ಬಳ್ಳಾರಿ: ಸಾರಿಗೆ ಸಚಿವ ಶ್ರೀರಾಮುಲು ಅವರು ಈ ಬಾರಿ ಚುನಾವಣೆಯಲ್ಲಿ (Karnataka Elections) ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುವುದನ್ನು ಖಚಿತಪಡಿಸಿದ್ದಾರೆ. 2018ರ ಚುನಾವಣೆಯಲ್ಲಿ ಮೊಳಕಾಲ್ಮುರು ಮತ್ತು ಸಿದ್ದರಾಮಯ್ಯ ವಿರುದ್ಧ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಮೊಳಕಾಲ್ಮುರುವಿನಲ್ಲಿ ಮಾತ್ರ ಗೆದ್ದಿದ್ದ ಅವರು ಈ ಬಾರಿ ಎರಡೂ ಕ್ಷೇತ್ರಗಳನ್ನು ಬಿಟ್ಟು ತಮ್ಮ ಕಾರ್ಯಕ್ಷೇತ್ರವಾದ ಬಳ್ಳಾರಿಯಲ್ಲೇ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಆದರೆ, ಬಳ್ಳಾರಿ ಗ್ರಾಮಾಂತರ ಕ್ಷೇತ್ರ ಎನ್ನುವುದು ಅಷ್ಟು ಸುಲಭದಲ್ಲಿ ಗೆಲುವು ಸಾಧಿಸಬಲ್ಲ ಕ್ಷೇತ್ರವಲ್ಲ ಎನ್ನುವುದು ಶ್ರೀರಾಮುಲು ಅವರಿಗೆ ಅರಿವಾಗಿದೆ. ಯಾಕೆಂದರೆ ಇಲ್ಲಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವುದು, ಹಾಲಿ ಶಾಸಕರಾಗಿರುವ ನಾಗೇಂದ್ರ. ನಾಗೇಂದ್ರ ಮತ್ತು ಶ್ರೀರಾಮುಲು ಹಳೆ ಸ್ನೇಹಿತರು. ಅವರಿಬ್ಬರು ಬೇರೆ ಬೇರೆ ಪಕ್ಷದಲ್ಲಿದ್ದರೂ ಪರಸ್ಪರರ ಗೆಲುವಿಗೆ ಸಹಕಾರ ಕೊಡುತ್ತಿದ್ದರು ಎಂಬ ಮಾತಿದೆ. ಆದರೆ, ಈಗ ಅವರೇ ಮುಖಾಮುಖಿಯಾಗಲಿದ್ದಾರೆ. ಇದರ ಜತೆಗೆ ಇನ್ನೊಂದು ಕಡೆ ಒಂದು ಕಾಲದ ಆಪ್ತ ಗೆಳೆಯ ಜನಾರ್ದನ ರೆಡ್ಡಿ ಅವರು ಕೂಡಾ ತಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರ ಅವರಿಗೂ ಪ್ರತಿಷ್ಠೆಯ ಕಣವೆ. ಈ ರೀತಿ ತ್ರಿಕೋನ ಸ್ಪರ್ಧೆಯ ಕಣದಲ್ಲಿ ಸಿಲುಕಲಿರುವ ಶ್ರೀರಾಮುಲು ಸ್ಪರ್ಧೆಗೆ ಮುನ್ನ ಒಂದಿಷ್ಟು ದೇವರ ದಯೆಯನ್ನು ಕ್ರೋಡೀಕರಿಸಿಕೊಳ್ಳಲು ಮುಂದಾಗಿದ್ದಾರೆ.
ಹೌದು, ಶ್ರೀರಾಮುಲು ಅವರು ಈಗ ಅಯ್ಯಪ್ಪ ಮಾಲೆ ಧರಿಸಿದ್ದು, ಒಂದೆರಡು ದಿನಗಳ ಮಟ್ಟಿಗೆ ಸನ್ನಿಧಿಗೆ ಹೋಗಿ ಬರುವುದಾಗಿ ಆಪ್ತರಿಗೆ ತಿಳಿಸಿದ್ದಾರೆ. ಮಹಾನ್ ದೈವಭಕ್ತರಾಗಿರುವ ರಾಮುಲು ಮನೆಯಲ್ಲಿ ದಿನವೂ ಬಹುಗಂಟೆಗಳ ಪೂಜೆ ಮಾಡುತ್ತಾರೆ. ಇತ್ತೀಚೆಗಂತೂ ಅವರು ಹೊರಗಡೆ ಹೋಗುವಾಗಲೂ ಸಾಂಪ್ರದಾಯಿಕ ದಿರಸುಗಳಲ್ಲೇ ಕಾಣಿಸಿಕೊಳ್ಳುತ್ತಿರುವುದೇ ಹೆಚ್ಚು.
