Site icon Vistara News

Karnataka Forest Department: ಕರ್ನಾಟಕ ಭೂಪಟದಲ್ಲಿ ಮೂಡಿದ ಜೈವವೈವಿಧ್ಯ: ಅರಣ್ಯ ಇಲಾಖೆಯ ಹೊಸ ಲೋಗೊ ಬಿಡುಗಡೆ

#image_title

ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಗೆ (Karnataka Forest Department) ನೂತನ ಲಾಂಛನವನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕದ ಪ್ರಮುಖ ಪ್ರಾಣಿ ಸಂಕುಲವಾದ ಆನೆ, ಹುಲಿ ಜತೆಗೆ ಚಿಟ್ಟೆ, ಪಕ್ಷಿ, ವೃಕ್ಷಗಳು ಒಟ್ಟಾರೆ ಕರ್ನಾಟಕ ಭೂಪಟವನ್ನು ರೂಪಿಸಿರುವಂತೆ ಚಿತ್ರಿಸಲಾಗಿದೆ. ನೂತನ ಲಾಂಛನವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸೋಮವಾರ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಅರಣ್ಯ, ಸಸ್ಯಸಂಕುಲ, ಪ್ರಾಣಿ ಸಂಕುಲ, ಪಕ್ಷಿ ಸಂಕುಲದ ಸಂರಕ್ಷಣೆಯೇ ಅರಣ್ಯ ಇಲಾಖೆಯ ಆದ್ಯ ಕರ್ತವ್ಯವಾಗಿದ್ದು ಅರಣ್ಯ ವ್ಯಾಪ್ತಿಯಲ್ಲಿ ಯಾರೇ ಅಕ್ರಮವಾಗಿ ಮರ ಕಡಿದರೂ, ಅರಣ್ಯ ಭೂಮಿ ಒತ್ತುವರಿ ಮಾಡಿದರೂ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.

ಅರಣ್ಯನಾಶ ಮತ್ತು ವನ್ಯ ಮೃಗಗಳ ಸಾವು, ಮಾನವ-ಮೃಗ ಸಂಘರ್ಷದ ವಿಚಾರ ಬಹಳ ಗಂಭೀರವಾದ್ದು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು, ಕಳೆದ ಒಂದು ತಿಂಗಳಲ್ಲಿ ನೀವು ಅದನ್ನು ನೋಡಿದ್ದೀರಿ ಎಂದು ಖಂಡ್ರೆ ಹೇಳಿದರು. ಅರಣ್ಯಕ್ಕೆ ಎದುರಾಗುವ ಪ್ರಮುಖ ಆಪತ್ತು. ಕಾಡ್ಗಿಚ್ಚು. ಈ ಕಾಡ್ಗಿಚ್ಚು ಉದ್ದೇಶಪೂರ್ವಕವಾದ್ದೋ, ಸ್ವಾಭಾವಿಕವಾದ್ದೋ ಎಂಬುದು ಮುಖ್ಯವಾಗುತ್ತದೆ. ಕೆಲವೆಡೆ ಮರ ಕಡಿದು ಬುಡಕ್ಕೆ ಬೆಂಕಿ ಹಚ್ಚಿ, ಜೆಸಿಬಿಯಿಂದ ಭೂಮಿ ಮಟ್ಟ ಮಾಡಿ ಅರಣ್ಯ ಭೂಮಿ ಕಬಳಿಸಲಾಗುತ್ತಿದೆ ಎಂಬ ಆರೋಪ ಇದೆ. ಈ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಮಾನವ ಮತ್ತು ಕಾಡು ಮೃಗಗಳ ನಡುವಿನ ಸಂಘರ್ಷ ಕೂಡ ದೊಡ್ಡ ಸವಾಲಾಗಿದೆ. ರಾಜ್ಯದಲ್ಲಿ 2022-23ನೇ ಸಾಲಿನಲ್ಲಿ ವನ್ಯಮೃಗ ದಾಳಿಯಿಂದ 51 ಸಾವು ಸಂಭವಿಸಿದ್ದು, ಇದರಲ್ಲಿ 29 ಸಾವು ಆನೆಗಳಿಂದಲೇ ಆಗಿದೆ ಎಂದು ನನಗೆ ತಿಳಿಸಲಾಗಿದೆ. ರಾಜ್ಯದಲ್ಲಿ ಸುಮಾರು 6 ಸಾವಿರ 30 ಆನೆ ಇದೆ ಎಂದು ಅಂದಾಜು ಮಾಡಲಾಗಿದೆ. ಮನುಷ್ಯರ ಜೀವ ಅಮೂಲ್ಯವಾಗಿದ್ದು, ಅರಣ್ಯ ಇಲಾಖೆ ಜನರಪರ ಕಾಳಜಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

