ಸುಳ್ಯ: ʻʻಇನ್ನು ಮುಂದೆ ಬಿಜೆಪಿಯ ಯಾವ ಕಾರ್ಯಕ್ರಮಕ್ಕೂ ಹೋಗುವುದಿಲ್ಲ. ಚುನಾವಣೆಯ ಪ್ರಚಾರಕ್ಕೂ ಹೋಗುವುದಿಲ್ಲʼʼ ಎಂದು ಹೇಳಿದ್ದ ಸುಳ್ಯದ ಬಿಜೆಪಿ ಶಾಸಕ ಅಂಗಾರ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.
ʻʻರಾಜಕೀಯ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯುತ್ತೇನೆ. ಮತ್ತೆ ರಾಜಕೀಯದಲ್ಲಿ ಸಕ್ರಿಯವಾಗುತ್ತೇನೆ. ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆʼʼ ಎಂದು ಸಚಿವ ಎಸ್.ಅಂಗಾರ ಅವರು ಹೇಳಿದ್ದಾರೆ. ಸುಳ್ಯದ ಶಾಸಕರಾಗಿರುವ ಅಂಗಾರ ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ. ಭಾಗೀರಥಿ ಮುರುಳ್ಯ ಅವರು ಈ ಬಾರಿ ಸುಳ್ಯದ ಅಭ್ಯರ್ಥಿ.
ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜಕೀಯ ನಿವೃತ್ತಿ ಘೋಷಣೆಯನ್ನು ಹಿಂಪಡೆದರು. ಬಿಜೆಪಿ ಅಭ್ಯರ್ಥಿ ಘೋಷಣೆ ವೇಳೆ ಅಭ್ಯರ್ಥಿ ಸ್ಥಾನ ಸಿಗದ ನೋವಿನಿಂದ ಅಂದಿನ ದಿನದ ರಾಜಕೀಯ ನಿವೃತ್ತಿ ಹೇಳಿಕೆ ನೀಡಿದ್ದೇನೆ. ಆದರೆ ಬಳಿಕದಲ್ಲಿ ನನ್ನ ನಿರ್ಧಾರ ಬದಲಾಯಿಸಿದ್ದೇನೆ. ಮುಂದೆಯೂ ಬಿಜೆಪಿ ಪಕ್ಷದಲ್ಲಿದ್ದುಕೊಂಡು ಪಕ್ಷದ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಗೆಲುವಿಗೆ ಸಂಪೂರ್ಣವಾಗಿ ತೊಡಗಿಕೊಂಡು ಪೂರಕ ಕೆಲಸ ಮಾಡುತ್ತೇನೆ ಎಂದು ಎಸ್.ಅಂಗಾರ ತಿಳಿಸಿದರು.
ಆವತ್ತು ಏನು ಹೇಳಬೇಕು ಎಂದು ಗೊತ್ತಾಗಲಿಲ್ಲ ಎಂದ ಅಂಗಾರ
ʻʻಏಳು ಬಾರಿ ಸ್ಪರ್ಧೆ ಮಾಡಿದಾಗಲೂ ನಾನೆಂದೂ ನನಗೆ ಟಿಕೆಟ್ ಕೊಡಿ ಎಂದು ಕೇಳಿಕೊಂಡವನಲ್ಲ. ಟಿಕೆಟ್‌ಗಾಗಿ ಲಾಬಿ ಮಾಡಿದವನೂ ಅಲ್ಲ. ಇಷ್ಟು ಬಾರಿಯೂ ಪಕ್ಷವೇ ನನಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತ್ತು. ನನ್ನ ಸಾರ್ವಜನಿಕ ಜೀವನದಲ್ಲಿ ನಾನೆಂದೂ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮಾಡಿದವನೂ ಅಲ್ಲ. ನನ್ನ ಜೀವನ ತೆರೆದ ಪುಸ್ತಕ ಯಾರು ಬೇಕಾದರೂ ಓದಬಹುದಿತ್ತು. ಈ ಬಾರಿಯೂ ನಾನು ಟಿಕೆಟ್ ಕೊಟ್ಟರೆ ಸ್ಪರ್ಧಿಸುವೆ ಎಂಬ ಹೇಳಿಕೆಯನ್ನು ಕೊಟ್ಟಿದ್ದೆ. ಬದಲಾವಣೆ ಮಾತುಕತೆ ಇಲ್ಲದ ಕಾರಣ ನಾನು ನಿರಾಳನಾಗಿದ್ದೆ. ಏಪ್ರಿಲ್ 11ರ ರಾತ್ರಿ ಟಿ.ವಿ. ನೋಡಿದಾಗಲೇ ನನಗೆ ಅವಕಾಶವಿಲ್ಲ ಎಂಬ ಮಾಹಿತಿ ಸಿಕ್ಕಿತ್ತು. ಇದರಿಂದ ನನ್ನ ಮನಸ್ಸಿಗೆ ತೀವ್ರ ಆಘಾತವಾಯಿತು. ಯಾರಲ್ಲಿ ಏನು ಹೇಳಬೇಕೆಂದು ಹೊಳೆಯಲಿಲ್ಲ. ಹೀಗಾಗಿ 12ರಂದು ಬೆಳಗ್ಗೆ ನಾನು ಗೊಂದಲದಿಂದ ನನ್ನ ನಿರ್ಧಾರವನ್ನು ಪ್ರಕಟ ಮಾಡಿದೆ ಎಂದ ಅವರು ಪರಿಸ್ಥಿತಿಯ ಬಗ್ಗೆ ನನಗೇ ಏನೂ ತೋಚದಂತಾಯಿತು ಎಂದು ಅವರು ತಿಳಿಸಿದರು. ಬಳಿಕದಲ್ಲಿ ನನ್ನ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಚರ್ಚೆ ಆರಂಭವಾಗಿರುವುದು ಗಮನಿಸಿದ್ದೇನೆ. ಇದರಿಂದಾಗಿ ನನ್ನ ಕ್ಷೇತ್ರದ ಮತದಾರರಿಗೆ, ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ತಪ್ಪು ಸಂದೇಶ ಹೋಗುತ್ತಿರುವುದು ಸರಿಯಲ್ಲ. ನಿಜ ಸಂಗತಿ ತಿಳಿಸುವುದು ಅಗತ್ಯ ಅನ್ನಿಸಿದ್ದರಿಂದ ನಾನು ಈ ಹೇಳಿಕೆ ನೀಡುತ್ತಿದ್ದೇನೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ ಉಪಸ್ಥಿತರಿದ್ದರು.
ಇದನ್ನೂ ಓದಿ : Karnataka Elections : ಸುಳ್ಯ ಅಸೆಂಬ್ಲಿ ಕಣದಲ್ಲಿ ಈ ಬಾರಿ ಇಬ್ಬರು ಮಹಿಳೆಯರು; ಪುತ್ತೂರು ಬಿಜೆಪಿ ಅಭ್ಯರ್ಥಿ ಕೂಡಾ ಸುಳ್ಯದವರೆ!