Site icon Vistara News

Karnataka Elections : ಯು.ಟಿ. ಖಾದರ್‌ 3,500 ಕೋಟಿ ಒಡೆಯ; SDPI ಅಭ್ಯರ್ಥಿ ರಿಯಾಜ್‌ ಫರಂಗಿಪೇಟೆ ಆರೋಪ

#image_title

ಉಳ್ಳಾಲ (ಮಂಗಳೂರು): ಮಂಗಳೂರು ಕ್ಷೇತ್ರದ (ಹಿಂದಿನ ಉಳ್ಳಾಲ) ಕಾಂಗ್ರೆಸ್‌ ಶಾಸಕರಾಗಿರುವ ಯು.ಟಿ ಖಾದರ್ ಅವರು 3,500 ಕೋಟಿ ರೂ. ಅಧಿಕೃತ ಆಸ್ತಿಯ ಒಡೆಯ ಹಾಗೂ 10,000 ಕೋಟಿಗಳ ಅನಧಿಕೃತ ಒಡೆಯರಾಗಿದ್ದಾರೆ ಎಂದು ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿ ರಿಯಾಜ್‌ ಫರಂಗಿಪೇಟೆ ಗಂಭೀರ ಆರೋಪ ಮಾಡಿದ್ದಾರೆ. ಅವರು ತೊಕ್ಕೊಟ್ಟು ಮೈದಾನದಲ್ಲಿ ಎಸ್‌ಡಿಪಿಐ ಮಂಗಳೂರು ವಿಧಾಸನಭಾ ಕ್ಷೇತ್ರದ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಪ್ರಯುಕ್ತ ಹಮ್ಮಿಕೊಳ್ಳಲಾದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ʻʻಸರಳ ವ್ಯಕ್ತಿತ್ವ, ಸ್ಟೀಲ್ ಲೋಟದಲ್ಲಿ ಚಹಾ ಕುಡಿಯುವವರು, ಕೆ.ಟಿಯನ್ನು ಸೇವಿಸುವವರು ಉಳ್ಳಾಲದ ಶಾಸಕರು. ಚುನಾವಣೆ ಬಂದಾಗ ಎಲ್ಲರಿಂದಲೂ ಹಣ ಸಂಗ್ರಹಿಸಿ ಚುನಾವಣೆ ಎದುರಿಸುತ್ತಾರೆ. ಆದರೆ ಯುಎಇಯ ಬರ್ ದುಬಾಯಿಯಲ್ಲಿರುವ ಎನ್ ಬಿಡಿ ಎಮಿರೇಟ್ಸ್ ಬ್ಯಾಂಕಿನಲ್ಲಿ ಯು.ಟಿ ಅಬ್ದುಲ್ ಖಾದರ್ ಅಲೀಫ್ ಆಲಿ ಹೆಸರಿನಲ್ಲಿರುವ 3,500 ಕೋಟಿ ರೂ. ಮತ್ತು 10,000 ಕೋಟಿ ರೂ. ಯಾರದ್ದು ಅನ್ನುವುದನ್ನು ಪ್ರಶ್ನಿಸಬೇಕಿದೆʼʼ ಎಂದು ರಿಯಾಜ್‌ ಹೇಳಿದರು.

ʻʻ2013ರಿಂದ 2019ರವರೆಗೆ ಇದೇ ಹೆಸರಿನಲ್ಲಿ ದುಡ್ಡು ಜಮಾವಣೆ ಆಗಿದೆ. 2019ರ ಇಡಿ ಮತ್ತು ಐಟಿ ದಾಳಿಗೆ ಹೆದರಿ ಅದೇ ಹಣ ಮತ್ತೆ ಯುಕೆ ಬ್ಯಾಂಕಿಗೆ ವರ್ಗಾಯಿಸಲಾಗಿದೆ. ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್ ಶಾಸಕರ ಟೇಬಲಿಗೆ ಬರುವ ದಿನಗಳು ದೂರವಿಲ್ಲʼʼ ಎಂದು ರಿಯಾಜ್‌ ಹೇಳಿದರು.

