ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು ಬದಲಿಸಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದೇ ವೇಳೆ ಕಾಂಗ್ರೆಸ್‌ನಲ್ಲೂ ಮಹಿಳೆಗೇ ಟಿಕೆಟ್ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಈ ಹಿಂದೆ ಕಾಂಗ್ರೆಸ್‌ನಿಂದ ಗೆದ್ದು ಶಾಸಕಿಯಾಗಿದ್ದ ಶಕುಂತಲಾ ಶೆಟ್ಟಿ ಅವರಿಗೆ ಟಿಕೆಟ್ ಕೊಡಬೇಕು ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಆಗ್ರಹಿಸಿದರು. ಒಂದೊಮ್ಮೆ ಅವರಿಗೆ ಟಿಕೆಟ್ ನೀಡದೆ ಇದ್ದಲ್ಲಿ ತಾವೆಲ್ಲರೂ ರಾಜೀನಾಮೆ ನೀಡಿ, ಶಕುಂತಲಾ ಶೆಟ್ಟಿ ಅವರನ್ನು ಪಕ್ಷೇತರರನ್ನಾಗಿ ನಿಲ್ಲಿಸಿ ಗೆಲ್ಲಿಸಿಕೊಂಡು ಬರುವುದಾಗಿ ಪಣ ತೊಟ್ಟಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಮಾಜಿ ಶಾಸಕಿ ಹಾಗೂ ಕಾಂಗ್ರೆಸ್ ಮುಖಂಡರಾದ ಶಕುಂತಳಾ ಶೆಟ್ಟಿಯವರಿಗೆ ಟಿಕೆಟ್ ನೀಡದಿದ್ದಲ್ಲಿ ಪುತ್ತೂರು ಮಹಿಳಾ ಕಾಂಗ್ರೆಸ್ ನ ಎಲ್ಲ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುವುದಾಗಿಯೂ ಹಾಗು ಶಕುಂತಳಾ ಶೆಟ್ಟಿಯವರು ಪಕ್ಷೇತರರರಾಗಿ ಸ್ಪರ್ಧಿಸಲು ಅಗ್ರಹಿಸುವುದಾಗಿಯೂ ಮಹಿಳಾ ಕಾಂಗ್ರೆಸ್ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಶಾರದಾ ಅರಸ್, ಮತ್ತು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ವಿಶಾಲಾಕ್ಷಿ ಬನ್ನೂರು ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಶಕುಂತಳಾ ಶೆಟ್ಟಿಯವರು ತಮ್ಮ ಶಾಸಕತ್ವದ ಅವಧಿಯಲ್ಲಿ ಮಹಿಳೆಯರ ಏಳಿಗೆಗಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಮಹಿಳೆಯರ ರಕ್ಷಣೆಗೆ ಮಹಿಳಾ ಪೋಲಿಸ್ ಠಾಣೆಯನ್ನು ಪುತ್ತೂರಿನಲ್ಲಿ ಆರಂಭಿಸಿದರು. ಮಹಿಳೆಯರು ಆರ್ಥಿಕವಾಗಿ ಬೆಳೆಯಲು ಸ್ತ್ರೀ ಶಕ್ತಿ ಸಂಘಟನೆಗಳನ್ನು ಬಲಪಡಿಸಲು ಸ್ತ್ರೀ ಶಕ್ತಿ ಭವನದ ಸ್ಥಾಪನೆ ಮಾಡಿದ್ದಾರೆ. ಮಹಿಳೆಯರ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡುವ ಮೂಲಕ ಮಹಿಳೆಯರಿಗೆ ಭರವಸೆಯ ಆಶಾಕಿರಣವಾಗಿದ್ದಾರೆʼʼ ಎಂದರು.
