Site icon Vistara News

Karnataka Elections : ಯಲ್ಲಾಪುರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಪ್ರೊ. ನಾಗೇಶ ನಾಯ್ಕ ಕಾಗಾಲ ಘೋಷಣೆ

Nagesh Naik Kagala JDS yallapura

#image_title

ಯಲ್ಲಾಪುರ: ಬಹುದಿನಗಳಿಂದ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜನರ ಹಾಗೂ ಇತರ ರಾಜಕೀಯ ಪಕ್ಷಗಳ ಪ್ರಶ್ನೆಗೆ ತೆರೆ ಬಿದ್ದಿದ್ದು, ಶನಿವಾರ ಜೆಡಿಎಸ್‌ ಪಕ್ಷದಿಂದ ಪ್ರೊ. ನಾಗೇಶ ನಾಯ್ಕ ಕಾಗಾಲ ಅವರನ್ನು ಅಭ್ಯರ್ಥಿಯಾಗಿ ಅಧಿಕೃತ ಘೋಷಣೆ ಮಾಡಲಾಗಿದೆ. ಶುಕ್ರವಾರ ಬಿಡುಗಡೆಯಾದ ಜೆಡಿಎಸ್‌ನ ಎರಡನೇ ಪಟ್ಟಿಯಲ್ಲಿ ಅವರ ಹೆಸರಿದೆ.

ಕಳೆದೆರಡು ತಿಂಗಳಿನಿಂದ ಕ್ಷೇತ್ರದಲ್ಲಿ ಸಕ್ರೀಯವಾಗಿ ಪಕ್ಷ ಸಂಘಟನೆಯ ಕಾರ್ಯದಲ್ಲಿ ತೊಡಗಿದ್ದ ಪ್ರೊ. ನಾಗೇಶ ನಾಯ್ಕ ಕಾಗಾಲ ಅವರನ್ನು ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬೆಂಗಳೂರಿನಲ್ಲಿ ಘೋಷಣೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಜೆಡಿಎಸ್‌ ಪಕ್ಷದ ಟಿಕೆಟ್‌ ಪಡೆಯಲು ಈ ಬಾರಿ ಭಾರೀ ಪೈಪೋಟಿ ನಡೆದಿದ್ದು, ಕೊನೆಯಲ್ಲಿ ನಾಗೇಶ ನಾಯ್ಕ ಅವರು ಪಕ್ಷದ ಪ್ರಮುಖರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನಾಮಧಾರಿ ಸಮಾಜಕ್ಕೆ ಸೇರಿದ ಇವರು ಯಲ್ಲಾಪುರ, ಬನವಾಸಿ ಭಾಗದ ಸಮಾಜದ ಮತಗಳೊಂದಿಗೆ ಇತರೆ ಹಿಂದುಳಿದ ವರ್ಗದ ಮತಗಳು ಹಾಗೂ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನೀಡಿದ ಕೊಡುಗೆಗಳ ಆಧಾರ ಮತಗಳನ್ನು ಒಗ್ಗೂಡಿಸಿಕೊಂಡು ಗೆಲ್ಲುವ ವಿಶ್ವಾಸದಲ್ಲಿದ್ದಾರೆ ಎನ್ನಲಾಗುತ್ತಿದೆ.
ಬಹುದಿನಗಳಿಂದ ಜನರಲ್ಲಿ ಅಭ್ಯರ್ಥಿಯೇ ಇಲ್ಲದೇ, ಪ್ರಚಾರ ಕಾರ್ಯ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಈ ನಡುವೆ ಮುಂಡಗೋಡಿನ ಸಂತೋಷ ರಾಯ್ಕರ್‌ ಸೇರಿದಂತೆ, ಇನ್ನಿತರರ ಹೆಸರೂ ಸಹ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರುತ್ತಿತ್ತು. ಈಗ ಅಧಿಕೃತ ಘೋಷಣೆಯಾದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯರ್ತರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿ ಕ್ಷೇತ್ರದಲ್ಲಿ ಮ್ಯಾಜಿಕ್‌ ಮಾಡುವರೇ ಕಾದು ನೋಡಬೇಕಿದೆ.

ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳ ಅಸಮರ್ಥ ಆಡಳಿತದಿಂದ ಜನ ಬೇಸತ್ತಿದ್ದಾರೆ. ಕುಮಾರಸ್ವಾಮಿಯವರ ಕೊಡುಗೆಗಳ ಬಗ್ಗೆ ಜನತೆಗೆ ಅರಿವಿದ್ದು, ಈ ಬಾರಿ ಸ್ಥಳೀಯ ಪಕ್ಷ ಆಡಳಿತಕ್ಕೆ ಬರಬೇಕೆಂಬ ಬಯಕೆ ಅವರಲ್ಲಿದೆ. ಪ್ರತಿ ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿದ್ದು, ಜನರ ಸಹಕಾರದಿಂದ ಗೆಲ್ಲುವ ವಿಶ್ವಾಸವಿದೆ ಎನ್ನುತ್ತಾರೆ ಪ್ರೊ. ನಾಗೇಶ ನಾಯ್ಕ, ಕಾಗಾಲ.

ಇದನ್ನೂ ಓದಿ : Karnataka Elections: ಕೈ ತೊರೆದು ತೆನೆ ಹೊತ್ತ ಚೈತ್ರಾ ಕೊಠಾರಕರ್; ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಿರೀಕ್ಷೆ

Exit mobile version