ನಾಮಪತ್ರ ಸಲ್ಲಿಕೆಗೆ ಮೊದಲು ನಡೆದ ಎಸ್‌ಡಿಪಿಐ ಕಾರ್ಯಕರ್ತರ ಮೆರವಣಿಗೆ

ಹೆದರಿಸುವ ಶಕುನಿ ತಂತ್ರ ಬೇಡ ಎಂದ ರಿಯಾಜ್‌

ʻʻಚುನಾವಣೆಯನ್ನು ಚುನಾವಣೆ ರೀತಿಯಲ್ಲಿ ಎದುರಿಸಿ, ಕಾರ್ಯಕರ್ತರ ಸಂಬಂಧಿಕರನ್ನು ಹೆದರಿಸುವ ಶಕುನಿ ತಂತ್ರದ ಕೆಲಸವನ್ನು ಬಿಟ್ಟುಬಿಡಿʼʼ ಎಂದ ಅವರು, ಉಳ್ಳಾಲದಲ್ಲಿ ಎಸ್‍ಡಿಪಿಐನ ಹೋರಾಟ ಹತ್ತಿಕ್ಕುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇದೆ ಎಂದರು.

ʻʻಯುನಿಟಿ ಸಭಾಂಗಣದಲ್ಲಿ ನಡೆಯಬೇಕಾಗಿದ್ದ ಕಾರ್ಯಕ್ರಮಕ್ಕೆ ಸಭಾಂಗಣದ ಮಾಲೀಕರಿಗೆ ಒತ್ತಡ ಹೇರಿ ಅವಕಾಶ ಕಲ್ಪಿಸದಂತೆ ನೋಡಿಕೊಂಡಿದ್ದಾರೆ. ಹುಟ್ಟು ಹೋರಾಟಗಾರರಿಗೆ ಸಭಾಂಗಣದ ಅವಶ್ಯಕತೆ ಬರುವುದಿಲ್ಲ. ಸುಡುಬಿಸಿಲಿನಲ್ಲೇ ಕುಳಿತು ಸಾರ್ವಜನಿಕ ಸಭೆಯನ್ನು ನಡೆಸಿದ್ದೇವೆ. ಸುಡುಬಿಸಿಲಿನಲ್ಲಿ ಕುಳಿತುಕೊಳ್ಳುವಂತೆ ಮಾಡಿದವರಿಗೆ ಶಾಪ ತಟ್ಟದೆ ಬಿಡುವುದಿಲ್ಲʼʼ ಎಂದು ರಿಯಾಜ್‌ ಫರಂಗಿಪೇಟೆ ಹೇಳಿದರು.

ಮೀಸಲಾತಿ ರದ್ದು ಮಾಡಿದಾಗಲೂ ಮಾತನಾಡಲಿಲ್ಲ

ʻʻಸಿದ್ಧರಾಮಯ್ಯ ಸರಕಾರದ ಅವಧಿಯಲ್ಲಿ ಜಿಲ್ಲೆಯಿಂದ ಆಯ್ಕೆಯಾದ ನಾಲ್ವರು ಅಲ್ಪಸಂಖ್ಯಾತ ಶಾಸಕರು ಜಿಲ್ಲೆಯ ಮುಸ್ಲಿಂ ಸಮುದಾಯದ ಪರವಾಗಿ ನಿಲ್ಲಲಿಲ್ಲ. ಲಿಂಗಾಯತ, ಕುರುಬರು, ಒಕ್ಕಲಿಗರು ಸಮಸ್ಯೆ ಬಗ್ಗೆ ಮಾತನಾಡಿದಾಗ ಕೋಮುವಾದಿಗಳಾಗಲಿಲ್ಲ. ಆದರೆ ಮುಸ್ಲಿಂ ಸಮುದಾಯದ ಅನ್ಯಾಯದ ಕುರಿತು ಚರ್ಚಿಸಿದಾಗ ಕೋಮುವಾದಿಗಳು ಅನ್ನುತ್ತಾರೆ. ಜಿಲ್ಲೆಯ ನಿವಾಸಿ ಬಿಜೆಪಿ ರಾಜ್ಯಾಧ್ಯಕ್ಷರು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಹಿಂದೂ ಸಹೋದರರನ್ನು ಮುಸ್ಲಿಂ ಸಮುದಾಯಕ್ಕೆ ಎತ್ತಿಕಟ್ಟುವ ಕೆಲಸದಲ್ಲಿ ನಿರತವಾಗಿದ್ದಾರೆʼʼ ಎಂದು ರಿಯಾಜ್‌ ಆಕ್ಷೇಪಿಸಿದರು.

