ಬೆಂಗಳೂರು: ರಾಜಧಾನಿಯ ಬಿಟಿಎಂ ಲೇಔಟ್ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ರಾಮಲಿಂಗಾ ರೆಡ್ಡಿ (MLA Ramalinga Reddy) ಅವರು ಕುಕ್ಕರ್‌ಗಳನ್ನು ನೀಡುವ ಮೂಲಕ ತಮ್ಮ ಕ್ಷೇತ್ರದ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ ಮತ್ತು ಈ ಮೂಲಕ ಚುನಾವಣಾ ಸಂಹಿತೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ. ಜತೆಗೆ ಅವರು ಕೊಟ್ಟಿರುವ ಕುಕ್ಕರ್‌ಗಳ ಗುಣಮಟ್ಟವೂ ಕಳಪೆಯಾಗಿದೆ ಎಂದು ಗಮನ ಸೆಳೆಯಲಾಗಿದೆ.
ಬಿಜೆಪಿ ಪಕ್ಷದ ಬಿಟಿಎಂ ಮುಖಂಡರುಗಳಾದ ರಾಜೇಂದ್ರ ರೆಡ್ಡಿ, ಶ್ರೀಧರ ರೆಡ್ಡಿ, ಅನಿಲ್ ಶೆಟ್ಟಿ, ರಾಘವೇಂದ್ರ ನಾಯ್ಡು ಮತ್ತು ಮಂಡಲ ಪ್ರಭಾರಿ ರವಿ ಅವರು ಶನಿವಾರ ಕ್ಷೇತ್ರದ ಚುನಾವಣಾಧಿಕಾರಿಯನ್ನು ಭೇಟಿಯಾಗಿ ದೂರು ಸಲ್ಲಿಸಿದರು. ತಕ್ಷಣವೇ ರಾಮಲಿಂಗಾ ರೆಡ್ಡಿ ಅವರ ಮೇಲೆ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮಾರ್ಚ್ 28ರಂದು ಬಿಜೆಪಿ ಮುಖಂಡ ಅನಿಲ್ ಶೆಟ್ಟಿ ಅವರ ಮನೆ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನೆಡೆಸಿ ವಶಪಡಿಸಿಕೊಂಡ ಕುಕ್ಕರ್‌ಗಳು ಶಾಸಕರಾದ ರಾಮಲಿಂಗಾ ರೆಡ್ಡಿ ಅವರಿಗೆ ಸೇರಿದ್ದಾಗಿದೆ. ಆದರೆ, ವಾಣಿಜ್ಯ ತೆರಿಗೆ ಅಧಿಕಾರಿ ವರಲಕ್ಷ್ಮಮ್ಮ ಅವರು ಅಧಿಕಾರ ದುರುಪಯೋಗಿಸಿಕೊಂಡು ರಾಮಲಿಂಗ ರೆಡ್ಡಿ ಅವರೊಂದಿಗೆ ಶಾಮೀಲಾಗಿ ಸತ್ಯ ಮುಚ್ಚಿಟ್ಟು ನನ್ನ ಮೇಲೆ ಸುಳ್ಳು ಎಫ್‌ಐಆರ್ ದಾಖಲಿಸಿದ್ದು ಅವರನ್ನು ಚುನಾವಣೆ ಜವಾಬ್ದಾರಿಯಿಂದ ದೂರವಿಡಬೇಕು ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಅನಿಲ್ ಶೆಟ್ಟಿ ಆಗ್ರಹಿಸಿದರು.
