Site icon Vistara News

Karnataka Flood: ಭಾರಿ ಮಳೆ, ಪ್ರವಾಹ ಸ್ಥಿತಿ: ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲು ಡಿಸಿಗಳಿಗೆ ಸಿಎಂ ಖಡಕ್ ಸೂಚನೆ

Karnataka Flood

ನವದೆಹಲಿ: ರಾಜ್ಯದಲ್ಲೆಡೆ ಭಾರಿ ಮಳೆಯಾಗುತ್ತಿದ್ದು ಪ್ರವಾಹ, ಭೂಕುಸಿತದಂತಹ (Karnataka Flood) ಪರಿಸ್ಥಿತಿ ಎದುರಿಸಲು ಎಲ್ಲ ಜಿಲ್ಲಾಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು. ಜಲಾಶಯಗಳ ನೀರಿನ ಮಟ್ಟದ ಕುರಿತು ನಿರಂತರ ಪರಿಶೀಲನೆ ನಡೆಸಿ ಪ್ರವಾಹ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ಸೂಚನೆ ನೀಡಿದ್ದಾರೆ.

ಕೇರಳ ಭೂಕುಸಿತ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಭೂಕುಸಿತದ ಪ್ರಕರಣಗಳು ವರದಿಯಾಗುತ್ತಿದ್ದು, ಈ ಕುರಿತು ಸಹ ಜಿಲ್ಲಾಧಿಕಾರಿಗಳು ಎಚ್ಚರವಹಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಸಹ ಪ್ರವಾಹ ಪರಿಸ್ಥಿತಿಯ ನಿರ್ವಹಣೆಯ ಮೇಲ್ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ.

ಅಧಿಕಾರಿಗಳು ಪ್ರವಾಹ ಪರಿಸ್ಥಿತಿಯನ್ನು ಸಮರೋಪಾದಿಯಲ್ಲಿ ನಿರ್ವಹಿಸುವಂತೆ, ರಕ್ಷಣೆ ಹಾಗೂ ಪರಿಹಾರ ಕಾರ್ಯಚರಣೆಗಳನ್ನು ಕೈಗೊಳ್ಳುವಂತೆ ಹಾಗೂ ಪ್ರವಾಹ ಪೀಡಿತರಿಗೆ ಅಗತ್ಯಕ್ಕನುಸಾರವಾಗಿ ಕಾಳಜಿ ಕೇಂದ್ರಗಳನ್ನು ತೆರೆದು ಎಲ್ಲ ಸೌಲಭ್ಯಗಳನ್ನು ಕಲ್ಪಿಸುವಂತೆ ಸೂಚಿಸಿದ್ದಾರೆ.

ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿ ತೆರೆದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ವ್ಯವಸ್ಥೆ ಮಾಡಬೇಕು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಲಭ್ಯರಿದ್ದು ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ.

ಚಾಮರಾಜ ನಗರ ಜಿಲ್ಲಾಧಿಕಾರಿ ಕಚೇರಿ ಸಹಾಯವಾಣಿ ಸಂಖ್ಯೆಗಳು:

08226-223163
08226-223161
08226-223160
ವಾಟ್ಸಾಪ್‌ ಸಂಖ್ಯೆ: 9740942901

ಕೇರಳದಲ್ಲಿ ರಕ್ಷಣೆ, ಪರಿಹಾರ ಕಾರ್ಯಾಚರಣೆಗೆ ಇಬ್ಬರು IAS ಅಧಿಕಾರಿಗಳ ನೇಮಕ

ನವ ದೆಹಲಿ: ಭೂ ಕುಸಿತದಿಂದ ತತ್ತರಿಸಿರುವ ವಯನಾಡಿನಲ್ಲಿ (Wayanad Landslide) ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದ್ದು, ಇದಕ್ಕಾಗಿ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನವ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಅವರು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು, ವಯನಾಡಿನಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ನೆರವಾಗಲು ಬೆಂಗಳೂರಿನಲ್ಲಿರುವ ಎನ್‌ಡಿಆರ್‌ಎಫ್ ತಂಡ ಹಾಗೂ ಮದ್ರಾಸ್ ಎಂಜಿನಿಯರ್ ಗ್ರೂಪ್ ಸೇನಾ ಪಡೆಯ ತಂಡಗಳು ತ್ವರಿತವಾಗಿ ತೆರಳಲು ಹಾಗೂ ಅಗತ್ಯ ಉಪಕರಣಗಳು ಮತ್ತು ಇತರ ಅಗತ್ಯ ಪರಿಹಾರ ಸಾಮಗ್ರಿಗಳನ್ನು ರವಾನೆ ಮಾಡಲು ನೆರವು ನೀಡಲಾಗಿದೆ.

