ಕೋಲಾರ: ʻಚಿಲ್ಲರೆಗಳಿಗೆ ನಾನು ಉತ್ತರ ಕೊಡಲ್ಲʼ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾತು ಕೋಲಾರದ (Karnataka Election) ಬಿಜೆಪಿ ನಾಯಕ ವರ್ತೂರು ಪ್ರಕಾಶ್ ಅವರನ್ನು ಉರಿದೇಳುವಂತೆ ಮಾಡಿದೆ. ʻನನ್ನನ್ನು ಚಿಲ್ಲರೆ ಎಂದಿರುವ ಸಿದ್ದರಾಮಯ್ಯ ಸೋಮವಾರದ ಒಳಗೆ ಕ್ಷಮೆ ಯಾಚನೆ ಮಾಡಬೇಕುʼ ಎಂದು ಗಡುವು ನೀಡಿದ್ದಾರೆ.
ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಘೋಷಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಕ್ಷೇತ್ರದಲ್ಲಿ ನಡೆಯುವ ಹಲವು ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ. ಈ ಸಮಾವೇಶಗಳಲ್ಲಿ ಭಾಗವಹಿಸುವಂತೆ ಮಾಡಲು ಮಹಿಳೆಯರಿಗೆ ಆಮಿಷಗಳನ್ನು ಒಡ್ಡಲಾಗಿದೆ ಎನ್ನುವುದು ವರ್ತೂರು ಅವರ ಆರೋಪ.
ಕಾಂಗ್ರೆಸ್ ಸಭೆಗಳಲ್ಲಿ ಭಾಗವಹಿಸಿದರೆ ಸ್ತ್ರೀಶಕ್ತಿ ಸಂಘಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡುತ್ತಾರೆ ಎಂದು ಹೇಳಿ ಮಹಿಳೆಯರನ್ನು ಸೆಳೆಯುವ ಪ್ರಯತ್ನ ನಡೆದಿದೆ. ಇದು ಸುಳ್ಳು. ಯಾರೇ ಗೆದ್ದರೂ ಸಾಲ ಮನ್ನಾ ಆಗುವುದಿಲ್ಲ. ಸತ್ಯದ ಅರಿವು ನಿಮಗಿರಲಿ ಎಂದು ವರ್ತೂರು ಅವರು ಭಾನುವಾರ ಕೋಲಾರದಲ್ಲಿ ಮಹಿಳೆಯರಿಗೆ ಹೇಳಿದ್ದರು.
ಚಿಲ್ಲರೆಗಳಿಗೆ ರಿಯಾಕ್ಟ್ ಮಾಡಲ್ಲ ಎಂದ ಸಿದ್ದು
ವರ್ತೂರು ಆರೋಪಗಳಿಗೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ʻʻಚಿಲ್ಲರೆಗಳಿಗೆ ಎಲ್ಲಾ ನಾನು ರಿಯಾಕ್ಟ್ ಮಾಡಲ್ಲ. ವರ್ತೂರು ಪ್ರಕಾಶ್‌ಗೆ ನಾನು ರಿಯಾಕ್ಟ್ ಮಾಡಲ್ಲ. ಅವನು ನನ್ನ ಒಬ್ಬ ಅಭಿಮಾನಿಯಾಗಿದ್ದ. ಈಗ ನನ್ನ ವಿರುದ್ಧ ಆಗಿದ್ದಾನೆ, ಆಗಲಿ. ಒಂದು ಕಾಲದಲ್ಲಿ ಸ್ನೇಹಿತರು ಆಗಿದ್ದವರು, ರಾಜಕೀಯ ವೈರಿ ಆಗ್ತಾರೆ. ರಾಜಕೀಯ ವೈರಿ ಆಗಿದ್ದವರು, ಸ್ನೇಹಿತರು ಆಗ್ತಾರೆ. ಅವನಿಗೆ ನಾನು ಉತ್ತರ ಕೊಡಲ್ಲʼʼ ಎಂದು ಹೇಳಿದರು. ಬಿಜೆಪಿಯವರು ತಮ್ಮನ್ನೇ ಟಾರ್ಗೆಟ್ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ʻʻಎಲ್ಲರಿಗೂ ಭಯ ಆಗಿದೆ, ಯಾಕೆಂದರೆ ಸಿದ್ದರಾಮಯ್ಯ ಹಿಂದೆ ಜನ ಇದ್ದಾರೆ.ʼʼ ಎಂದರು.
