Site icon Vistara News

Karnataka Elections : ಚನ್ನಗಿರಿಗೆ ಮರಳಿದ ಮಾಡಾಳ್‌ ಮಲ್ಲಿಕಾರ್ಜುನ್‌ಗೆ ಅದ್ಧೂರಿ ಸ್ವಾಗತ, ಭಾರಿ ಮೆರವಣಿಗೆ!

Madal Mallikarjun

#image_title

ದಾವಣಗೆರೆ: ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರು ಲೋಕಾಯುಕ್ತ ಬಲೆಯಲ್ಲಿ ಸಿಕ್ಕಿಬಿದ್ದ ಕ್ಷಣದಿಂದ ಊರು ಬಿಟ್ಟಿದ್ದ ಅವರ ಹಿರಿಯ ಪುತ್ರ ಮಾಡಾಳ್‌ ಮಲ್ಲಿಕಾರ್ಜುನ್‌ ಶನಿವಾರ ಚನ್ನಗಿರಿಗೆ ಮರಳಿದ್ದಾರೆ. ಈ ವೇಳೆ ಅವರನ್ನು ಬೃಹತ್‌ ಮೆರವಣಿಗೆ, ರೋಡ್‌ ಶೋ ಮತ್ತು ಸಮಾವೇಶದೊಂದಿಗೆ ಸ್ವಾಗತಿಸಲಾಗಿದೆ.

ಮಾರ್ಚ್‌ ಎರಡರಂದು ಸಂಜೆ ಬೆಂಗಳೂರಿನ ಕ್ರೆಸೆಂಟ್‌ ರಸ್ತೆಯಲ್ಲಿರುವ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಕಚೇರಿಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ, ಮಾಡಾಳು ಅವರ ಕಿರಿಯ ಪುತ್ರ, ಬೆಂಗಳೂರು ಜಲಮಂಡಳಿಯಲ್ಲಿ ಲೆಕ್ಕಾಧಿಕಾರಿಯಾಗಿರುವ ಪ್ರಶಾಂತ್‌ ಮಾಡಾಳು 40 ಲಕ್ಷ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದರು. ಇದರ ಮರುದಿನವೇ ಬೆಂಗಳೂರಿನ ಸಂಜಯ ನಗರ ಸೇರಿದಂತೆ ಮೂರು ಕಡೆ ಹಾಗೂ ಚೆನ್ನಗಿರಿಯಲ್ಲಿರುವ ಮನೆಗೂ ಲೋಕಾಯುಕ್ತ ಮತ್ತು ಸ್ಥಳೀಯ ಪೊಲೀಸರು ದಾಳಿ ನಡೆಸಿ ಎಂಟು ಕೋಟಿಗಿಂತಲೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದರು.

ಬಿಜೆಪಿ ಕಾರ್ಯಕರ್ತರ ಸಂಭ್ರಮ

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್‌ಡಿಎಲ್‌)ದ ಟೆಂಡರ್‌ ಪಡೆಯುವುದಕ್ಕಾಗಿ ಈ ಮೊತ್ತವನ್ನು ಲಂಚವಾಗಿ ಸ್ವೀಕರಿಸಲಾಗಿದೆ. ಇದು ಕೆಎಸ್‌ಡಿಎಲ್‌ ಅಧ್ಯಕ್ಷರಾಗಿರುವ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಪರವಾಗಿ ನಡೆದ ವ್ಯವಹಾರ ಎಂದು ಹೇಳಲಾಗಿತ್ತು. ಈ ನಡುವೆ ಮಾಡಾಳ್‌ ವಿರೂಪಾಕ್ಷಪ್ಪ ಅವರ ಬಂಧನಕ್ಕೆ ಲೋಕಾಯುಕ್ತ ಮುಂದಾದಾಗ ಅವರು ಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದು ಬಂಧನದಿಂದ ತಪ್ಪಿಸಿಕೊಂಡಿದ್ದರು. ಈಗ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.

ಇತ್ತ ಮಾಡಾಳ್‌ ಪ್ರಶಾಂತ್‌ ಬಂಧನವಾಗುತ್ತಿದ್ದಂತೆಯೇ ಅದೇ ದಿನ ರಾತ್ರಿ ಮಾಡಾಳ್‌ ವಿರೂಪಾಕ್ಷಪ್ಪ ಮತ್ತು ಅವರ ಹಿರಿಯ ಪುತ್ರ ಮಲ್ಲಿಕಾರ್ಜುನ್‌ ಅವರು ಮನೆಯಿಂದ ಹೊರಟು ಬಳಿಕ ನಾಪತ್ತೆಯಾಗಿದ್ದರು. ಕೋರ್ಟ್‌ನಿಂದ ಮಧ್ಯಂತರ ಜಾಮೀನು ಸಿಕ್ಕಿದ ಬಳಿಕ ಮಾಡಾಳ್‌ ಅವರು ದೊಡ್ಡ ಮೆರವಣಿಗೆ ಮೂಲಕ ಮನೆಗೆ ಬಂದು ಬಳಿಕ ಮರುದಿನ ಲೋಕಾಯುಕ್ತದ ಮುಂದೆ ಹಾಜರಾಗಿದ್ದರು.

