Site icon Vistara News

Bengaluru Tech Summit: ದೇಶದ ಡಿಜಿಟಲ್ ಭವಿಷ್ಯ ಮುನ್ನಡೆಸುವ ಸಾಮರ್ಥ್ಯ ಕರ್ನಾಟಕಕ್ಕಿದೆ: ಸಿಎಂ ಸಿದ್ದರಾಮಯ್ಯ

CM Siddaramaiah and DK Shivakumar in Bengaluru Tech Summit

ಬೆಂಗಳೂರು: ತಂತ್ರಜ್ಞಾನ ಮಾನವನ ಅಭಿವೃದ್ಧಿಗೆ ಸಾಧನವಾಗಿದೆ. ಅಂತರಗಳನ್ನು ಕಡಿಮೆ ಮಾಡಿ ಜೀವನಮಟ್ಟ ಸುಧಾರಣೆ, ಸುಸ್ಥಿರ ಅಭಿವೃದ್ಧಿಯನ್ನು ಪ್ರೇರೇಪಿಸುವ ಶಕ್ತಿಯನ್ನು ಇದು (Bengaluru Tech Summit) ಹೊಂದಿದೆ. ತಂತ್ರಜ್ಞಾನ ಅಭಿವೃದ್ಧಿಗೆ ರಾಷ್ಟ್ರೀಯ ಯೋಜನೆಯನ್ನು ಸಿದ್ಧಪಡಿಸಿ, ನಾವೀನ್ಯತೆ ಹಾಗೂ ಸುಸ್ಥಿರ ಐಟಿ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದ್ದು, ದೇಶದ ಡಿಜಿಟಲ್‌ ಭವಿಷ್ಯವನ್ನು ಮುನ್ನಡೆಸುವ ಸಾಮರ್ಥ್ಯ ಕರ್ನಾಟಕಕ್ಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು ಟೆಕ್ ಸಮ್ಮಿಟ್ ಅಂಗವಾಗಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಯಮಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿ, ತಂತ್ರಜ್ಞಾನದ ಅಭಿವೃದ್ಧಿ ಎಲ್ಲರನ್ನು ಒಳಗೊಂಡು ಎಲ್ಲರಿಗೂ ದೊರೆಯುವಂತೆ ಮಾಡುವುದು ನಮ್ಮ ಜವಾಬ್ದಾರಿ. ದೇಶದ ಡಿಜಿಟಲ್ ಭವಿಷ್ಯವನ್ನು ಕರ್ನಾಟಕ ಮುನ್ನಡೆಸಲು ಸಾಧ್ಯವಿದೆ ಎಂದು ಹೇಳಿದರು.

ನಾವೀನ್ಯತಾ ತಂತ್ರಜ್ಞಾನ ಹಾಗೂ ಪ್ರಗತಿಯೆಡೆಗೆ ನಮ್ಮ ಬದ್ಧತೆಗೆ ಬೆಂಗಳೂರು ಟೆಕ್ ಸಮ್ಮಿಟ್ ಸಾಕ್ಷಿಯಾಗಿದೆ. ತಂತ್ರಜ್ಞಾನದಲ್ಲಿ ನಮ್ಮ ಸಾಧನೆಯನ್ನು ಮಾತ್ರವಲ್ಲದೇ ನಮ್ಮ ರಾಜ್ಯದ ಅದಮ್ಯ ಚೇತನವನ್ನು ವಾಖ್ಯಾನಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನಕ್ಕೆ ಇನ್ನಷ್ಟು ವೇಗವನ್ನು ನೀಡಲು ನಮಗಿರುವ ಅಚಲ ಬದ್ಧತೆಯನ್ನು ಟೆಕ್ ಸಮ್ಮಿಟ್ ಪ್ರತಿನಿಧಿಸುತ್ತದೆ ಎಂದರು.

