ಬೆಂಗಳೂರು: ಚಿತ್ರ ನಟ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ರಾಜ್ಯ ವಿಧಾನಸಭೆ ಚುನಾವಣೆ (Karnataka Elections) ಅಖಾಡಕ್ಕೆ ಧುಮುಕಿದ್ದಾರೆ. ಅಜ್ಜ, ಮಾಜಿ ಪ್ರಧಾನಿ ದೇವೇಗೌಡರ ಆಶೀರ್ವಾದ ಪಡೆದು ರಾಮನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸೋಮವಾರ ಅವರು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರದ ಜತೆಗೆ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮಗಿರುವ ಆಸ್ತಿ, ಕುಟುಂಬದ ಸಂಪತ್ತಿನ ವಿವರ ನೀಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರ ಬಳಿ ರೇಂಜ್ ರೋವರ್, ಲ್ಯಾಂಬೋರ್ಗಿನಿ ಸೇರಿ ಐದು ಕಾರುಗಳಿವೆ. ಇವುಗಳಲ್ಲಿ ಎರಡು ಕಾರುಗಳ ಮೌಲ್ಯವೇ 5 ಕೋಟಿ ರೂ. ದಾಟುತ್ತದೆ. ಹಾಗಿದ್ದರೆ ಅವರ ಉಳಿದ ಆಸ್ತಿಗಳ ಒಟ್ಟು ಮೌಲ್ಯ ಎಷ್ಟು ಎಂದು ಡಿಟೇಲಾಗಿ ತಿಳಿಯೋಣ.
2019ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನೀಡಿದ್ದರು ನಿಖಿಲ್ ಕುಮಾರಸ್ವಾಮಿ. ಈ ಬಾರಿ ತಾಯಿ ಅನಿತಾ ಕುಮಾರಸ್ವಾಮಿ ಅವರು ʻತ್ಯಾಗʼ ಮಾಡಿರುವ ರಾಮನಗರದಿಂದ ಕಣಕ್ಕೆ ಇಳಿಯುತ್ತಿದ್ದಾರೆ. 2019ರಲ್ಲಿ ಅವರು ತೋರಿಸಿದ ಆಸ್ತಿ ಮೌಲ್ಯ 74 ಕೋಟಿ ರೂ. ಆಗಿದ್ದರೆ, ಈಗ ಅದು 77 ಕೋಟಿ ರೂ. ಆಗಿದೆ. ಅದರ ನಡುವೆ ಅವರಿಗೆ ಮದುವೆಯಾಗಿದೆ, ಹೆಂಡತಿಯ ಆಸ್ತಿಯೂ ಸೇರಿಕೊಂಡಿದೆ. ನಿಖಿಲ್ ಅವರು ಹಲವು ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ. ಅಫಿಡವಿಟ್‌ನಲ್ಲಿರುವ ಅಚ್ಚರಿಯ ಅಂಶವೆಂದರೆ ನಿಖಿಲ್ ಅವರು ತಮ್ಮ ತಂದೆ ಎಚ್.ಡಿ ಕುಮಾರಸ್ವಾಮಿ ಅವರಿಗೂ ಸಾಲ ನೀಡಿದ್ದಾರೆ!
ನಿಖಿಲ್ ಕುಮಾರಸ್ವಾಮಿ ಅವರ ಒಟ್ಟು ಆಸ್ತಿಯ ಲೆಕ್ಕ
ನಿಖಿಲ್ ಬಳಿ ಇರುವ ಚರಾಸ್ತಿ ಮೌಲ್ಯ: 46.81 ಕೋಟಿ ರೂ.
ಪತ್ನಿ ರೇವತಿ ಹೆಸರಿನಲ್ಲಿರುವ ಚರಾಸ್ತಿ: 1.79 ಕೋಟಿ ರೂ.
ನಿಖಿಲ್ ಬಳಿ ಇರುವ ಸ್ಥಿರಾಸ್ತಿ ಮೌಲ್ಯ: 28 ಕೋಟಿ ರೂ.
ಪತ್ನಿ ರೇವತಿ ಅವರ ಸ್ಥಿರಾಸ್ತಿಯ ಮೌಲ್ಯ: 28 ಲಕ್ಷ ರೂ.
ನಿಖಿಲ್-ರೇವತಿ ಕುಟುಂಬದ ಒಟ್ಟು ಆಸ್ತಿ: 77 ಕೋಟಿ ರೂ.
2019ರ ಲೋಕಸಭೆ ಚುನಾವಣೆ ವೇಳೆ ಘೋಷಿಸಿದ್ದು: 74 ಕೋಟಿ ರೂ.
ನಿಖಿಲ್ ದಂಪತಿ ಬಳಿ 1.7 ಕೆಜಿ ಚಿನ್ನ, 44 ಕೆಜಿ ಬೆಳ್ಳಿ!