ಬಳ್ಳಾರಿ ಗ್ರಾಮಾಂತರದಿಂದಲೇ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ ಬಳಿಕವೇ ಅಯ್ಯಪ್ಪ ಸನ್ನಿಧಿಗೆ ಹೋಗುವುದಾಗಿ ಘೋಷಿಸಿ ಅವರು ಮಾಲೆ ಧರಿಸಿದ್ದಾರೆ. ನಿಜವೆಂದರೆ, ಪ್ರತಿ ಬಾರಿ ಚುನಾವಣೆ ವೇಳೆ ಅಥವಾ ನಾಮಪತ್ರ ಸಲ್ಲಿಸುವ ಮುಂಚೆ ಮಾಲೆ ಧಾರಣೆ ಮಾಡುವುದು ರೂಢಿ.
ಈ ಬಾರಿಯೂ ಶುಕ್ರವಾರ ಬಳ್ಳಾರಿ ರಾಕ್ ಗಾರ್ಡನ್ ಹೋಟೆಲ್ ನಲ್ಲಿ ಗ್ರಾಮೀಣ ಕ್ಷೇತ್ರದ ಮುಖಂಡರ ಮತ್ತು ಕಾರ್ಯಕರ್ತರ ಸಭೆ ನಡೆಸಿದ ರಾಮುಲು ಎರಡು ದಿನ ಶಬರಿ ಮಲೆಗೆ ಹೋಗಿ ಬರುತ್ತೇನೆ, ನಂತರ ಚುನಾವಣೆ ಕೆಲಸ ಶುರು ಮಾಡೋಣ ಎಂದು ಹೇಳಿದ್ದಾರೆ.
ಎರಡು ದಿನ ಮಾತ್ರ ವ್ರತಾಚರಣೆ ಮಾಡುವ ಶ್ರೀರಾಮುಲು ಭಾನುವಾರ ಶಬರಿಮಲೆಗೆ ತೆರಳಲಿದ್ದಾರೆ. ಆಪ್ತರ ಸಮ್ಮುಖದಲ್ಲಿ ಮಾಲಾಧಾರಣೆ ಮಾಡಿರುವ ಅವರು ಕೆಲವು ಸ್ನೇಹಿತರೊಂದಿಗೆ ಶಬರಿಮಲೆಗೆ ತೆರಳಲಿದ್ದಾರೆ.
ಶ್ರೀರಾಮುಲು ಅವರು ಬಳ್ಳಾರಿಯಿಂದ ಸ್ಪರ್ಧೆ ಮಾಡುವುದರಿಂದ ಅವರಿಗೆ ಬೇರೆ ಕಡೆ ಹೆಚ್ಚು ಗಮನ ನೀಡಲು ಕಷ್ಟವಾದೀತು ಎಂಬ ಮಾತುಗಳು ಕೇಳಿಬರುತ್ತಿವೆ. ನಿಜವೆಂದರೆ, ಕಳೆದ ಬಾರಿ ಸಿದ್ದರಾಮಯ್ಯ ಅವರಿಗೇ ಪೈಪೋಟಿ ನೀಡಿದ್ದ ಶ್ರೀರಾಮುಲು ಅವರಿಗೆ ಪಕ್ಷದೊಳಗೂ ದೊಡ್ಡ ಮಟ್ಟದ ಒಲವೇನೂ ಇಲ್ಲ. ಪ್ರತಿ ಬಾರಿ ವಿರೋಧಿಗಳ ಜತೆಗೆ ಬಡಿದಾಡಿದ್ದ ಅವರು ಈ ಬಾರಿ ತಮ್ಮ ಆಪ್ತ ಸ್ನೇಹಿತರ ವಿರುದ್ಧ ಹೊಡೆದಾಡಬೇಕಾಗಿದೆ. ದೂರವಾದ ಆಪ್ತರು ರಾಮುಲು ಅವರಿಗೆ ಎಷ್ಟು ದೊಡ್ಡ ಪೆಟ್ಟು ಕೊಡುತ್ತಾರೆ, ಅದನ್ನು ರಾಮುಲು ಹೇಗೆ ಮೀರಿ ನಿಲ್ಲುತ್ತಾರೆ ಎಂದು ಕಾದುನೋಡಬೇಕಾಗಿದೆ.
ಇದನ್ನೂ ಓದಿ : Karnataka Elections : ಬಳ್ಳಾರಿ ಗ್ರಾಮೀಣ ಶ್ರೀರಾಮುಲು, ನಾಗೇಂದ್ರ ಕದನ ಕಣ? ಗೊತ್ತಿರಲಿ, ಇದು ಫ್ರೆಂಡ್ಲಿ ಫೈಟಲ್ಲ!