ಸಾಗರ (ಶಿವಮೊಗ್ಗ): ಸಾಗರ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ತಮ್ಮದೇ ಆಲೋಚನೆಯಡಿ ಕೆಲಸ ಮಾಡುತ್ತಿರುವ ಶಾಸಕ ಹಾಲಪ್ಪ ಹರತಾಳು ಅವರನ್ನು ಮತ್ತೊಮ್ಮೆ ಗೆಲ್ಲಿಸುವ ಮೂಲಕ ಜನರು ಅಭಿವೃದ್ಧಿ ವೇಗ ಇನ್ನಷ್ಟು ಹೆಚ್ಚಿಸುವಂತೆ ನೋಡಿಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಇಲ್ಲಿನ ಗಾಂಧಿ ಮೈದಾನದಲ್ಲಿ ಶನಿವಾರ ಶಾಸಕ ಹರತಾಳು ಹಾಲಪ್ಪ ನಾಮಪತ್ರ ಸಲ್ಲಿಕೆ ನಂತರ ಹಮ್ಮಿಕೊಂಡಿದ್ದ ಬೃಹತ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕಷ್ಟಪಟ್ಟು ಕಟ್ಟಿದ ಹುತ್ತದಲ್ಲಿ ಹಾವು ಸೇರಲು ಬಿಡಬೇಡಿ
ʻʻನಾವು ಕಷ್ಟಪಟ್ಟು ಸುಂದರವಾದ ಹುತ್ತವನ್ನು ಕಟ್ಟಿದ್ದೇವೆ. ಆ ಹುತ್ತದಲ್ಲಿ ಮತ್ತೊಂದು ಹಾವು ಸೇರಿಕೊಂಡು ಹುತ್ತವನ್ನು ಹಾಳು ಮಾಡಲು ಬಿಡಬಾರದು. ಹಾಲಪ್ಪ ಐದು ವರ್ಷ ಕಷ್ಟಪಟ್ಟು ಅಭಿವೃದ್ದಿ ಮಾಡಿದ್ದಾರೆ. ಇನ್ಯಾರೋ ಗೆದ್ದು ಅಭಿವೃದ್ಧಿಯನ್ನು ಹಾಳು ಮಾಡಬಾರದು. ನೀವು ಮತ ನೀಡುತ್ತಿರುವುದು ಹಾಲಪ್ಪ ಅವರಿಗೆ ಅಲ್ಲ. ಬದಲಾಗಿ ಸಾಗರ ಕ್ಷೇತ್ರದ ಅಭಿವೃದ್ದಿಯ ಭವಿಷ್ಯಕ್ಕಾಗಿ ಎನ್ನುವುದು ಮರೆಯಬೇಡಿ. ನೀವು ಹಾಲಪ್ಪ ಅವರನ್ನು ಗೆಲ್ಲಿಸಿದರೆ ಮುಂದೆ ಸಾಗರ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಸಿಗುತ್ತದೆʼʼ ಎಂದು ಹೇಳಿದರು ರಾಘವೇಂದ್ರ.
ಇನ್ನಷ್ಟು ಅಭಿವೃದ್ಧಿಯ ಯೋಚನೆ ಹಂಚಿಕೊಂಡ ಹಾಲಪ್ಪ
ಶಾಸಕ ಎಚ್.ಹಾಲಪ್ಪ ಹರತಾಳು ಮಾತನಾಡಿ, ಕಳೆದ ಐದು ವರ್ಷದಲ್ಲಿ ಸಾಗರ ಕ್ಷೇತ್ರದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ಜನರು ನೆಮ್ಮದಿಯಿಂದ ಬದುಕಲು ಬೇಕಾದ ವಾತಾವರಣ ನಿರ್ಮಿಸಲಾಗಿದೆ. ಡಬ್ಬಲ್ ಎಂಜಿನ್ ಸರ್ಕಾರ ಸಾಕಷ್ಟು ಅಭಿವೃದ್ಧಿ ಮಾಡಿದೆ. ಮುಂದಿನ ದಿನಗಳಲ್ಲಿ ಇತಿಹಾಸ ಪ್ರಸಿದ್ದವಾದ ಮಹಾಗಣಪತಿ ದೇವಸ್ಥಾನದ ಪರಿಸರವನ್ನು ಸನಾತನ ಧರ್ಮದ ರೀತಿಯಲ್ಲಿ ಸಜ್ಜುಗೊಳಿಸಲು ಸುಮಾರು 25 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗುತ್ತದೆ. ಮೊದಲ ಹಂತದಲ್ಲಿ 10 ಕೋಟಿ ರೂ. ಎರಡು ವರ್ಷದಲ್ಲಿ ಬಿಡುಗಡೆ ಮಾಡಿಸಲಾಗುತ್ತದೆ. ಒಂದು ಕಿ.