ಎಂಇಜಿಯ ಒಬ್ಬರು ಅಧಿಕಾರಿ, ಇಬ್ಬರು ಜೆ.ಸಿ.ಓ.ಗಳು ಹಾಗೂ 70 ಮಂದಿ ವಿವಿಧ ರ‍್ಯಾಂಕ್‌ನ ಸಿಬ್ಬಂದಿ ಈಗಾಗಲೇ ರಕ್ಷಣೆ ಹಾಗೂ ಪರಿಹಾರ ಸಾಮಗ್ರಿಗಳೊಂದಿಗೆ 15 ವಾಹನಗಳಲ್ಲಿ ವಯನಾಡಿಗೆ ತೆರಳಿದ್ದಾರೆ. ಇನ್ನೂ ಇಬ್ಬರು ಅಧಿಕಾರಿಗಳು, ನಾಲ್ಕು ಮಂದಿ ಜೆ.ಸಿ.ಓ.ಗಳು, ಹಾಗೂ 100 ಮಂದಿ ಸೇನಾ ಸಿಬ್ಬಂದಿ ರಕ್ಷಣಾ ಉಪಕರಣಗಳೊಂದಿಗೆ 40 ವಾಹನಗಳಲ್ಲಿ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ತಂಡಗಳು ವಯನಾಡಿಗೆ ಶೀಘ್ರವೇ ತಲುಪಲು ಅನುವಾಗುವಂತೆ, ಬಂಡೀಪುರ ಚೆಕ್ ಪೋಸ್ಟ್‌ನಲ್ಲಿ ಈ ಎನ್‌ಡಿಆರ್‌ಎಫ್ ಹಾಗೂ ಸೇನೆಯ ತಂಡಗಳಿಗೆ ಹಾಗೂ ಪರಿಹಾರ ಸಾಮಗ್ರಿಗಳ ಸಾಗಾಣಿಕೆ ವಾಹನಗಳಿಗೆ ಗ್ರೀನ್‌ ಕಾರಿಡಾರ್‌ ಮೂಲಕ ಅನಿರ್ಬಂಧಿತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ. ಕರ್ನಾಟಕ ಸರ್ಕಾರವು ಕೇರಳ ಸರ್ಕಾರದ ವಿಪತ್ತು ನಿರ್ವಹಣಾ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ನೆರವು ಒದಗಿಸಲಾಗುತ್ತಿದೆ. ಅಲ್ಲದೆ ಗಡಿ ಭಾಗದ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಹ ಸೂಕ್ತ ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿಸಿದರು.

ವೈದ್ಯಕೀಯ ನೆರವು, ಆಸ್ಪತ್ರೆ ಸೌಲಭ್ಯ ಹಾಗೂ ಗಾಯಾಳುಗಳನ್ನು ಕರೆತರಲು ಬಸ್‌ಗಳನ್ನು ಎಚ್‌.ಡಿ. ಕೋಟೆಯಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಚಾಮರಾಜನಗರ ಜಿಲ್ಲಾಡಳಿತವೂ ಜಿಲ್ಲೆಯ ಗಡಿಭಾಗದಿಂದ ವಯನಾಡಿಗೆ ಆಗಾಗ ತೆರಳುವ ನಾಗರಿಕರ ನೆರವಿಗಾಗಿ ಸಹಾಯವಾಣಿ ಪ್ರಾರಂಭಿಸಿದೆ. ಮುಖ್ಯಮಂತ್ರಿಗಳು ಸ್ವತಃ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದು, ವಯನಾಡಿನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಚರಣೆಗೆ ಎಲ್ಲ ರೀತಿಯ ಬೆಂಬಲ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ | Wayanad Landslide: ಕೇರಳಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ನಮ್ಮ ಸರ್ಕಾರ ನೀಡಲಿದೆ: ಸಿಎಂ ಸಿದ್ದರಾಮಯ್ಯ

ಇದಲ್ಲದೆ ವಯನಾಡಿನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳ ಕುರಿತಂತೆ ಸಮನ್ವಯಕ್ಕಾಗಿ ಹಿರಿಯ ಐಎಎಸ್‌ ಅಧಿಕಾರಿ ಪಿ.ಸಿ. ಜಾಫರ್‌ (ಮೊಬೈಲ್‌ ಸಂಖ್ಯೆ 9448355577) ಹಾಗೂ ದಿಲೀಶ್‌ ಶಶಿ (9446000514) ಅವರನ್ನು ನಿಯೋಜಿಸಲಾಗಿದೆ.

Exit mobile version