ಬಿಜೆಪಿಯೇ ಟಿಕೆಟ್ ಕೊಟ್ಟಿದೆ, ಕಾಂಗ್ರೆಸ್ ಅವಗಣಿಸಬಾರದು
ಬಿಜೆಪಿಯು ದಕ್ಷಿಣ ಕನ್ನಡದಲ್ಲಿ ಮಹಿಳೆಯರಿಗೆ ಪುತ್ತೂರು ಮತ್ತು ಸುಳ್ಯದಲ್ಲಿ ಅವಕಾಶ ನೀಡಿದೆ. ಆದರೆ, ಕಾಂಗ್ರೆಸ್ ಪಕ್ಷ ಮಹಿಳೆಯನ್ನು ಕಡೆಗಣಿಸುವ ಮೂಲಕ ದಕ್ಷಿಣ ಕನ್ನಡದಲ್ಲಿ ಅತೀ ಹೆಚ್ಚು ಇರುವ ಮಹಿಳಾ ಮತದಾರರನ್ನು ಅವಮಾನಿಸುವ ಕೆಲಸದಲ್ಲಿ ತೊಡಗಿದೆ ಎಂದು ಅನಿಸುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಈ ವಿಷಯದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ರವಾನಿಸಿದ್ದಾರೆ
ಒಂದು ವೇಳೆ ಶಕುಂತಳಾ ಶೆಟ್ಟಿಯವರಿಗೆ ಟಿಕೆಟ್ ನಿರಾಕರಣೆ ಮಾಡಿದರೆ ಮಹಿಳಾ ಕಾಂಗ್ರೆಸ್ ಸಮಿತಿಯು ಸಾಮೂಹಿಕ ರಾಜಿನಾಮೆ ನೀಡವುದರ ಜೊತೆಗೆ, ಶಕುಂತಳಾ ಶೆಟ್ಟಿಯವರು ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಒತ್ತಾಯಿಸಲಿದೆ ಎಂದು ಹೇಳಿದರು.
ಕಳೆದ ಜನವರಿಯಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ನ ಪರಮೊಚ್ಚ ನಾಯಕಿ ಪ್ರಿಯಾಂಕ ಗಾಂಧಿಯವರ ನೇತೃತ್ವದಲ್ಲಿ ನಡೆದ ನಾ ನಾಯಕಿ ಕಾರ್ಯಕ್ರಮಕ್ಕೆ ಶಕುಂತಳಾ ಶೆಟ್ಟಿಯವರ ನೇತೃತ್ವದಲ್ಲಿ ಮೂರು ಬಸ್ಸಿನಷ್ಟು ಕಾರ್ಯಕರ್ತರು ಜಿಲ್ಲೆಯಿಂದ ತೆರಳಿ ಭಾಗವಹಿಸಿದ್ದಾರೆ. ಈ ವೇಳೆ ʼಗೃಹಲಕ್ಷ್ಮೀʼ ಎಂಬ ಅದ್ಭುತ ಕಾರ್ಯಕ್ರಮ ಮಹಿಳೆಯರಿಗಾಗಿ ಪಕ್ಷ ಘೋಷಿಸಿದೆ. ಇಂತಹ ಪಕ್ಷ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಲು ಹಿಂದೇಟು ಹಾಕಬಾರದು. ಅನುಭವಿ ನಾಯಕಿ ಶಕುಂತಳಾ ಶೆಟ್ಟಿಯವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದರು. ಕಾಂಗ್ರೆಸ್ ಮುಖಂಡೆಯರಾದ ವಿಲ್ಮಾ ಗೋನ್ಸಾಲ್ವಿಸ್, ಸುಧಾ ಕುಂಜತ್ತಾಯ, ಸೀತಾಭಟ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪುತ್ತೂರಿನಲ್ಲಿ ಕಾಂಗ್ರೆಸ್ ಈ ಬಾರಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲುವ ಪ್ರಯತ್ನದಲ್ಲಿದೆ. ಈ ಹಿಂದೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಅಶೋಕ್ ರೈ ಅವರು ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದು ಅವರಿಗೆ ಟಿಕೆಟ್ ಎಂಬ ಮಾತು ಕೇಳಿಬರುತ್ತಿದೆ. ಈಗ ಬಿಜೆಪಿಯೇ ಮಹಿಳೆಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಹೊಸ ಚರ್ಚೆ ಶುರುವಾಗಿದೆ.