#image_title

ಆನೆಗಳು ನಾಡಿಗೆ ಬರುವುದರಿಂದ ಅಪಾಯ ಹೆಚ್ಚು. ರಾಜ್ಯದಲ್ಲಿ ಸುಮಾರು 641 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಈ ಪೈಕಿ 310 ಕಿ.ಮೀ. ಪೂರ್ಣವಾಗಿದೆ. ಒಂದು ಕಿ.ಮೀ. ರೈಲ್ವೆ ಬ್ಯಾರಿಕೇಡ್ ಮಾಡಲು ಒಂದೂವರೆ ಕೋಟಿ ವೆಚ್ಚವಾಗುತ್ತದೆ. ಉಳಿದ ಕಾಮಗಾರಿ ಮಾಡಲು ಬಜೆಟ್ ನಲ್ಲಿ ಹೆಚ್ಚಿನ ಹಣ ಕೋರಲಾಗಿದೆ, 3 ವರ್ಷಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲು ಕಾಲಮಿತಿ ಹಾಕಿಕೊಳ್ಳಲಾಗಿದೆ ಎಂದರು.
ಕಾಂಪಾ ನಿಧಿ ಬಳಸಿಕೊಂಡು ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ವಿಚಾರದಲ್ಲಿ ಕೇಂದ್ರ ಅರಣ್ಯ ಸಚಿವರಿಗೆ ಕೆಲವು ತಪ್ಪು ಕಲ್ಪನೆ ಇದೆ. ಇದನ್ನು ಇತ್ತೀಚೆಗೆ ನಾನು ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪರಿಹರಿಸಲು ಪ್ರಯತ್ನಿಸಿದ್ದೇವೆ.

ಬ್ಯಾರಿಕೇಡ್ ನಿರ್ಮಾಣಕ್ಕೆ ಏಕೆ ಇಷ್ಟು ವೆಚ್ಚ ಮಾಡುತ್ತೀರಿ ಎಂಬುದು ಅವರ ಪ್ರಶ್ನೆಯಾಗಿದೆ. ಆದರೆ ಮಾನವನ ಜೀವ ಅಮೂಲ್ಯವಾದ್ದು, ಎಷ್ಟೇ ಹಣ ಕೊಟ್ಟರೂ ಅದು ಮರಳಿ ಬರುವುದಿಲ್ಲ. ನಾವು ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ ತಡೆದರೆ ಈ ಅಮೂಲ್ಯ ಜೀವ ಉಳಿಸಬಹುದು ಎಂದು ಅವರಿಗೆ ಮನವರಿಕೆ ಮಾಡಿಸಿದ್ದೇನೆ ಎಂದು ವಿವರಿಸಿದರು.

ಖಾಲಿ ಹುದ್ದೆ ಭರ್ತಿ: ಇಲಾಖೆಯಲ್ಲಿ ಖಾಲಿ ಇರುವ 335 ಹುದ್ದೆ ಭರ್ತಿಗೆ ಹಣಕಾಸು ಇಲಾಖೆ ಅನುಮೋದನೆ ಪಡೆದು ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆಯ ಅನುಮತಿಯ ಅಗತ್ಯವಿಲ್ಲ. ಹೀಗಾಗಿ ಈ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.