ʻʻರಾಮಲಿಂಗಾ ರೆಡ್ಡಿ ಅವರು ಕಳಪೆ ಗುಣಮಟ್ಟದ ಕುಕ್ಕರ್‌ಗಳನ್ನು ನೀಡಿದ ಬಗ್ಗೆ ಸಾರ್ವಜನಿಕರು ನನಗೆ ಮಾಹಿತಿ ನೀಡಿದ್ದರು. ಪರಿಶೀಲಿಸಿದಾಗ ಅವು ಕಳಪೆಯಾಗಿದ್ದು ಕಂಡುಬಂತು. ಈ ವಿಚಾರದ ಬಗ್ಗೆ ದೂರು ನೀಡುವಂತೆ ಸಾರ್ವಜನಿಕರು ಕೇಳಿಕೊಂಡಿದ್ದರು. ನಾನು ಎಲ್ಲ ಕುಕ್ಕರ್‌ಗಳನ್ನು ತಂದು ನನ್ನ ಮನೆಯಲ್ಲಿಡುವಂತೆ ತಿಳಿಸಿದ್ದೆ. ನಾನು ಹೇಳಿದಂತೆ ಅವರು ಕುಕ್ಕರ್‌ಗಳನ್ನು ತಂದು ಇಟ್ಟಿದ್ದರು. ಈ ನಡುವೆ, ಮಾರ್ಚ್ 28ರಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನನ್ನ ಮನೆಗೆ ದಾಳಿ ಮಾಡಿ, ನಾನು ಕುಕ್ಕರ್ ಸಂಗ್ರಹಿಸಿಟ್ಟಿದ್ದೇನೆ ಎಂದು ಆಪಾದಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ನನ್ನ ಮನೆಯಲ್ಲಿದ್ದ ಕುಕ್ಕರ್‌ಗಳು ರಾಮಲಿಂಗಾ ರೆಡ್ಡಿ ಅವರೇ ಜನರಿಗೆ ಹಂಚಿದ್ದು ಎನ್ನುವುದಕ್ಕೆ ಎಲ್ಲ ರೀತಿಯ ದಾಖಲೆಗಳು ಇವೆ. ಕುಕ್ಕರ್‌ನಲ್ಲೇ ಅದನ್ನು ಬರೆಯಲಾಗಿದೆ. ಹಾಗಿದ್ದರೂ ನನ್ನ ವಿರುದ್ಧ ಕೇಸು ದಾಖಲಿಸಲಾಗಿದೆ. ಇದು ರಾಮಲಿಂಗಾ ರೆಡ್ಡಿ ಅವರು ಅಧಿಕಾರಿಗಳ ಜತೆ ಸೇರಿ ನಡೆಸಿದ ಕುತಂತ್ರʼʼ ಎಂದು ಅನಿಲ್ ಶೆಟ್ಟಿ ಆಪಾದಿಸಿದ್ದಾರೆ. ಈ ಎಲ್ಲ ವಿಚಾರಗಳನ್ನು ಚುನಾವಣಾಧಿಕಾರಿಗಳಿಗೆ ನೀಡಿರುವ ಮನವಿಯಲ್ಲಿ ಉಲ್ಲೇಖಿಸಿದ್ದು, ತಕ್ಷಣವೇ ರಾಮಲಿಂಗಾ ರೆಡ್ಡಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಜತೆಗೆ ರಾಮ ಲಿಂಗಾ ರೆಡ್ಡಿ ಅವರ ಜತೆ ಸೇರಿ ತನ್ನ ವಿರುದ್ಧ ಎಫ್‌ಐಆರ್ ದಾಖಲಿಸಿದ ವಾಣಿಜ್ಯ ತೆರಿಗೆ ಅಧಿಕಾರಿ ವರಲಕ್ಷ್ಮಮ್ಮ ಅವರನ್ನು ಚುನಾವಣಾ ಕರ್ತವ್ಯದಿಂದ ದೂರ ಇಡುವಂತೆಯೂ ವಿನಂತಿಸಿದರು.
ಇದನ್ನೂ ಓದಿ : Anil Shetty: ಬಿಜೆಪಿಯ ಅನಿಲ್ ಶೆಟ್ಟಿಗೆ ಕುಕ್ಕರ್ ʻಪ್ರೆಶರ್ʼ; ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು