Site icon Vistara News

Karnataka Elections : ಸಚಿವ ಸೋಮಣ್ಣ – ಡಿಕೆಶಿ ಜತೆಯಾಗಿ ಪ್ರಯಾಣಿಸುತ್ತಿರುವ ಫೋಟೊ ವೈರಲ್‌, ಕೈ ಸೇರೋದು ಫಿಕ್ಸಾ?

V Somannna

#image_title

ಬೆಂಗಳೂರು: ಅತ್ಯಂತ ಮಹತ್ವದ ಮತ್ತು ಕುತೂಹಲಕಾರಿ ಬೆಳವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಸಚಿವ ವಿ. ಸೋಮಣ್ಣ ಅವರು ಒಂದೆ ವಿಮಾನದಲ್ಲಿ ಜತೆಯಾಗಿ ಪ್ರಯಾಣಿಸುತ್ತಿರುವ ಚಿತ್ರವೊಂದು ವೈರಲ್‌ ಆಗಿದೆ. ಇದು ಈಗ ನಡೆಯುತ್ತಿರುವ ರಾಜಕೀಯ ಚರ್ಚೆಗೆ ಹೊಸ ತಿರುವನ್ನು ನೀಡಿದೆ. ಜತೆಗೆ ವಿ. ಸೋಮಣ್ಣ (V. Somanna) ಅವರು ಕಾಂಗ್ರೆಸ್‌ ಸೇರುವುದು ಖಚಿತವೇ ಎಂಬ ಪ್ರಶ್ನೆಗೆ ಇನ್ನಷ್ಟು ಸಾಕ್ಷ್ಯಗಳು ಸಿಕ್ಕಿದಂತಾಗಿವೆ. ಈ ನಡುವೆ, ವಿ. ಸೋಮಣ್ಣ ಅವರು ಮಧ್ಯಾಹ್ನ 12.15ಕ್ಕೆ ಪತ್ರಿಕಾಗೋಷ್ಠಿಯೊಂದನ್ನು ಕರೆದಿದ್ದು ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

ಮಾಜಿ ಸಚಿವ ವಿ. ಸೋಮಣ್ಣ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರುತ್ತಾರೆ ಎಂಬ ಸುದ್ದಿ ಕಳೆದ ಕೆಲವು ತಿಂಗಳುಗಳಿಂದಲೇ ಹರಿದಾಡುತ್ತಿದ್ದು, ಇತ್ತೀಚೆಗೆ ತೀವ್ರತೆ ಹೆಚ್ಚಾಗಿದೆ. ಇದೀಗ ಡಿ.ಕೆ.ಶಿ ಮತ್ತು ಅವರು ಜತೆಯಾಗಿ ಕುಳಿತು ಪ್ರಯಾಣಿಸುತ್ತಿರುವ ಮತ್ತು ಆತ್ಮೀಯವಾಗಿ ಹರಟುತ್ತಿರುವ ಚಿತ್ರದ ಹಿಂದೆ ಏನೇನೋ ಕಥೆಗಳಿವೆ ಎಂದು ಹೇಳಲಾಗುತ್ತಿದೆ.

ವಿ. ಸೋಮಣ್ಣ ಅವರು ಕಾಂಗ್ರೆಸ್‌ ಸೇರಲು ಮುಂದಾಗಿದ್ದಕ್ಕೆ ಪ್ರಮುಖ ಕಾರಣ ಅವರ ಮಗನಿಗೆ ಟಿಕೆಟ್‌ ಕೊಡಬೇಕು ಎನ್ನುವ ಬೇಡಿಕೆ. ಬಿಜೆಪಿಯಲ್ಲಿ ತಂದೆ-ಮಗ ಇಬ್ಬರಿಗೂ ಟಿಕೆಟ್‌ ಕೊಡುವುದಿಲ್ಲ ಎಂಬ ಸುದ್ದಿ ಇರುವುದರಿಂದ ಕೆರಳಿದ ಅವರು ಪಕ್ಷವನ್ನೇ ಬಿಡುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಅದರ ಜತೆಗೆ ಅವರಿಗೆ ಆರ್‌. ಅಶೋಕ್‌ ಸೇರಿದಂತೆ ಬಿಜೆಪಿಯ ಕೆಲವು ಸಚಿವರ ಮೇಲೆ ಅಸಮಾಧಾನವಿದೆ. ಬೆಂಗಳೂರು ಉಸ್ತುವಾರಿ ನೀಡಿಲ್ಲ ಎಂಬ ಆಕ್ರೋಶವೂ ಇದೆ. ಇದೆಲ್ಲ ಕಾರಣ ಇಟ್ಟು ಕಾಂಗ್ರೆಸ್‌ ಬಾಗಿಲು ತಟ್ಟುತ್ತಿದ್ದಾರೆ ಎನ್ನಲಾಗಿದೆ. ಅದರ ನಡುವೆ ಈ ಚಿತ್ರ ಕಾಣಿಸಿಕೊಂಡಿದೆ.

