Site icon Vistara News

Karnataka Elections : ಸುಳ್ಯ ಅಸೆಂಬ್ಲಿ ಕಣದಲ್ಲಿ ಈ ಬಾರಿ ಇಬ್ಬರು ಮಹಿಳೆಯರು; ಪುತ್ತೂರು ಬಿಜೆಪಿ ಅಭ್ಯರ್ಥಿ ಕೂಡಾ ಸುಳ್ಯದವರೆ!

Sullia candidates

#image_title

ಗಂಗಾಧರ ಕಲ್ಲಪಳ್ಳಿ,, ವಿಸ್ತಾರ ನ್ಯೂಸ್‌, ಸುಳ್ಯ
ಸುಳ್ಯ ವಿಧಾನಸಭಾ ಚುನಾವಣಾ ಕಣ (Karnataka Elections) ರಂಗೇರುತ್ತಿದ್ದು ಹಲವು ವೈಶಿಷ್ಟ್ಯಗಳ ಮೂಲಕ ಗಮನ ಸೆಳೆದಿದೆ. ಅದರಲ್ಲೂ ಇಬ್ಬರು ಮಹಿಳಾ ಅಭ್ಯರ್ಥಿಗಳು ಕಣದಲ್ಲಿ ಇರುವುದು ಈ ಬಾರಿಯ ಮುಖ್ಯಾಂಶ.

ಸುಳ್ಯ ವಿಧಾನಸಭಾ ಕ್ಷೇತ್ರದ ಕಳೆದ ಏಳು ದಶಕದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಕಣಕ್ಕಿಳಿಯಲಿದ್ದಾರೆ. ಇದುವರೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಸೇರಿಸಿದರೆ ಸ್ಪರ್ಧೆ ಮಾಡಿರುವುದು ಒಬ್ಬರೇ ಒಬ್ಬ ಮಹಿಳಾ ಅಭ್ಯರ್ಥಿ.

2013ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದ ಕೆಜೆಪಿ ಅಭ್ಯರ್ಥಿಯಾಗಿ ಚಂದ್ರಾವತಿ ಅವರು ಕಣಕ್ಕಿಳಿದಿದ್ದರು. ಅವರು ಸುಳ್ಯ ಕ್ಷೇತ್ರದ ಇತಿಹಾಸದಲ್ಲೇ ಪ್ರಥಮವಾಗಿ ಕಣಕ್ಕಿಳಿದ ಮಹಿಳಾ ಅಭ್ಯರ್ಥಿಯಾಗಿ ದಾಖಲೆ ಬರೆದಿದ್ದರು.

ಈ ಬಾರಿ ಬಿಜೆಪಿಯಿಂದ ಭಾಗೀರಥಿ ಮುರುಳ್ಯ ಹಾಗು ಆಮ್ ಆದ್ಮಿ ಪಾರ್ಟಿಯಿಂದ ಸುಮನಾ ಬೆಳ್ಳಾರ್ಕರ್ ಅವರನ್ನು ಅಭ್ಯರ್ಥಿಗಳಾಗಿ ಘೋಷಣೆ ಮಾಡಲಾಗಿದೆ. ನಾಮಪತ್ರ ಸಲ್ಲಿಕೆಯ ಸಮಯ ಮುಗಿಯುವ ವೇಳೆಗೆ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಇನ್ನಷ್ಟು ಏರಬಹುದೇ ಎಂಬ ಕುತೂಹಲ ಇದೆ.

ಐವರಲ್ಲಿ ನಾಲ್ವರು ಹೊಸಬರು

ಈ ಬಾರಿ ಈಗಾಗಲೇ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಐದು ಮಂದಿ ಅಭ್ಯರ್ಥಿಗಳ ಘೋಷಣೆ ಆಗಿದೆ. ಮೂವರು ಪುರುಷ ಅಭ್ಯರ್ಥಿಗಳು ಮತ್ತು 2 ಮಂದಿ ಮಹಿಳಾ ಅಭ್ಯರ್ಥಿಗಳು. ಜೆಡಿಎಸ್ ಅಭ್ಯರ್ಥಿ ಎಚ್.ಎಲ್.ವೆಂಕಟೇಶ್ ಅವರು 1983ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ, ಪಕ್ಷೇತರ ಅಭ್ಯರ್ಥಿ ಎಚ್.ಎಂ. ನಂದಕುಮಾರ್, ಬಿಜೆಪಿಯ ಭಾಗೀರಥಿ ಮುರುಳ್ಯ, ಆಮ್ ಆದ್ಮಿ ಪಾರ್ಟಿಯ ಸುಮನಾ ಬೆಳ್ಳಾರ್ಕರ್ ಪ್ರಥಮ ಬಾರಿಗೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಾಗಿದ್ದಾರೆ.