ಇದನ್ನೂ ಓದಿ | Shakti Scheme : ಸರ್ಕಾರಿ ಬಸ್‌ ಮೆಟ್ಟಿಲಿಗೆ ನಮಸ್ಕರಿಸಿದ್ದ ಮಹಿಳೆಯ ಜತೆ ಸಿದ್ದರಾಮಯ್ಯ ಅನಿರೀಕ್ಷಿತ ಭೇಟಿ

ರಾಜಕೀಯ ವ್ಯವಸ್ಥೆಯಲ್ಲಿ ಸದಾ ಸ್ಥಿರತೆ

80ರ ದಶಕದ ಅಂತ್ಯ ಹಾಗೂ 90ರ ದಶಕದಲ್ಲಿಯೇ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ದೂರದೃಷ್ಟಿಯಂತೆ ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಐಟಿ/ಬಿಟಿಗೆ ಭದ್ರ ಬುನಾದಿಯನ್ನು ಹಾಕಿತ್ತು. ನೀತಿ ನಿರೂಪಣೆ, ತಂತ್ರಜ್ಞಾನ ಹಾಗೂ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲಾಯಿತು. ಕರ್ನಾಟಕದ ಮೊತ್ತಮೊದಲ ಐಟಿ ನೀತಿಯನ್ನು ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ 1992ರಲ್ಲಿ ರೂಪಿಸಿತು. ಈ ನೀತಿಯು ದೇಶಕ್ಕೇ ಮಾದರಿ ಐಟಿ ನೀತಿಯಾಗಿ ಹೊರಹೊಮ್ಮಿತು. ಕಾಂಗ್ರೆಸ್ ಸರ್ಕಾರ ರಾಜಕೀಯ ವ್ಯವಸ್ಥೆಯಲ್ಲಿ ಸದಾ ಸ್ಥಿರತೆಯನ್ನು ತಂದುಕೊಟ್ಟಿದ್ದು, ಆಡಳಿತದಲ್ಲಿ ಸುಸ್ಥಿರತೆ ತರಲು ಹಾಗೂ ದೀರ್ಘಾವಧಿ ಹೂಡಿಕೆಗಳನ್ನು ಕೈಗೊಳ್ಳಲು ಶ್ರಮಿಸಿದೆ ಎಂದರು.

ವಿಶ್ವದಲ್ಲಿಯೇ ಮೊದಲ ಸ್ಥಾನಕ್ಕೇರಲು ಸಮರ್ಥ

ಬೆಂಗಳೂರು ಐಟಿ ರಾಜಧಾನಿಯಾಗಿದ್ದು ಅಗತ್ಯ ಮೂಲಸೌಕರ್ಯಗಳನ್ನು ಹೊಂದಿದೆ. ಬೆಂಗಳೂರು ಐಟಿ/ಬಿಟಿ ರಫ್ತಿನಲ್ಲಿ ಮುಂಚೂಣಿಯಲ್ಲಿದ್ದು , ವಿಶ್ವದಲ್ಲಿಯೇ ಮೊದಲ ಸ್ಥಾನಕ್ಕೇರಲು ಎಲ್ಲಾ ಸಾಮರ್ಥ್ಯವನ್ನು ಹೊಂದಿದ್ದು, ನಮ್ಮ ಸರ್ಕಾರ ಈ ಗುರಿಯನ್ನು ಸಾಧಿಸಲು ಹಿಂದೆ ಬೀಳುವುದಿಲ್ಲ ಎಂದರು. ನಾವೀನ್ಯತಾ ವಲಯಗಳು ಬೆಂಗಳೂರಿನಲ್ಲಿ ನೆಲೆಸಿರುವುದು ಅತ್ಯಂತ ಸೂಕ್ತವಾಗಿದೆ ಐಒಟಿ, ಕೃತಕ ಬುದ್ಧಿಮತ್ತೆ , ಕ್ವಾಂಟಮ್ ಕಂಪ್ಯೂಟಿಂಗ್ ಮುಂತಾದವುಗಳಲ್ಲಿಯೂ ಮುಂಚೂಣಿಯಲ್ಲಿದೆ. ಜಾಗತಿಕ ಹೂಡಿಕೆ ಹಾಗೂ ಪ್ರತಿಭೆಗಳನ್ನು ಕರ್ನಾಟಕಕ್ಕೆ ಆಕರ್ಷಿಸಲು ಇದು ಸಹಾಯಕವಾಗಿದೆ. ನಾವು ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು, ಉತ್ಕೃಷ್ಟತಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಇದನ್ನೂ ಓದಿ | Karnataka Politics: ನಿಗಮ-ಮಂಡಳಿಗೆ ಕಾರ್ಯಕರ್ತರನ್ನು ನೇಮಕ ಮಾಡಿ; ಕೆಪಿಸಿಸಿ ಪ್ರಚಾರ ಸಮಿತಿ ಪದಾಧಿಕಾರಿಗಳ ಆಗ್ರಹ

