ಈ ನಡುವೆ, ಬೆಂಗಳೂರಿನಲ್ಲಿ ಕಾಂಗ್ರೆಸ್‌ ಸೇರ್ಪಡೆಯ ವಿಚಾರವನ್ನು ಪ್ರಕಟಿಸಿದ ಲಕ್ಷ್ಮಣ ಸವದಿ ಅವರು, ನಾನು ಇಂದು ಸಂಜೆ 4 ಗಂಟೆಗೆ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನಂತರ 4.30ಕ್ಕೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದೇನೆ ಎಂದು ಪ್ರಕಟಿಸಿದರು.

ʻʻನಾನು ಅಥಣಿ ಕ್ಷೇತ್ರದಿಂದ ಮಾತ್ರ ಟಿಕೆಟ್ ನಿರೀಕ್ಷೆ ಮಾಡಿದ್ದೆ. ನಾನು ಈ ಹಿಂದೆ ಕೆಲವು ಮತಗಳ ಅಂತರದಿಂದ ಸೋಲು ಅನುಭವಿಸಿದ್ದೆ. ನಾನು ಕಳೆದ 20 ವರ್ಷದಿಂದ ಪಕ್ಷದ ಸಿಪಾಯಿ ಆಗಿ ಕೆಲಸ ಮಾಡಿದ್ದೆ. ಹಲವು ಅಭ್ಯರ್ಥಿಗಳನ್ನು ಸಹ ಗೆಲ್ಲಿಸುವ ಕೆಲಸ ಮಾಡಿದ್ದೆ. ಮೇಲ್ಮನೆ ಸದಸ್ಯನಾಗಿ ಮಾಡುವಾಗ ಕೂಡಾ ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು ಹೀಗಾಗಿ ಕೊಟ್ಟ ಮಾತನ್ನು ಉಳಿಸಿಕೊಳ್ಳದ ಹಿನ್ನೆಲೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೇನೆ. ಈಗಾಗಲೇ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆʼʼ ಎಂದು ಹೇಳಿದರು.

ಇದನ್ನೂ ಓದಿ : Karnataka Elections : ಲಕ್ಷ್ಮಣ ಸವದಿ ಕಾಂಗ್ರೆಸ್‌ ಸೇರ್ಪಡೆ ಫಿಕ್ಸ್‌ ; ಕೈ ನೀಡಿದ ಆಫರ್‌ ಏನು? ಸವದಿ ನಿರೀಕ್ಷೆಗಳೇನು?

Exit mobile version