ಇದನ್ನೂ ಓದಿ: Tree Plantation: 5 ವರ್ಷದಲ್ಲಿ 25 ಕೋಟಿ ಸಸಿ: ಬದುಕಿರುವ ಬಗ್ಗೆ ಆಡಿಟ್‌ ಮಾಡುತ್ತೇವೆ ಎಂದ ಖಂಡ್ರೆ

ಭೂ ಮಾಪಕರ ಕೊರತೆ: ಅರಣ್ಯ ಮತ್ತು ಕಂದಾಯ ಭೂಮಿಯ ಸಮಸ್ಯೆಗೆ ಜಂಟಿ ಸರ್ವೆ ಪರಿಹಾರವಾಗಿದೆ. ಭೂಮಾಪಕರ ಕೊರತೆಯಿಂದ ಇದು ತಡವಾಗಿದೆ. ಅಧಿವೇಶನದ ವೇಳೆ ಕಂದಾಯ ಸಚಿವರೊಂದಿಗೆ ಸಭೆ ನಡೆಸಿ, ಖಾಸಗಿ ಭೂಮಾಪಕರ ನೆರವು ಪಡೆದು 6 ತಿಂಗಳೊಳಗೆ ಜಂಟಿ ಸರ್ವೆ ಮಾಡಿಸಲು ಪ್ರಯತ್ನಿಸಲಾಗುವುದು ಎಂದರು.

ಅರಣ್ಯ ವ್ಯಾಪ್ತಿ ಹೆಚ್ಚಳ: ರಾಜ್ಯದಲ್ಲಿ 1 ಲಕ್ಷ 2 ಸಾವಿರ ಹೆಕ್ಟೇರ್ ಹಸಿರು ವ್ಯಾಪ್ತಿ (ಗ್ರೀನ್ ಕವರ್) ಹೆಚ್ಚಳವಾಗಿದೆ ಎಂದು ಭಾರತೀಯ ಅರಣ್ಯ ಸಮೀಕ್ಷಾ ವರದಿ ಹೇಳಿದೆ. ಪ್ರಸ್ತುತ ರಾಜ್ಯದಲ್ಲಿ ಶೇ.21ರಷ್ಟು ಹಸಿರು ವ್ಯಾಪ್ತಿ ಇದ್ದು, ಇದನ್ನು ಶೇ.33ಕ್ಕೆ ಹೆಚ್ಚಿಸುವುದು ತಮ್ಮ ಗುರಿ ಎಂದರು.

ವನಮಹೋತ್ಸವ: ಜುಲೈ 1ರಿಂದ 7ರವರೆಗೆ ರಾಜ್ಯದಾದ್ಯಂತ ವನಮಹೋತ್ಸವ ಆಚರಿಸಲಾಗುತ್ತಿದ್ದು, ಈ ಅವಧಿಯಲ್ಲಿ 1 ಕೋಟಿ ಸಸಿ ನೆಡಲು ತೀರ್ಮಾನಿಸಲಾಗಿದೆ. ಈ ವರ್ಷ 5 ಕೋಟಿ ಸಸಿ ನೆಟ್ಟು ಪೋಷಿಸಲಾಗುವುದು ಎಂದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ 3 ವರ್ಷದಲ್ಲಿ ನೆಟ್ಟ ಗಿಡಗಳ ಪೈಕಿ ಶೇ.50-60ರಷ್ಟು ಉಳಿದಿವೆ ಎಂದು ತಿಳಿಸಲಾಗಿದೆ. ಈ ಬಾರಿ ನೆಡಲಾಗುವ ಸಸಿಗಳ ಜಿಯೋ ಟ್ಯಾಗ್ ಮಾಡಲಾಗುತ್ತಿದ್ದು, ಕನಿಷ್ಠ ಶೇ.80ರಷ್ಟು ಸಸಿ ಉಳಿಸಲು ಪ್ರಯತ್ನಿಸಲಾಗುವುದು ಎಂದರು.

Exit mobile version