ಸಿಟ್ಟಿಗೆದ್ದ ವರ್ತೂರು ಪ್ರಕಾಶ್
ಚಿಲ್ಲರೆ ಎಂಬ ಹೇಳಿಕೆ ವರ್ತೂರು ಪ್ರಕಾಶ್‌ಗೆ ಸಿಕ್ಕಾಪಟ್ಟೆ ಆಕ್ರೋಶ ಮೂಡಿಸಿದೆ. ʻʻಸಿದ್ದರಾಮಯ್ಯನವರು ವರ್ತೂರು ಪ್ರಕಾಶ್, ಅವನೊಬ್ಬ ಚಿಲ್ಲರೆ ಎಂದು ಹೇಳಿದ್ದಾರೆ. 2006ರಲ್ಲಿ ಸಿದ್ದರಾಮಯ್ಯಗೆ ನಾನೇ ಪುನರ್ಜನ್ಮ ನೀಡಿದ್ದು. ಆವತ್ತು ನಾನು ಚಿಲ್ಲರೆ ಆಗಿರಲಿಲ್ವಾ?ʼʼ ಎಂದು ಪ್ರಶ್ನಿಸಿದರು.
ʻʻನಾನು ಸಿದ್ದರಾಮಯ್ಯ ಪರ ಪ್ರಚಾರ ಮಾಡುವಾಗ ಕುಮಾರಸ್ವಾಮಿ ನನ್ನ ಮನೆಗೆ ದಾಳಿ ಮಾಡಿಸಿದ್ದರು. ಮನೆಯಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ನಾನು ಮನೆ ಮೇಲಿಂದ ಬಿದ್ದು ಪ್ರಾಣ ತ್ಯಾಗ ಮಾಡಿ ಸಿದ್ದರಾಮಯ್ಯರನ್ನು ಗೆಲ್ಲಿಸಿದೆ. ಸಿದ್ದರಾಮಯ್ಯಗೆ ಆರ್ಥಿಕವಾಗಿ ನಾನು ಸಹಾಯ ಮಾಡಿದೆ, ಆಗ ಚಿಲ್ಲರೆ ಆಗಿರಲಿಲ್ವಾ?ʼʼ ಎಂದು ಕೇಳಿದರು ವರ್ತೂರು.
ʻʻನೀವು ಆಡಿದ ಮಾತು ನನಗಲ್ಲ, ಕೋಲಾರದ ಜನತೆಗೆʼʼ ಎಂದು ಹೇಳಿದ ವರ್ತೂರು, ʻʻನಿಮ್ಮ ಕಾರ್ಯಕ್ರಮಗಳಿಗೆ ಜನ ಯಾಕೆ ಸೇರ್ತಿಲ್ಲ, ನಿಮ್ಮ ಶಕ್ತಿ ಇಷ್ಟೇನಾ?ʼʼ ಎಂದು ಕೆಣಕಿದರು.
ʻʻಸಿದ್ದರಾಮಯ್ಯ ಕೀಳು ಮಟ್ಟದ ರಾಜಕಾರಣಕ್ಕೆ ಕೈ ಹಾಕಿದ್ದಾರೆ. ಅವರು ಚಿಲ್ಲರೆ ಎಂಬ ಪದವನ್ನು ವಾಪಸ್ ತೆಗೆದುಕೊಳ್ಳಬೇಕು, ಸೋಮವಾರ ನೀವು ಕ್ಷಮೆ ಕೇಳಬೇಕು.ʼʼ ಎಂದಿರುವ ವರ್ತೂರು, ಸಿದ್ದರಾಮಯ್ಯ ಅವರು ಕುರುಬ ಸಮಾಜದ ಮುಖಂಡನನ್ನು ಚಿಲ್ಲರೆ ಎಂದಿದ್ದಾರೆ. ಸಿದ್ದರಾಮಯ್ಯನವರೇ ನೀವು ಹಲವಾರು ಕುರುಬ ಸಮಾಜದ ಮುಖಂಡರನ್ನು ಮುಗಿಸಿದ್ದೀರಾ? ಆದ್ರೆ ನನ್ನನ್ನು ಆಗಲ್ಲʼʼ ಎಂದು ಸವಾಲು ಹಾಕಿದರು.
ಇದನ್ನೂ ಓದಿ : JDS Politics: ಸೀಟ್‌ಗೆ ಗೌಡರು, ಲವ್‌ಗೆ ಸಿದ್ದರಾಮಯ್ಯ: ಶಿವಲಿಂಗೇಗೌಡ ವಿರುದ್ಧ ಸಿಎಂ ಇಬ್ರಾಹಿಂ ಕಿಡಿ