ಹಾಗಿದ್ದರೆ ಯಾವಾಗದ ಫೋಟೊ ಇದು?

ಡಿ.ಕೆ. ಶಿವಕುಮಾರ್‌ ಮತ್ತು ಸೋಮಣ್ಣ ಅವರು ಜತೆಯಾಗಿ ಪ್ರಯಾಣ ಮಾಡಿದ್ದು ಯಾವಾಗ? ಎಲ್ಲಿಂದ ಎಲ್ಲಿಗೆ ಹೋದರು ಎಂಬಿತ್ಯಾದಿ ಪ್ರಶ್ನೆಗಳು ಈಗಾಗಲೇ ಭಾರಿ ಚರ್ಚೆಗೆ ಒಳಗಾಗಿದೆ. ಇದು ಮೂರು ತಿಂಗಳ ಹಿಂದಿನ‌ ಪೋಟೊ ಎಂದು ಸೋಮಣ್ಣ ಅವರು ಆಪ್ತ ವಲಯ ಸಮಜಾಯಿಷಿ ನೀಡುತ್ತಿದೆ.

ಬೆಳಗಾವಿ ಅಧಿವೇಶನದ ವೇಳೆ ಒಂದೇ ವಿಮಾನದಲ್ಲಿ ಪ್ರಯಾಣ ಮಾಡಿದ್ದರು. ಅಂದಿನ ಫೋಟೊ ಈಗ ವೈರಲ್‌ ಆಗಿದೆ ಎಂದು ಸೋಮಣ್ಣ ಆಪ್ತರು ಹೇಳಿಕೊಳ್ಳುತ್ತಿದ್ದಾರೆ. ಇದು ಕೇವಲ 20 ದಿನದ ಹಿಂದಿನ ಫೋಟೊ ಎನ್ನುವುದು ಇನ್ನೊಂದು ಸಂಶೋಧನೆ.

ಕುತೂಹಲ ಕೆರಳಿಸಿದ ಪತ್ರಿಕಾಗೋಷ್ಠಿ

ಈ ನಡುವೆ, ವಿ ಸೋಮಣ್ಣ ಅವರು ಮಧ್ಯಾಹ್ನ 12.15ಕ್ಕೆ ಪತ್ರಿಕಾಗೋಷ್ಠಿಯನ್ನು ಕರೆದಿದ್ದಾರೆ. ಯಾಕೆ ಈ ತುರ್ತು ಪತ್ರಿಕಾಗೋಷ್ಠಿ ಎನ್ನುವುದು ಎಲ್ಲರ ಕುತೂಹಲದ ಕೇಂದ್ರಬಿಂದು. ಕಾವೇರಿ ಭವನದಲ್ಲಿ ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಯಲಿದ್ದು, ಅದರಲ್ಲಿ ಸೋಮಣ್ಣ ಏನು ಹೇಳುತ್ತಾರೆ ಎಂದು ಎಲ್ಲರೂ ಕಾಯುತ್ತಿದ್ದಾರೆ.

ಎಲ್ಲರೂ ಕಲ್ಪಿಸಿಕೊಳ್ಳುತ್ತಿರುವ ಪ್ರಕಾರ, ಇದು ಶಿವಕುಮಾರ್‌ ಜತೆಗಿನ ಫೋಟೊ ಬಗ್ಗೆ ವಿವರಣೆ ನೀಡಲೆಂದು ಕರೆದ ಪತ್ರಿಕಾಗೋಷ್ಠಿ, ಕೆಲವರ ಪ್ರಕಾರ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಎದ್ದಿರುವ ಊಹಾಪೋಹಗಳ ಬಗ್ಗೆ ವಿವರಣೆ ನೀಡುವುದಕ್ಕಾಗಿ ಆಯೋಜನೆ ಮಾಡಲಾಗಿದೆ. ಇನ್ನು ಮೂರನೇ ವಿಚಾರ ಎಂದರೆ, ಸಚಿವರಾಗಿರುವ ಸೋಮಣ್ಣ ಅವರು ತಮ್ಮ ಖಾತೆಯಲ್ಲಿ ಆಗಿರುವ ಸಾಧನೆಗಳ ಬಗ್ಗೆ ವಿವರಣೆ ನೀಡಲು ಈ ಮಾಧ್ಯಮ ಗೋಷ್ಠಿ ಆಯೋಜಿಸಲಾಗಿದೆ.

ಇದನ್ನೂ ಓದಿ : V. Somanna: ಮಕ್ಕಳಿಗೆ ಟಿಕೆಟ್‌ ಬೇಡ ಎನ್ನೋದು ಎಲ್ಲರಿಗೂ ಅನ್ವಯ ಆಗಲಿ: ಬಿಜೆಪಿಯಿಂದ ಹೊರನಡೆಯುವ ಮುನ್ಸೂಚನೆ ನೀಡಿದ ವಿ. ಸೋಮಣ್ಣ

Exit mobile version