Site icon Vistara News

Karnataka Elections : ಪುತ್ತೂರು ಕಣದಲ್ಲಿ ಬಿಜೆಪಿ Vs ಹಿಂದುತ್ವ; ಬಂಡುಕೋರ ಪುತ್ತಿಲ ವಿರುದ್ಧ ಜಗದೀಶ್‌ ಕಾರಂತ ಅಸ್ತ್ರ ಪ್ರಯೋಗಕ್ಕೆ ಆರೆಸ್ಸೆಸ್‌ ರೆಡಿ

Puthila Jagadish karant

#image_title

ಮಂಗಳೂರು: ರಾಜ್ಯದಲ್ಲಿ ಭಾರತೀಯ ಜನತಾಪಕ್ಷಕ್ಕೆ ವಿಧಾನಸಭಾ ಚುನಾವಣೆಯಲ್ಲಿ (Karnataka Elections) ಅತ್ಯಂತ ಪ್ರತಿಷ್ಠೆಯ ಕಣಗಳಲ್ಲಿ ಪುತ್ತೂರು ಕೂಡಾ ಒಂದು. ಹಿಂದಿನಿಂದಲೂ ಮೂಲ ಹಿಂದುತ್ವ, ಮೂಲ ಆರೆಸ್ಸೆಸ್‌ ಮತ್ತು ಬಿಜೆಪಿ ನಡುವೆ ಇಲ್ಲಿ ಮುಖಾಮುಖಿ ನಡೆಯುತ್ತಲೇ ಇದೆ. ಈ ಬಾರಿಯೂ ಇದು ತಾರಕಕ್ಕೆ ಹೋಗಿದೆ.

ಪುತ್ತೂರಿನ ಚುನಾವಣಾ ಕಣದಲ್ಲಿ ಈಗ ಬಿಜೆಪಿ v/s ಹಿಂದುತ್ವ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಹಾಲಿ ಶಾಸಕರಾಗಿರುವ ಸಂಜೀವ ಮಠಂದೂರು ಅವರಿಗೆ ಟಿಕೆಟ್‌ ನಿರಾಕರಿಸಿದ ಬಿಜೆಪಿ ಅವರ ಜಾಗಕ್ಕೆ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರನ್ನು ತಂದು ಕೂರಿಸಿದೆ. ಇದನ್ನು ಕಂಡು ಬಿಜೆಪಿ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಹಿಂದು ಮುಖಂಡ ಅರುಣ್‌ ಪುತ್ತಿಲ ಸಿಟ್ಟಿಗೆದ್ದಿದ್ದಾರೆ. ಅವರು ಮೊದಲು ಸಭೆಯೊಂದನ್ನು ನಡೆಸಿ ಬಳಿಕ ದೊಡ್ಡ ಮೆರವಣಿಗೆ ಮೂಲಕ ನಾಮಪತ್ರವನ್ನೂ ಸಲ್ಲಿಸಿದ್ದಾರೆ.

ಹಿಂದು ಸಂಘಟನೆಗಳಲ್ಲಿ ಕೆಲಸ ಮಾಡಿರುವ ಅರುಣ್‌ ಪುತ್ತಿಲ ಅವರು ಕಣಕ್ಕಿಳಿದಿರುವುದು, ಅವರಿಗೆ ಸಿಗುತ್ತಿರುವ ಜನಬೆಂಬಲ ಮತ್ತು ಹಿಂದುಗಳಲ್ಲಿರುವ ಆಕ್ರೋಶವನ್ನು ಮನಗಂಡ ಬಿಜೆಪಿ ಇದೀಗ ಸೋಲಿನ ಭೀತಿಯನ್ನು ಎದುರಿಸುತ್ತಿದೆ.

ಹೀಗಾಗಿ ಅರುಣ್‌ ಪುತ್ತಿಲ ಅವರನ್ನು ಹೇಗಾದರೂ ಮಾಡಿ ನಿಯಂತ್ರಿಸಬೇಕು ಎನ್ನುವ ಉದ್ದೇಶದಿಂದ ಜಗದೀಶ್‌ ಕಾರಂತ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ. ಆರೆಸ್ಸೆಸ್‌ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಒಂದು ಹಂತದಲ್ಲಿ ಅರುಣ್‌ ಪುತ್ತಿಲ ಅವರನ್ನು ಸಮಾಧಾನ ಮಾಡಲು ಯತ್ನಿಸಿದ ಆರೆಸ್ಸೆಸ್‌ ಅದು ಸಾಧ್ಯವಾಗದೆ ಇದ್ದಾಗ ಜಗದೀಶ್‌ ಕಾರಂತ ಅವರ ಮೊರೆ ಹೋಗಿದೆ.

