Site icon Vistara News

Karnataka Elections : ಈಶ್ವರಪ್ಪಗೇ ಟಿಕೆಟ್‌ ಕೊಡಿ, ತಪ್ಪಿದರೆ ಕಾಂತೇಶ್‌ಗೆ ಕೊಡಲೇಬೇಕು; ಬಿಎಸ್‌ವೈಗೆ ಶಿವಮೊಗ್ಗ ಪಾಲಿಕೆ ಸದಸ್ಯರ ಒತ್ತಡ

Shivamogga BJP BSY

#image_title

ಶಿವಮೊಗ್ಗ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ (Karnataka Elections) ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೇ ಬಿಜೆಪಿ ಟಿಕೆಟ್‌ ಕೊಡಬೇಕು. ಒಂದು ವೇಳೆ ಅನಿವಾರ್ಯ ಕಾರಣಗಳಿಂದ ಸಾಧ್ಯವಾಗದೆ ಇದ್ದರೆ ಅವರ ಪುತ್ರ ಕೆ.ಈ. ಕಾಂತೇಶ್‌ ಅವರಿಗೆ ನೀಡಲೇಬೇಕು ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಲಾಗಿದೆ.

ಶಿವಮೊಗ್ಗ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಬುಧವಾರ ಶಿವಮೊಗ್ಗದಿಂದ ವಾಹನ ಮಾಡಿಕೊಂಡು ಬೆಂಗಳೂರಿಗೆ ಬಂದು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆ ಮಂಡಿಸಿದರು. ಈಶ್ವರಪ್ಪ ಅವರಿಗೇ ಟಿಕೆಟ್‌ ಕೊಡಿಸಬೇಕು ಎನ್ನುವುದು ಅವರ ಪ್ರಧಾನ ಆಗ್ರಹವಾಗಿತ್ತು.

ಈ ಸಂದರ್ಭದಲ್ಲಿ ಮೇಯರ್ ಶಿವಕುಮಾರ್ ಸೇರಿದಂತೆ ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರಾದ ಉಪ ಮೇಯರ್ ಲಕ್ಷ್ಮಿಃ ಶಂಕರ ನಾಯ್ಕ್, ಸದಸ್ಯರಾದ ಸುರೇಖ ಮುರಳೀಧರ್, ವಿಶ್ವಾಸ್, ಗನ್ನಿ ಶಂಕರ್, ಪ್ರಭಾಕರ್, ಆರತಿ ಪ್ರಜಾಶ್, ಅನಿತಾ, ಯು.ಎಚ್. ವಿಶ್ವನಾಥ್, ಎಸ್.ಜಿ. ರಾಜು, ಪ್ರಭಾಕರ್, ಮಂಜುನಾಥ್, ಸಂಗೀತಾ ನಾಗರಾಜ್, ಆಶಾ ಚಂದ್ರಪ್ಪ, ರಾಹುಲ್ ಬಿದರೆ, ಭಾನುಮತಿ ಶೇಟ್, ಲತಾ ಗಣೇಶ್, ಶಿರೀಶ್, ಮೂರ್ತಿ ಸೇರಿದಂತೆ ಎಲ್ಲಾ ಬಿಜೆಪಿ ಸದಸ್ಯರು ಹಾಜರಿದ್ದರು.

ಬಿಎಸ್‌ ಯಡಿಯೂರಪ್ಪ ಭರವಸೆ

ಶಿವಮೊಗ್ಗ ನಗರದ ಹೆಸರು ಎರಡನೇ ಪಟ್ಟಿಯಲ್ಲಿಯೂ ಇಲ್ಲ. ಮೂರನೇ ಪಟ್ಟಿಯಲ್ಲಿ ತಮ್ಮ ಬೇಡಿಕೆಯಂತೆ ಅಭ್ಯರ್ಥಿ ಹೆಸರು ಘೋಷಿಸುವಂತೆ ಒತ್ತಾಯಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಬಿ ಎಸ್ ಯಡಿಯೂರಪ್ಪ, ವರಿಷ್ಠರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಶಿವಮೊಗ್ಗದಲ್ಲಿ ಮುಂದುವರಿದ ಪ್ರತಿಭಟನೆ

ಈಶ್ವರಪ್ಪ ಅವರನ್ನು ಬಲವಂತವಾಗಿ ನಿವೃತ್ತಿ ನಿರ್ಧಾರಕ್ಕೆ ದೂಡಲಾಗಿದೆ ಎಂದು ಆರೋಪಿಸಿರುವ ಬಿಜೆಪಿ ಕಾರ್ಯಕರ್ತರು ಅವರು ನಿವೃತ್ತಿಯಿಂದ ಹಿಂದೆ ಸರಿಯಬೇಕು, ಪಕ್ಷ ಅವರಿಗೆ ಸ್ಪರ್ಧಿಸಲು ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿ ಶಿವಮೊಗ್ಗದಲ್ಲಿ ಹಲವು ಕಡೆ ಪ್ರತಿಭಟನೆಗಳು ನಡೆದಿವೆ.

