ಚಿಕ್ಕಬಳ್ಳಾಪುರ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹಾಗೂ ಅವರ ತಂದೆ ಪಿ.ಎನ್. ಕೇಶವರೆಡ್ಡಿ ಅವರಿಗೆ ಸುಧಾಕರ್ ಅವರ ಪತ್ನಿ ಡಾ.ಜಿ.ಎ ಪ್ರೀತಿ ಅವರೇ ಲಕ್ಷಾಂತರ ರೂಪಾಯಿ ಸಾಲ ನೀಡಿದ್ದಾರೆ. ಸುಧಾಕರ್ ಪತ್ನಿ ಅವರ ಹೆಸರಿನಲ್ಲಿ ₹16.10 ಕೋಟಿ ಸ್ಥಿರಾಸ್ತಿ ಇದೆ. ಸುಧಾಕರ್ ಗುರುವಾರ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಅವರು ನೀಡಿರುವ ಆಸ್ತಿ ವಿವರಗಳ ಪ್ರಕಾರ, ಸಚಿವ ಸುಧಾಕರ್ ಅವರಿಗಿಂತ ಅವರ ಪತ್ನಿಯೇ ಶ್ರೀಮಂತೆ. ಮತ್ತು ಇವರಿಗೆ ಬೇಕಾದಾಗ ಸಾಲ ಕೊಡುವ ಬ್ಯಾಂಕ್!
2019ರ ಉಪಚುನಾವಣೆ ವೇಳೆ ಡಾ.ಕೆ. ಸುಧಾಕರ್ ತಮ್ಮ ಚರಾಸ್ತಿಯ ಒಟ್ಟು ಮೌಲ್ಯ ₹1.18 ಕೋಟಿ ಹಾಗೂ ಪತ್ನಿಯ ಚರಾಸ್ತಿಯ ಮೌಲ್ಯ ₹13.70 ಕೋಟಿ ಎಂದು ಘೋಷಿಸಿದ್ದರು. ಆದರೆ ಈ ಬಾರಿ ತಮ್ಮ ಚರಾಸ್ತಿಗಳ ಒಟ್ಟು ಮೌಲ್ಯ ₹2.79 ಕೋಟಿ ಹಾಗೂ ಪತ್ನಿಯ ಚರಾಸ್ತಿಗಳ ಮೌಲ್ಯ ₹6.59 ಕೋಟಿ ಎಂದು ಘೋಷಿಸಿದ್ದಾರೆ. ಈ ಪ್ರಕಾರ ಅವರ ಮೂರೇ ವರ್ಷದಲ್ಲಿ ಅವರ ಪತ್ನಿಯ ಚರಾಸ್ತಿಯ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿದಿದೆ.
₹ 52.81 ಲಕ್ಷ ಮೌಲ್ಯದ ಸ್ಥಿರಾಸ್ತಿಗಳನ್ನು ಸ್ವಯಾರ್ಜಿತವಾಗಿ ಹಾಗೂ ₹ 97.37 ಲಕ್ಷ ಮೌಲ್ಯದ ಪಿತ್ರಾರ್ಜಿತ ಆಸ್ತಿಗಳನ್ನು ಹೊಂದಿರುವುದಾಗಿ ಸುಧಾಕರ್ ಘೋಷಿಸಿಕೊಂಡಿದ್ದಾರೆ.
ಪತ್ನಿಯ ಬಳಿಯಿಂದಲೇ 2016 ಮತ್ತು 2019ರಲ್ಲಿ ₹ 40.33 ಲಕ್ಷ ಹಣವನ್ನು ಡಾ.ಕೆ.ಸುಧಾಕರ್ ಸಾಲ ಪಡೆದಿದ್ದಾರೆ. ಸುಧಾಕರ್ ತಂದೆ ಪಿ.ಎನ್.ಕೇಶವರೆಡ್ಡಿ ಅವರಿಗೂ ಡಾ.ಪ್ರೀತಿ ₹ 55.57 ಲಕ್ಷ ಸಾಲ ನೀಡಿದ್ದಾರೆ.
2019ರ ಉಪಚುನಾವಣೆ ಸಮಯದಲ್ಲಿ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ವಿವಿಧ ಬ್ಯಾಂಕುಗಳು, ಸಂಘ ಸಂಸ್ಥೆಗಳು, ವ್ಯಕ್ತಿಗಳಿಂದ ತಾವು ₹29.84 ಲಕ್ಷ ಸಾಲ ಪಡೆದಿರುವುದಾಗಿ ಡಾ.ಕೆ.ಸುಧಾಕರ್ ಘೋಷಿಸಿದ್ದರು. ಪತ್ನಿಯ ಹೆಸರಿನಲ್ಲಿ ₹10.68 ಕೋಟಿ ಸಾಲ ತೋರಿಸಿದ್ದರು. ಈಗ ಸುಧಾಕರ್ ಅವರ ಸಾಲದ ಪ್ರಮಾಣ ₹1.60 ಕೋಟಿಗೆ, ಅವರ ಪತ್ನಿಯ ಸಾಲದ ಪ್ರಮಾಣ ₹19.06 ಕೋಟಿಗೆ ಹೆಚ್ಚಿದೆ. ದಂಪತಿ ಹೆಸರಿನಲ್ಲಿ 30 ಕೆ.ಜಿ ಬೆಳ್ಳಿ ಸಹ ಇದೆ.
ಇದನ್ನೂ ಓದಿ : Karnataka Congress: ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಗೆ ಸಮಯ ನಿಗದಿ: ಅಥಣಿಯಿಂದ ಸ್ಪರ್ಧೆ ಖಚಿತ