Site icon Vistara News

Karnataka Elections : ಅವರು ನಾಮಪತ್ರ ಸಲ್ಲಿಸುವಾಗ ನಾವ್ಯಾಕ್ರೀ ಅಂಗಡಿ ಮುಚ್ಚಬೇಕು; ನೀತಿ ಸಂಹಿತೆ ಕಿರುಕುಳ ವಿರುದ್ಧ ತೀರ್ಥಹಳ್ಳಿ ವರ್ತಕರ ಆಕ್ರೋಶ

Nomination restrictions

#image_title

ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಚುನಾವಣೆ ನೀತಿ ಸಹಿತೆ ನೆಪದಲ್ಲಿ ಜನ ಸಾಮಾನ್ಯರೂ ಹಾಗೂ ವರ್ತಕರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

ನೀತಿ ಸಂಹಿತೆ ಪ್ರಕಾರ ಚುನಾವಣಾ ಸ್ಪರ್ಧೆಗೆ ನಾಮಪತ್ರ ಸಲ್ಲಿಸುವ ಕೇಂದ್ರದ ಸುತ್ತಮುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ಜನ ಹಾಗೂ ವಾಹನ ಓಡಾಟಕ್ಕೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3ಗಂಟೆ ತನಕ ನಿರ್ಬಂಧ ಹೇರಬೇಕು ಎಂದಿದೆ. ಆದರೆ, ಅವರ ಆಡಂಬರ ಅಬ್ಬರಕ್ಕೆ ನಾವ್ಯಾಕೆ ಕಷ್ಟಪಡಬೇಕು ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಚುನಾವಣ ಅಧಿಕಾರಿಗಳನ್ನು ಕೇಳಿದರೆ ಅವರು ಇದು ಆದೇಶ ಪರಿಪಾಲನೆ ಅಗತ್ಯ, ನಾವು ಅಸಹಾಯಕರು ಎನ್ನುತ್ತಾರೆ ಎನ್ನುವುದು ವರ್ತಕರ ಅಳಲು.

ಮಾರ್ಚ್‌ 13ರಂದು ನಾಮಪತ್ರ ಸಲ್ಲಿಕೆಯ ಮೊದಲ ದಿನ ತೀರ್ಥಹಳ್ಳಿಯ ತಾಲೂಕು ಕಚೇರಿ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯ 53ಕ್ಕೂ ಹೆಚ್ಚು ವ್ಯಾಪಾರಿಗಳು ತಮ್ಮ ಅಂಗಡಿ ಹೋಟೆಲ್‌ಗಳನ್ನು ಮುಚ್ಚಬೇಕಾಯಿತು. ಇದರಿಂದ ಆಗುವ ಸಮಸ್ಯೆ, ನಷ್ಟಕ್ಕೆ ಯಾರು ಹೊಣೆ ಎಂದು ವರ್ತಕರು ಪ್ರಶ್ನಿಸುತ್ತಿದ್ದಾರೆ.

ಇಂಥ ಕ್ರಮದಿಂದ ಆಕ್ರೋಶಗೊಂಡ ತಾಲೂಕು ವರ್ತಕರ ಸಂಘದ ನಿಯೋಗ ಗುರುವಾರ ಚುನಾವಣಾಧಿಕಾರಿ ಮಲ್ಲಿಕಾರ್ಜುನ ತೊದಲ ಬಾವಿ ಅವರನ್ನು ಭೇಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿತು. ಈ ಅಸಂಬದ್ಧ ನಿಯಮವನ್ನು ಹಿಂಪಡೆಯದಿದ್ದರೆ ಎಲ್ಲ ವರ್ತಕರು ಮತದಾನ ಬಹಿಷ್ಕಾರ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂಧರ್ಭದಲ್ಲಿ ಮಾತಾಡಿದ ರಂಗಾಯಣ ನಿರ್ದೇಶಕ ಸಂದೇಶ ಜವಳಿ, ನಾವೆಲ್ಲ ಕನಿಷ್ಠ 40 ವರುಷ ಚುನಾವಣೆಗಳನ್ನು ಕಂಡಿದ್ದೇವೆ. ಆದರೆ ಇಂತಹ ಅಸಂಬದ್ಧ ನಿಯಮವನ್ನು ನೋಡಿರಲಿಲ್ಲ. ಎಲ್ಲ ವರ್ತಕರು ಕೊರೊನಾ, ಲಾಕ್ ಡೌನ್ ಸಂಕಟದಿಂದ ಕಂಗೆಟ್ಟು ಹೋಗಿದ್ದಾರೆ. ಈಗ ತುಸು ಚೇತರಿಕೆ ಆಗುವ ಹೊತ್ತಿಗೆ ನಿಯಮದ ಹೆಸರಲ್ಲಿ ದಬ್ಬಾಳಿಕೆ ನಡೆಸುವುದು ಅಮಾನವೀಯ ಎಂದರು.

ನಾಮಪತ್ರ ಸಲ್ಲಿಕೆಗೆ ಜನ ಓಡಾಟ ನಡೆಸದ ಸ್ಥಳ ಬೇಕೆಂದರೆ ಚುನಾವಣ ಅಧಿಕಾರಿಗಳೇ ಬೇರೆ ಸ್ಥಳ ಅರಿಸಿಕೊಳ್ಳಲಿ. ತೀರ್ಥಹಳ್ಳಿಯಲ್ಲಿ ಹಳೇ ಪಟ್ಟಣ ಪಂಚಾಯತ್ ಕಟ್ಟಡ, ಹಳೇ ಕೋರ್ಟ್ ಕಟ್ಟಡ, ಮೊರಾರ್ಜಿ ಶಾಲೆ ಜನ ಓಡಾಟದಿಂದ ದೂರ ಇವೆ. ಅಲ್ಲಿ ವ್ಯವಸ್ಥೆ ಮಾಡಿಕೊಳ್ಳುವ ಬದಲು ಜನ ದಟ್ಟಣೆ ಇರುವ ಸ್ಥಳಕ್ಕೆ ಬಂದು ಜನರ ಓಡಾಟ ಕೂಡದು ಎನ್ನುವುದು ಜನ ವಿರೋಧಿ ಧೋರಣೆ ಎಂದು ಕಿಡಿ ಕಾರಿದ್ದಾರೆ.

ಈ ಸಂಧರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಡಾನ್ ರಾಮಣ್ಣ, ಸರಸ್ವತಿ ಸೌಹಾರ್ದ ಸಹಕಾರಿ ಅಧ್ಯಕ್ಷ ರಾಘವೇಂದ್ರ ನಾಯಕ್, ರಾಮೇಶ್ವರ ಸಹಕಾರಿ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಸೇರಿದಂತೆ ಅನೇಕ ವರ್ತಕರು, ಸಾರ್ವಜನಿಕರು ಹಾಜರಿದ್ದರು.

ಇದನ್ನೂ ಓದಿ : Karnataka Elections : ಮೊದಲ ದಿನ 221 ನಾಮಪತ್ರ; ಬಿಜೆಪಿಯಿಂದ ಗರಿಷ್ಠ ಅಭ್ಯರ್ಥಿಗಳು ಕಣಕ್ಕೆ, ಕಾಂಗ್ರೆಸ್‌ ದ್ವಿತೀಯ

Exit mobile version