ಜಗದೀಶ್‌ ಕಾರಂತ ಅವರು ಹಿಂದೂ ಜಾಗರಣಾ ವೇದಿಕೆಯ ಪರಮೋಚ್ಛ ನಾಯಕರಾಗಿದ್ದು, ಅವರ ಮೂಲಕ ಪುತ್ತಿಲ ಸೈನ್ಯವನ್ನು ಕಟ್ಟಿ ಹಾಕಲು ಪ್ಲ್ಯಾನ್‌ ಮಾಡಿದೆ ಎನ್ನಲಾಗಿದೆ.

ಅರುಣ್‌ ಪುತ್ತಿಲ ಅವರು ಬಿಜೆಪಿ, ಆರೆಸ್ಸೆಸ್‌ ಮಾತ್ರವಲ್ಲ, ಹಿಂದೂ ಸಂಘಟನೆಗಳ ಹಿರಿಯರ ಮಾತಿಗೂ ಮನ್ನಣೆ ನೀಡುತ್ತಿಲ್ಲ. ಯಾವ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವುದಿಲ್ಲ. ಇದು ಹಿಂದೂ ಅಸ್ಮಿತೆಯ ಪ್ರಶ್ನೆ ಎಂಬ ವಾದವನ್ನು ಮುಂದಿಡುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವಾಗ ಇಡೀ ಪುತ್ತೂರು ಪೇಟೆಯ ತುಂಬ ಜನಸಾಗರವೇ ನೆರೆದಿತ್ತು. ಇದನ್ನು ನೋಡಿ ಬಿಜೆಪಿ ಬೆಚ್ಚಿಬಿದ್ದಿದೆ. ಪರಿಸ್ಥಿತಿ ಹೀಗೇ ಅದರೆ ಬಿಜೆಪಿಗೆ ಸೋಲು ನಿಶ್ಚಿತ ಎಂಬ ಭಯಗೊಂಡಿದೆ ಎನ್ನಲಾಗಿದೆ.

ಜಗದೀಶ್‌ ಕಾರಂತರು ಯಾಕೆ?

ಈಗ ಅರುಣ್‌ ಕುಮಾರ್‌ ಪುತ್ತಿಲ ಜೊತೆ ಗುರುತಿಸಿಕೊಂಡಿರುವ ಹಿಂದು ಹುಡುಗರ ಪೈಕಿ ಬಹುತೇಕರು ಹಿಂಜಾವೇ ಕಾರ್ಯಕರ್ತರು. ಅರುಣ್‌ ಕುಮಾರ್‌ ಪುತ್ತಿಲ ಈ ಹಿಂದೆ ಬಜರಂಗದಳ, ಶ್ರೀರಾಮಸೇನೆ ಹಾಗೂ ಹಿಂಜಾವೇಯಲ್ಲಿ ಗುರುತಿಸಿಕೊಂಡಿದ್ದರು. ಹೀಗಾಗಿ ಎಲ್ಲ ಸಂಘಟನೆಗಳ ಜತೆಗೂ ಉತ್ತಮ ಬಾಂಧವ್ಯವಿದೆ.

ಜಗದೀಶ್‌ ಕಾರಂತ ಅವರನ್ನು ಕರೆಸಿ ಒಂದು ಕಡೆದ ಅರುಣ್‌ ಪುತ್ತಿಲ ಅವರ ಮನವೊಲಿಕೆ ಮಾಡಲು ಪ್ರಯತ್ನಿಸುವುದು, ಅದಕ್ಕೆ ಪುತ್ತಿಲ ಒಪ್ಪದೆ ಹೋದರೆ ಜಗದೀಶ್‌ ಕಾರಂತರನ್ನು ಬಳಸಿಕೊಂಡು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರನ್ನು ಸೈಲೆಂಟ್‌ ಆಗುವಂತೆ ಮಾಡುವುದು ಉದ್ದೇಶ ಎನ್ನಲಾಗಿದೆ. ಹೀಗಾಗಿ ಮೊದಲು ಪುತ್ತೂರಿಗೆ ಆಗಮಿಸಿ ಹಿಂದು ಜಾಗರಣ ವೇದಿಕೆ ಬೈಠಕ್‌ ನಡೆಸಿ, ಅರುಣ್ ಪುತ್ತಿಲ ಬಲ ಕುಗ್ಗಿಸಲು ತಂತ್ರಗಾರಿಕೆ ನಡೆಯುತ್ತಿದೆ.

ಇದನ್ನೂ ಓದಿ : Karnataka Elections : ಸುಳ್ಯ ಅಸೆಂಬ್ಲಿ ಕಣದಲ್ಲಿ ಈ ಬಾರಿ ಇಬ್ಬರು ಮಹಿಳೆಯರು; ಪುತ್ತೂರು ಬಿಜೆಪಿ ಅಭ್ಯರ್ಥಿ ಕೂಡಾ ಸುಳ್ಯದವರೆ!

Exit mobile version