ʻʻʻರಾಜ್ಯದಲ್ಲಿ 2ಬಿ ಮೀಸಲಾತಿಯನ್ನು ರದ್ದುಗೊಳಿಸಿ ಮುಸ್ಲಿಂ ಸಮುದಾಯವನ್ನು ಲಿಂಗಾಯತ, ಒಕ್ಕಲಿಗ ಸಮುದಾಯದವರನ್ನು ಎತ್ತಿಕಟ್ಟಿಹಾಕಲಾಗಿದೆ. ಇದನ್ನು ಪ್ರಬಲವಾಗಿ ವಿರೋಧಿಸಬೇಕಾದ ಕಾಂಗ್ರೆಸ್ ಬೆನ್ನೆಲುಬು ಇಲ್ಲದಂತೆ ವರ್ತಿಸಿ ಬಿಜೆಪಿಯ ಬಿ ಟೀಂ ಆಗಿರುವುದರಲ್ಲಿ ಸಂದೇಹವಿಲ್ಲʼʼ ಎಂದರು.

ʻʻʻ12 ವರ್ಷಗಳ ಹಿಂದೆ ತೊಕ್ಕೊಟ್ಟುವಿನಿಂದ ಮೆಲ್ಕಾರ್ ಮಂಜೂರಾದ ರಸ್ತೆಯನ್ನು ನಿಧಾನಗತಿಯಲ್ಲಿ ನಡೆಸಿದ ಶಾಸಕರು ಅದನ್ನೇ ಅಭಿವೃದ್ಧಿ ಎಂದು ಹೇಳುತ್ತಿದ್ದಾರೆ. ಮಾಸ್ತಿಕಟ್ಟೆಯ 12 ಎಕರೆ ಜಾಗದಲ್ಲಿ ಕ್ರೀಡಾಭಿವೃದ್ಧಿ ಇಲಾಖೆ, ಮೂಡ ಇಲಾಖೆ ಸುಸಜ್ಜಿತ ಕ್ರೀಡಾಂಗಣ ಮತ್ತು ಸ್ವಿಮ್ಮಿಂಗ್ ಪೂಲ್ ನಿರ್ಮಾಣಕ್ಕೆ ಜಾಗ ಮಂಜೂರಾತಿಗೊಳಿಸಿದರೂ , ಜಾಗದ ಮಾಲೀಕ ಕಮೀಷನ್ ಕೊಡಲು ನಿರಾಕರಿಸಿರುವುದಕ್ಕೆ ಯೋಜನೆಯನ್ನೇ ಶಾಸಕರು ವಾಪಸ್ಸು ಕಳುಹಿಸಿರುವುದು ನಾಚಿಕೆಗೇಡುʼʼ ಎಂದರು.

ʻʻಒಂಭತ್ತು ಕೆರೆಯ 390 ಮನೆಗಳನ್ನು ತೆಗೆದು ಸುಸಜ್ಜಿತ ವಸತಿ, ವಾಣಿಜ್ಯ ಕಟ್ಟಡ ನಿರ್ಮಿಸುವುದನ್ನು ಹೇಳಿದ್ದರೂ ಈವರೆಗೆ ಈಡೇರಿಲ್ಲ. ಖಾಸಗಿ ವೈದ್ಯಕೀಯ ಕಾಲೇಜಿನವರು ನೀಡುತ್ತಿರುವ ಕಿಕ್ ಬ್ಯಾಕ್ ನಿಂದ ಮುಂದೆಯೂ ಸರಕಾರಿ ಆಸ್ಪತ್ರೆಗಳು ಆಗುವುದು ಮರೀಚಿಕೆʼʼ ಎಂದು ಹೇಳಿದರು.

ಎಸ್‌ಡಿಪಿಐ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಮುಸ್ಲಿಂ ಮಹಿಳೆಯರೂ ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದು ಕಂಡುಬಂತು.

ಇದನ್ನೂ ಓದಿ : Karnataka Elections : ಮೇ 13ಕ್ಕೆ ರಿಸಲ್ಟ್‌ ಬಂದಾಗ ನಾನೇನು ಅಂತ ಗೊತ್ತಾಗಲಿದೆ; ಅವರೇನು ದೊಡ್ಡ ನಾಯಕನಾ ಅಂದವರಿಗೆ ಶೆಟ್ಟರ್‌ ಉತ್ತರ

Exit mobile version