ಸುಳ್ಯ: ಸುಳ್ಯ–ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆ ಅಭಿವೃದ್ಧಿ ಆಗ್ರಹಿಸಿ ಮಾ. 14ರಂದು ನಗರ ಪಂಚಾಯತ್ ಸುಳ್ಯ ಎದುರಿನಲ್ಲಿ ನಿಧಿ ಸಂಗ್ರಹ ಅಭಿಯಾನ ನಡೆಸುವ ಮೂಲಕ ಪ್ರತಿಭಟನೆ (Sullia protest) ನಡೆಸಲಾಯಿತು. ಈ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಳ್ಯಕ್ಕೆ ಕಾಡಿನಿಂದ ಆನೆ ಮಾತ್ರ ಬರುತ್ತದೆ, ಸರ್ಕಾರದಿಂಧ ಅನುದಾನ ಬರುತ್ತಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.
ರಸ್ತೆ ಅಭಿವೃದ್ಧಿಗೆ ಹೋರಾಟ ನಡೆಸುತ್ತಿರುವ ಆ ಭಾಗದ ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಸುಳ್ಯ ನಗರದ ಜಟ್ಟಿಪಳ್ಳ ಕ್ರಾಸ್ ಬಳಿ ಜಮಾಯಿಸಿದ ಸಾರ್ವಜನಿಕರು ಜಾಥಾ ಮೂಲಕ ಆಗಮಿಸಿ ನಗರ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ರಸ್ತೆಗಾಗಿ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರಮುಖರು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುಳ್ಯ -ಕೊಡಿಯಾಲಬೈಲ್ -ದುಗ್ಗಲಡ್ಕ ಏಳು ಕಿಲೋಮೀಟರ್ ಉದ್ದವಿರುವ ರಸ್ತೆ ಬೆಳೆಯುತ್ತಿರುವ ಸುಳ್ಯಕ್ಕೆ ಅತ್ಯಂತ ಅವಶ್ಯಕವಾದ ರಸ್ತೆ ಯಾಗಿದೆ. ಈ ರಸ್ತೆಯ ಅಭಿವೃದ್ಧಿಗೆ 25 ವರ್ಷಗಳಿಂದ ಬೇಡಿಕೆ ಇದೆ. ಆದರೆ ಜನಪ್ರತಿನಿಧಿಗಳು, ಸರ್ಕಾರ ನೀಡಿದ ಭರವಸೆಗಳು ಸುಳ್ಳಾಗಿದೆ. ಈ ಹಿನ್ನೆಲೆಯ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಬಳಿಕ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಸಾರ್ವಜನಿಕರಿಂದ ಸಂಗ್ರಹಿಸಿದ ಹಣದಿಂದ ರಸ್ತೆ ದುರಸ್ತಿ ಮಾಡಲಾಗುವುದು ಎಂದು ಪ್ರಮುಖರು ತಿಳಿಸಿದ್ದಾರೆ.
ಸುಳ್ಯಕ್ಕೆ ಕಾಡಿನಿಂದ ಆನೆ ಮಾತ್ರ ಬರುವುದು-ಅನುದಾನ ಬರುತ್ತಿಲ್ಲ
ಪ್ರತಿಭಟನೆಯಲ್ಲಿ ಮಾತನಾಡಿದ ಉದ್ಯಮಿ ಸುರೇಶ್ಚಂದ್ರ ಕಮಿಲ, ‘ʻಬೇರೆ ವಿಧಾನ ಸಭಾ ಕ್ಷೇತ್ರಗಳಿಗೆ ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ಬರುತ್ತಿದ್ದರೆ, ಸುಳ್ಯಕ್ಕೆ ಮಾತ್ರ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ, ಇಲ್ಲಿ ಜನರ ನಿದ್ದೆಗೆಡಿಸಲು ಕಾಡಿನಿಂದ ಆನೆ ಮಾತ್ರ ಬರುತ್ತಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದೆ ಕೆಲಸ ಮಾಡಿದವರಿಗೆ ಮಾತ್ರ ಓಟು ಹಾಕುವುದು ಎಂದು ಅವರು ಹೇಳಿದರು.
ʻʻಆಡಳಿತ ವ್ಯವಸ್ಥೆ ನಿಷ್ಕ್ರಿಯವಾದಾಗ ಜನರು ಪ್ರತಿಭಟನೆ ಮಾಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ ಎಂದರು. ಸುಳ್ಯ ಶಾಸಕರು ಸಚಿವರಾದಾಗ ಕೊಡಿಯಾಲಬೈಲು-ದುಗ್ಗಲಡ್ಕ ರಸ್ತೆ ಅಭಿವೃದ್ಧಿ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ರಸ್ತೆ ಅಭಿವೃದ್ಧಿ ಆಗದೇ ಇರುವುದು ದುರದೃಷ್ಟಕರʼʼ ಎಂದು ಹೇಳಿದರು.
ʻʻರಸ್ತೆ ಅಭಿವೃದ್ಧಿ ಸಂಪೂರ್ಣ ಆಗದೆ ಯಾವುದೇ ಕಾರಣಕ್ಕೂ ವಿರಮಿಸುವುದಿಲ್ಲ, ಪೂರ್ತಿ ರಸ್ತೆ ಅಭಿವೃದ್ಧಿ ಆಗುವ ತನಕ ಹೋರಾಟ ಮುಂದುವರಿಯಲಿದೆ ಎಂದ ಅವರು ಇಷ್ಟು ವರ್ಷದಿಂದ ಬಿಜೆಪಿ ಪಕ್ಷಕ್ಕಾಗಿ ದುಡಿದರೂ ನಮ್ಮ ಬಹು ಬೇಡಿಕೆಯಾದ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸದೇ ಇರುವುದು ನಮಗೆ ಬಹಳ ಬೇಸರ ತಂದಿದೆʼʼ ಎಂದು ಹೇಳಿದರು.
ಕೇಸರಿ- ಹಸಿರು ಸಾಲು ಹಾಕಿ ಪ್ರತಿಭಟನೆ
ಪ್ರತಿಭಟನೆಯಲ್ಲಿ ಭಾಗವಹಿಸಿದ ಬಹುತೇಕ ಮಂದಿ ಕೇಸರಿ ಶಾಲು ಹಾಕಿ ಆಗಮಿಸಿದ್ದರೆ, ಕೆಲವರು ಹಸಿರು ಶಾಲು ಹಾಕಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಮಹಿಳೆಯರೂ ಸೇರಿ ಸುಡು ಬಿಸಿಲನ್ನೂ ಲೆಕ್ಕಿಸದೇ 250ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.