ಮೀ. ವ್ಯಾಪ್ತಿಯಲ್ಲಿ ವರದಾ ನದಿಯನ್ನು ಸ್ವಚ್ಚಗೊಳಿಸಿ ಅಭಿವೃದ್ದಿಪಡಿಸಲಾಗುತ್ತದೆ. ಎರಡು ಬಾರಿ ಶಾಸಕರಾಗಿದ್ದಾಗ ಸದನದಲ್ಲಿ ಒಂದು ಬಾರಿಯೂ ಕ್ಷೇತ್ರದ ಸಮಸ್ಯೆ ಕುರಿತು ಮಾತನಾಡಿರುವವರಿಗೆ ಮತ ಕೊಟ್ಟರೆ ಅಭಿವೃದ್ದಿ ನಿಂತ ನೀರಾಗುತ್ತದೆ. ತಮ್ಮನ್ನು ಮತ್ತೊಮ್ಮೆ ಗೆಲ್ಲಿಸುವ ಮೂಲಕ ಅಭಿವೃದ್ದಿ ಪರ್ವಕ್ಕೆ ಕೈಜೋಡಿಸಲು ಮನವಿ ಮಾಡಿದರು.
ಬಿಜೆಪಿ ಸೇರಲು ಕಾರಣವಾದ ಅಂಶ ವಿವರಿಸಿದ ರಾಜನಂದಿನಿ
ಡಾ. ರಾಜನಂದಿನಿ ಕಾಗೋಡು ಮಾತನಾಡಿ, ನಾನು ತಂದೆಯವರ ಮಾರ್ಗದರ್ಶನದಲ್ಲಿ ರಾಜಕೀಯಕ್ಕೆ ಬಂದವಳು. ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಬಂದಿದ್ದೇನೆ. ಆದರೆ ನಮ್ಮ ತಂದೆಯವರಿಗೆ ಕೆಟ್ಟ ಮಾತಿನಲ್ಲಿ ಬೈದವರ ವಿರುದ್ಧ ಪ್ರಚಾರ ಮಾಡಲು ನನ್ನ ಆತ್ಮಸಾಕ್ಷಿ ಒಪ್ಪದೆ ಇರುವುದರಿಂದ ನಾನು ಬಿಜೆಪಿ ಸೇರ್ಪಡೆಗೊಂಡಿದ್ದೇನೆ. ಹಾಲಪ್ಪ ಅವರ ಸುಂದರ ಸಾಗರ, ವಿದ್ಯಾಸಾಗರ, ಆರೋಗ್ಯ ಸಾಗರ ಕನಸು ನನಸು ಮಾಡುವ ಉದ್ದೇಶ ನನ್ನದೂ ಆಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿದರು. ವೇದಿಕೆಯಲ್ಲಿ ಟಿ.ಡಿ.ಮೇಘರಾಜ್, ಬಿ.ಸ್ವಾಮಿರಾವ್, ಎಂ.ಹರನಾಥ ರಾವ್, ಪ್ರಸನ್ನ ಕೆರೆಕೈ, ಪ್ರಶಾಂತ ಕೆ.ಎಸ್., ಗಣಪತಿ ಬಿಳಗೋಡು, ಲೋಕನಾಥ ಬಿಳಿಸಿರಿ, ಶರಾವತಿ ಸಿ. ರಾವ್, ಮಧುರ ಶಿವಾನಂದ್, ವಾಸಂತಿ ರಮೇಶ್, ವಿ.ಮಹೇಶ್, ಭರ್ಮಪ್ಪ ಅಂದಾಸುರ, ವೀರೇಶ್ ಅಲವಳ್ಳಿ, ದೇವಾನಂದ್ ಇನ್ನಿತರರು ಹಾಜರಿದ್ದರು.
ಇದನ್ನೂ ಓದಿ : Science Day: ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಮೂಲ ವಿಜ್ಞಾನ ಕುರಿತು ಅರಿವು ಮೂಡಿಸುವ ಅಗತ್ಯವಿದೆ: ಡಾ. ರಾಜನಂದಿನಿ ಕಾಗೋಡು