ನಿಖಿಲ್ ಕುಮಾರಸ್ವಾಮಿ ಬಳಿ 1151 ಗ್ರಾಂ ತೂಕದ 64.45 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಹಾಗೂ 16 ಕೆಜಿ ತೂಕದ 11.08 ಲಕ್ಷ ರೂ. ಮೌಲ್ಯದ ಬೆಳ್ಳಿ ಇದೆ. ಪತ್ನಿ ರೇವತಿ ಬಳಿ ಬಳಿ 36.35 ಲಕ್ಷ ರೂ. ಮೌಲ್ಯದ 641 ಗ್ರಾಂ ಚಿನ್ನ, 23.20 ಲಕ್ಷ ರೂ. ಮೌಲ್ಯದ 33.5 ಕೆಜಿ ಬೆಳ್ಳಿ ಇದೆ. 11.33 ಲಕ್ಷ ರೂ. ಮೌಲ್ಯದ 12.59 ಕ್ಯಾರೆಟ್‌ನಷ್ಟು ವಜ್ರವೂ ಇದೆ.
ನಿಖಿಲ್ ಕುಮಾರಸ್ವಾಮಿ ಸ್ಥಿರಾಸ್ತಿ, ಚರಾಸ್ತಿ ಎಲ್ಲೆಲ್ಲಿದೆ?
-ಬೆಂಗಳೂರಿನ ರಿಚ್‌ಮಂಡ್ ಟೌನ್‌ನಲ್ಲಿ ಮೂರು ವಾಣಿಜ್ಯ ಕಟ್ಟಡಗಳು- ಮೌಲ್ಯ 28 ಕೋಟಿ ರೂ.
-ಪತ್ನಿ ರೇವತಿ ಅವರಿಗೆ ಬೆಂಗಳೂರಿನ ಅತ್ತಿಗುಪ್ಪೆಯಲ್ಲಿ 28.36 ಲಕ್ಷ ಮೌಲ್ಯದ ಅಪಾರ್ಟ್‌ಮೆಂಟ್ ಇದೆ
-ಸದ್ಯ ಯಾವುದೇ ಕೃಷಿ ಅಥವಾ ಕೃಷಿಯೇತರ ಭೂಮಿ ಇಲ್ಲ.
– ನಿಖಿಲ್ ಬಳಿ 2.16 ಕೋಟಿ ರೂ. ಮೌಲ್ಯದ ರೇಂಜ್ ರೋವರ್, 2.9 ಕೋಟಿ ರೂ. ಮೊತ್ತದ ಲ್ಯಾಂಬೊರ್ಗಿನಿ ಸೇರಿ ಐದು ಕಾರಿದೆ.
ನಿಖಿಲ್ ಕುಮಾರಸ್ವಾಮಿ ಬಳಿ 1.01 ಲಕ್ಷ ರೂ. ಹಾಗೂ ಪತ್ನಿ ಬಳಿ 3.53 ಲಕ್ಷ ರೂ. ನಗದು ಇದೆಯಂತೆ.
ನಿಖಿಲ್ ಕುಮಾರಸ್ವಾಮಿ ವಾರ್ಷಿಕ ಆದಾಯ 4.27 ಕೋಟಿ
ಚಿತ್ರ ನಟರಾಗಿರುವ ನಿಖಿಲ್ ಕುಮಾರಸ್ವಾಮಿ ವರ್ಷಕ್ಕೆ 4.27 ಕೋಟಿ ರೂ. ಆದಾಯ ಪಡೆಯುತ್ತಿದ್ದಾರೆ. 2017-18ರಲ್ಲಿ ಅವರ ವಾರ್ಷಿಕ ಆದಾಯ 71.42 ಲಕ್ಷ ರೂ., 2021-22ನೇ ಸಾಲಿನಲ್ಲಿ 4.27 ಕೋಟಿ ವಾರ್ಷಿಕ ಆದಾಯ ಇತ್ತು.
ಅಪ್ಪನಿಗೂ ಸಾಲ ಕೊಟ್ಟಿದ್ದಾರೆ ನಿಖಿಲ್
ನಿಖಿಲ್ ಅವರು ಕಸ್ತೂರಿ ಮೀಡಿಯಾ ಪ್ರೈ.ಲಿ. ಕಂಪನಿಯಲ್ಲಿ 76 ಲಕ್ಷ ರೂ, ಹೊರೈಜನ್ ರಿಯಾಲ್ಟಿ ಕಂಪನಿಯಲ್ಲಿ 6 ಕೋಟಿ ರೂ. ಸೇರಿದಂತೆ ವಿವಿಧೆಡೆ ಹಣ ಹೂಡಿಕೆ ಮಾಡಿದ್ದಾರೆ. ತಂದೆ ಎಚ್ಡಿ ಕುಮಾರಸ್ವಾಮಿ ಸೇರಿದಂತೆ ಅನೇಕರಿಗೆ ಸಾಲ ನೀಡಿದ್ದಾರಂತೆ.
ಇದನ್ನೂ ಓದಿ : Karnataka Elections : ಜನಾರ್ದನ ರೆಡ್ಡಿಗಿಂತಲೂ ಪತ್ನಿ ಅರುಣಲಕ್ಷ್ಮಿಯೇ ಶ್ರೀಮಂತೆ; ಸಂಪತ್ತು ಎಷ್ಟಿದ್ದರೇನೂ ಅವರ ಬಳಿ ವಾಹನಗಳೇ ಇಲ್ಲ!