ಶಿವಮೊಗ್ಗ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು, ಹಲವು ಇತರ ಸ್ಥಳೀಯ ಸಂಸ್ಥೆಗಳ ಸದಸ್ಯರು ಈಗಾಗಲೇ ತಮ್ಮ ಹುದ್ದೆಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಮೇಯರ್, ಉಪ ಮೇಯರ್‌ ಸೇರಿ ಎಲ್ಲ 19 ಜನ ಬಿಜೆಪಿ ಸದಸ್ಯರು ರಾಜೀನಾಮೆಗೆ ನಿರ್ಧಾರ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ಬುಧವಾರ (ಏಪ್ರಿಲ್‌ 12) ಈಶ್ವರಪ್ಪ ಅಭಿಮಾನಿಗಳು ಬಿಜೆಪಿ ಜಿಲ್ಲಾ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಪಕ್ಷದ ವಿವಿಧ ಕಾರ್ಯಕರ್ತರು, ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಕಚೇರಿ ಎದುರು ರಸ್ತೆ ತಡೆ ನಡೆಸಿ ಆಕ್ರೋಶವನ್ನು ಹೊರಹಾಕಿದ್ದಾರೆ.

ರಾಜೀನಾಮೆಗೆ ನಿರ್ಧಾರ

ರಾಜೀನಾಮೆ ಪತ್ರ ಸಿದ್ಧ ಮಾಡಿಕೊಂಡಿರುವ ಪದಾಧಿಕಾರಿಗಳು, ಸಾಮೂಹಿಕ ರಾಜೀನಾಮೆಗೆ ತೀರ್ಮಾನಿಸಿದ್ದಾರೆ. ವಿವಿಧ ಘಟಕಗಳ ಪದಾಧಿಕಾರಿಗಳು ಈ ನಿರ್ಧಾರಕ್ಕೆ ಬಂದಿದ್ದರು. ಈ ನಡುವೆ ಮಧ್ಯಪ್ರವೇಶ ಮಾಡಿರುವ ಮುಖಂಡರು, ಪ್ರತಿಭಟನಾಕಾರರನ್ನು ಕಚೇರಿಯೊಳಗೆ ಕರೆದೊಯ್ದು ಮಾತುಕತೆ ನಡೆಸಿದ್ದಾರೆ. ಕಾರ್ಯಕರ್ತರ ಅಹವಾಲುಗಳನ್ನು ಆಲಿಸಿದ್ದಾರೆ.

ಈ ವೇಳೆ ಮಾತನಾಡಿದ ಕಾರ್ಯಕರ್ತರು, ಈಶ್ವರಪ್ಪ ಅವರ ನಿವೃತ್ತಿ ಘೋಷಣೆಯನ್ನು ಅಂಗೀಕರಿಸಬಾರದು. ಈಶ್ವರಪ್ಪ ಅವರಿಗೇ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು. ನಗರಾಧ್ಯಕ್ಷ ಜಗದೀಶ್, ವಿಭಾಗ ಉಸ್ತುವಾರಿ ಗಿರೀಶ್ ಪಟೇಲ್, ಶಿವಮೊಗ್ಗ ಕ್ಷೇತ್ರ ಉಸ್ತುವಾರಿ ಜ್ಞಾನೇಶ್ವರ ಮತ್ತಿತರರು ಭಾಗಿಯಾಗಿದ್ದರು. ಆದರೆ, ಮಾತುಕತೆ ಫಲಪ್ರದ ಆಗಿರುವ ಹಿನ್ನೆಲೆಯಲ್ಲಿ ರಾಜೀನಾಮೆಗೆ ನಿರ್ಧರಿಸಿದ್ದಾರೆ.

ಇದನ್ನೂ ಓದಿ Karnataka Election 2023: ಈಶ್ವರಪ್ಪ ನಿವೃತ್ತಿಗೂ ನನ್ನ ನಿರ್ಧಾರಕ್ಕೂ ಯಾವುದೇ ಸಂಬಂಧ ಇಲ್ಲ; ನನ್ನ ಸ್ಪರ್ಧೆ ನಿಶ್ಚಿತ: ಆಯನೂರು ಮಂಜುನಾಥ್

Exit mobile version