ಈ ನಡುವೆ ಮಲ್ಲಿಕಾರ್ಜುನ ಅವರು ಲಂಚ ದಾಳಿ ನಡೆದ ದಿನದಿಂದಲೇ ಊರಿನಿಂದ ನಾಪತ್ತೆಯಾದವರು ಮರಳಿ ಬಂದಿರಲಿಲ್ಲ. ತಂದೆಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದ ಅವರು ಅಲ್ಲೇ ಉಳಿದಿದ್ದರು.

ಶನಿವಾರ ಮೊದಲ ಬಾರಿಗೆ ಊರಿಗೆ ಮರಳಿದಾಗ ದೊಡ್ಡ ಮಟ್ಟದ ಹಬ್ಬದ ವಾತಾವರಣವನ್ನೇ ಸೃಷ್ಟಿಸಲಾಗಿತ್ತು. ಮಾಡಾಳ್ ಮಲ್ಲಿಕಾರ್ಜುನ ಅದ್ದೂರಿ‌ ಮೆರವಣಿಗೆ ಮೂಲಕ ಬರಮಾಡಿಕೊಂಡ ಕಾರ್ಯಕರ್ತರು ಅವರಿಗೇ ಬಿಜೆಪಿ ಟಿಕೆಟ್‌ ಕೊಡಬೇಕು ಎಂದು ಒತ್ತಾಯಿಸಿದರು. ಮಾಡಾಳ್ ಮಲ್ಲಿಕಾರ್ಜುನ ‌ ಕೂಡಾ ಬಹಿರಂಗ ಸಭೆಯಲ್ಲಿ ಕಾರ್ಯಕರ್ತರಿಗೆ ಧನ್ಯವಾದ ಹೇಳಿದರು.

ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಹೇಳಿದ ಮಾಡಾಳು ಮಲ್ಲಿಕಾರ್ಜುನ್‌

ಭಾರಿ ಸಂಖ್ಯೆಯ ವಾಹನಗಳ ಮೂಲಕ ರೋಡ್‌ ಶೋ ಮಾಡಲಾಯಿತು. ಸಾವಿರಾರು ಅಭಿಮಾನಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಈ ಬಾರಿ ಮಾಡಾಳ್‌ ವಿರೂಪಾಕ್ಷಪ್ಪ ಬದಲು ಮಲ್ಲಿಕಾರ್ಜುನ ಅವರೇ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಕುಟುಂಬಕ್ಕೆ ಟಿಕೆಟ್‌ ಕೊಡುತ್ತಾರೋ ಇಲ್ಲವೋ ಎನ್ನುವ ಚರ್ಚೆ ನಡೆದಿತ್ತು. ಹೀಗಾಗಿ ಎರಡು ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಮಾಡಾಳ್‌ ಕುಟುಂಬಿಕರಿಗೇ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿದ್ದರು.

ಈ ನಡುವೆ ಮಾಡಾಳ್‌ ಅವರು ಸಿಕ್ಕಿಬಿದ್ದ ಬಳಿಕ ಚೆನ್ನಗಿರಿಯ ಬಿಜೆಪಿ ಟಿಕೆಟ್‌ಗಾಗಿ ಕೆಲವು ಆಕಾಂಕ್ಷಿತರು ಹುಟ್ಟಿಕೊಂಡಿದ್ದರು. ಅವರೆಲ್ಲ ಬ್ಯಾನರ್‌ಗಳನ್ನು ಹಾಕಿ ತಮ್ಮ ಅಸ್ತಿತ್ವವನ್ನು ತೋರಿಸಿದ್ದರು. ಶನಿವಾರ ನಡೆದ ನಡೆದ ಮೆರವಣಿಗೆ ಸಂದರ್ಭದಲ್ಲಿ ಮಲ್ಲಿಕಾರ್ಜುನ ಅಭಿಮಾನಿಗಳು ಆಕಾಂಕ್ಷಿತರ ಬ್ಯಾನರ್‌ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : Lokayukta Raid: ಮಾಡಾಳ್‌ ಅರೆಸ್ಟ್‌ ಯಾಕೆ ಮಾಡ್ಬೇಕು? ಸಿನಿಮಾ ಸ್ಟೈಲಲ್ಲಿ ಟಾರ್ಚರ್‌ ಕೊಟ್ಟು ಬಾಯಿ ಬಿಡಿಸ್ತೀರಾ ಎಂದು ಕೇಳಿದ ಕೋರ್ಟ್‌

Exit mobile version