ಕೌಶಲ್ಯ ಮಂಡಳಿ ರಚನೆ

ಉದ್ಯಮಶೀಲತೆ ಹಾಗೂ ಶಿಕ್ಷಣವನ್ನು ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ರೂಪಸಿ ಭವಿಷ್ಯದ ಬೇಡಿಕೆಗಳನ್ನು ಪರಿಣಾಮಕಾರಿಯಾಗಿ ಪೂರೈಸುವಂತೆ ಮಾಡಲಾಗಿದೆ. ಕೌಶಲ್ಯಾಭಿವೃದ್ಧಿಗೆ ಪ್ರತ್ಯೇಕ ಇಲಾಖೆಯನ್ನು ರಚಿಸಿದ ಮೊದಲ ರಾಜ್ಯ ಕರ್ನಾಟಕ. ಸಂಬಂಧಪಟ್ಟ ಎಲ್ಲಾ ಪಾಲುದಾರರ ಸಹಯೋಗದೊಂದಿದೆ ಕೌಶಲ್ಯ ಮಂಡಳಿ ರಚನೆಯತ್ತಲೂ ನಮ್ಮ ರಾಜ್ಯ ಕಾರ್ಯನಿರ್ವಹಿಸುತ್ತಿದೆ. ಉದ್ಯಮ ಹಾಗೂ ಶಿಕ್ಷಣ ಸಂಸ್ಥೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಇದೊಂದು ದೊಡ್ಡ ಮೈಲಿಗಲ್ಲಾಗಲಿದೆ ಎಂದರು. ಶಿಕ್ಷಣ ಹಾಗೂ ಉದ್ಯಮ ಕ್ಷೇತ್ರದ ಸಹಯೋಗದಲ್ಲಿ ಭವಿಷ್ಯಕ್ಕೆ ಸಿದ್ಧರಾಗಿರುವ ಕಾರ್ಯಪಡೆಯನ್ನು ಸಿದ್ಧಪಡಿಸುವಲ್ಲಿ ನೆರವಾಗಲಿದೆ. ಜಾಗತಿಕ ತಾಪಮಾನ, ಹಾವಾಮಾನ ಬದಲಾವಣೆ, ಸೈಬರ್ ಸೆಕ್ಯೂರಿಟಿ ಮುಂತಾದ ಜಾಗತಿಕ ಸಮಸ್ಯೆಗಳನ್ನು ಎದುರಿಸಲು ನಮ್ಮ ಶಕ್ತಿಯನ್ನು ಬಳಸಲು ನಾವು ಬದ್ಧರಾಗಿದ್ದೇವೆ ಎಂದರು.