ಪುತ್ತೂರಿನಲ್ಲಿ ಮತ್ತೆ ಸುಳ್ಯ ಮೂಲದ ಅಭ್ಯರ್ಥಿ

ಪುತ್ತೂರಿನ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು ಮೂಲತಃ ಸುಳ್ಯದವರು. ಸುಳ್ಯದಲ್ಲಿ ಸಕ್ರಿಯ ರಾಜಕಾರಣಿಯಾಗಿದ್ದು ಜನಪ್ರತಿನಿಧಿಗಳಾಗಿದ್ದವರು. ಸುಳ್ಯದ ಮೋಂಟಡ್ಕ‌ ಮನೆತನದವರಾದ ಆಶಾ ತಿಮ್ಮಪ್ಪ ಅವರು 1980ರಿಂದ ಸುಳ್ಯದ ಬಿಜೆಪಿಯಲ್ಲಿ ಸಕ್ರಿಯರಾಗಿದ್ದವರು.

1996ರಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾಗಿದ್ದವರು.2005 ರಲ್ಲಿ ನೆಲ್ಯಾಡಿ, 2011ರಲ್ಲಿ ಸುಳ್ಯದ ಬೆಳ್ಳಾರೆ, 2016ರಲ್ಲಿ ಗುತ್ತಿಗಾರು ಕ್ಷೇತ್ರದಿಂದ ದ.ಕ.ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. 2014ರಿಂದ ಎರಡೂವರೆ ವರ್ಷ ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದವರು. ಸುಳ್ಯದ ಮಹಿಳಾ ಮೋರ್ಚಾ ಅಧ್ಯಕ್ಷೆ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ, ಪ್ರಧಾನ ಕಾರ್ಯದರ್ಶಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಮೋಂಟಡ್ಕದ ಕೃಷ್ಣಪ್ಪ‌ ಮಾಸ್ತರ್- ತೇಜಮ್ಮ ದಂಪತಿಗಳ 11 ಮಕ್ಕಳಲ್ಲಿ 9ನೇಯವರಾದ ಆಶಾ ತಿಮ್ಮಪ್ಪ ಕಡಬ ತಾಲೂಕಿನ ಕುಂತೂರು ಗ್ರಾಮದ ತಿಮ್ಮಪ್ಪ ಗೌಡ ಕುಂಡಡ್ಕ ಅವರ ಪತ್ನಿ. ತಿಮ್ಮಪ್ಪ ಗೌಡ ಕುಂಡಡ್ಕ ಅವರು ಸುಳ್ಯದಲ್ಲಿ ಉದ್ಯಮಿಯಾಗಿದ್ದರು. ಈಗ ಕುಂತೂರಿನಲ್ಲಿ ನೆಲೆಸಿದ್ದಾರೆ. ಮಾಜಿ‌ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಬಳಿಕ ಸುಳ್ಯ ಮೂಲದವರಾದ ಆಶಾ ತಿಮ್ಮಪ್ಪ ಅವರಿಗೆ ಬಿಜೆಪಿ ಟಿಕೆಟ್ ಒಲಿದು ಬಂದಿದೆ.

ಇದನ್ನೂ ಓದಿ : Karnataka Elections : ಪುತ್ತೂರು ಬಂಡಾಯ; ಟಿಕೆಟ್‌ ಸಿಗದ್ದಕ್ಕೆ ಸಿಡಿದ ಅರುಣ್‌ ಪುತ್ತಿಲ, ಮಠಂದೂರು ಮನೆಗೆ ಬಂದ ಬಿಜೆಪಿ ನಾಯಕರಿಗೆ ಕ್ಲಾಸ್‌

Exit mobile version