ನಾವೀನ್ಯತಾ ವಲಯದಲ್ಲಿ ಸ್ಟಾರ್ಟಪ್ ಹಾಗೂ ಯುವ ಸಂಸ್ಥೆಗಳು ಜೀವನಾಡಿಯಾಗಿವೆ. ಈ ವಲಯದ ಬೆಳವಣಿಗೆಗೆ ಅಗತ್ಯವಿರುವ ಅನುದಾನ ಹಾಗೂ ನೆರವನ್ನು ಒದಗಿಸಲು ನಮ್ಮ ಸರ್ಕಾರ ಸಿದ್ಧವಿದೆ. ತಂತ್ರಜ್ಞಾನ ನಾಯಕತ್ವದಲ್ಲಿ ರಾಷ್ಟ್ರೀಯ ಯೋಜನೆಯನ್ನು ಸಿದ್ಧಪಡಿಸಿ, ನಾವೀನ್ಯತೆ ಹಾಗೂ ಸುಸ್ಥಿರ ಐಟಿ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಗುರಿ. ಈ ಕುರಿತಂತೆ ಸಲಹೆ ಹಾಗೂ ಸಂವಾದಗಳನ್ನು ಕೈಗೊಳ್ಳಲು ಕರ್ನಾಟಕಕ್ಕಿಂತಲೂ ಉತ್ತಮವಾದ ರಾಜ್ಯವಿಲ್ಲ ಎಂದರು.

ಮೂಲಸೌಕರ್ಯ ಅಭಿವೃದ್ಧಿ

ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಾರ್ವಜನಿಕ ಸಾರಿಗೆಯ ಸುಧಾರಣೆ ಹಾಗೂ ಮೂಲಸೌಕರ್ಯವನ್ನು ಅಭಿವೃದ್ಧಿಗೊಳಿಸಲಾಗುವುದು. ಮೆಟ್ರೋ ಸಂಪರ್ಕ ಜಾಲವನ್ನು ಶೀಘ್ರವಾಗಿ ವಿಸ್ತರಿಸಲಾಗುತ್ತಿದ್ದು, ವಿಮಾನನಿಲ್ದಾಣಕ್ಕೆ ಮೆಟ್ರೋ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದರು.

ಇದನ್ನೂ ಓದಿ | Cauvery water dispute : ಮೇಕೆದಾಟು ಪಾದಯಾತ್ರೆ ವೇಳೆ ಎಲ್ಲಿ ಹೋಗಿದ್ರಿ? ಕಾವೇರಿ ಹೋರಾಟಗಾರರ ಮೇಲೆ ಹರಿಹಾಯ್ದ ಡಿಕೆಶಿ

ದೇವನಹಳ್ಳಿ ಪ್ರದೇಶದಲ್ಲಿ ತೈವಾನ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಫಾಕ್ಸ್ಕಾನ್ ಸದ್ಯದಲ್ಲಿಯೇ ತನ್ನ ಉತ್ಪಾದನಾ ಘಟಕವನ್ನು ತೆರೆಯುವುದಾಗಿ ಘೋಷಿಸಿದೆ. ಆನೇಕಲ್, ದೊಡ್ಡಬಳ್ಳಾಪುರ ಮತ್ತಿತತರ ನಗರಗಳು ಹೂಡಿಕೆಯ ವಿಸ್ತರಣೆಗೆ ಅವಕಾಶಗಳನ್ನು ಹೊಂದಿದ್ದು, ಬೆಂಗಳೂರು ನಗರಕ್ಕೆ ಹತ್ತಿರವಿರುವುದರಿಂದ ಪ್ರಯೋಜನಕಾರಿಯಾಗಿದೆ. ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಈಗಾಗಲೇ ವಿವಿಧ ಸಂಸ್ಥೆಗಳು ಆಸಕ್ತಿ ಹೊಂದಿವೆ. ಇದಕ್ಕಾಗಿ ಈಗಾಗಲೇ ಇರುವ ಹೆದ್ದಾರಿಗಳ ಸುಧಾರಣೆ ಹಾಗೂ ಹೊಸ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Exit mobile version