ಬೆಂಗಳೂರು: ವೃತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆ (CET Ranking) ರ‍್ಯಾಂಕಿಂಗ್‌ಗೆ ಸಂಬಂಧಿಸಿದಂತೆ ಉಂಟಾಗಿದ್ದ ಬಿಕ್ಕಟ್ಟು ಬಗೆಹರಿಸಲು ರಾಜ್ಯ ಸರ್ಕಾರ ನೇಮಿಸಿದ್ದ ಸಮಿತಿಯ ವರದಿಯನ್ನು ಹೈಕೋರ್ಟ್ ಒಪ್ಪಿಕೊಂಡಿದ್ದು, ಇದರಿಂದ ಬಿಕ್ಕಟ್ಟು ಶಮನವಾದಂತಾಗಿದೆ.
ಹೈಕೋರ್ಟ್ ಒಪ್ಪಿಗೆ ಬಳಿಕ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, “ಹೈಕೋರ್ಟ್ ಒಪ್ಪಿಕೊಂಡಿರುವುದು ಸ್ವಾಗತಾರ್ಹವಾಗಿದೆ. ಪರಿಷ್ಕೃತ ರ‍್ಯಾಂಕಿಂಗ್ ಪಟ್ಟಿಯನ್ನು ಸೆ.29ರಂದು ಬಿಡುಗಡೆ ಮಾಡಲಾಗುವುದು. ಜತೆಗೆ ಅಕ್ಟೋಬರ್ 3ರಿಂದ ಪ್ರವೇಶಾತಿ ಮೊದಲ ಸುತ್ತಿನ ಕೌನ್ಸೆಲಿಂಗ್ ಆರಂಭಿಸಲಾಗುವುದು” ಎಂದು ಮಾಹಿತಿ ನೀಡಿದ್ದಾರೆ.
“ಸಮಸ್ಯೆ ಬಗೆಹರಿಸಲು ಒಂದು ಸಮನ್ವಯ ಸೂತ್ರ ರೂಪಿಸುವಂತೆ ಸೂಚಿಸಿತ್ತು. ಅದರಂತೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ಐವರ ಸಮಿತಿ ರಚಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದೆವು. ನ್ಯಾಯಾಲಯವು ಸಮಿತಿ ಕೊಟ್ಟ ವರದಿಯನ್ನು ಪುರಸ್ಕರಿಸಿರುವುದು ಸಂತಸ ತಂದಿದೆ” ಎಂದಿದ್ದಾರೆ.
ಏನಿದು ಬಿಕ್ಕಟ್ಟು?
ಪುನರಾವರ್ತಿತ ಸಿಇಟಿ ವಿದ್ಯಾರ್ಥಿಗಳ ೨೦೨೧ನೇ ಸಾಲಿನ ಪಿಯುಸಿ ಅಂಕಗಳನ್ನು ೨೦೨೨ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸುವ ವಿಚಾರದಲ್ಲಿ ಬಿಕ್ಕಟ್ಟು ಉಂಟಾಗಿದೆ. ಪ್ರಸಕ್ತ ಸಾಲಿನಲ್ಲಿ ಸಿಇಟಿ ಬರೆದ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ತೊಂದರೆ ಆಗದ ರೀತಿಯಲ್ಲಿ ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸುವಂತೆ ಸರ್ಕಾರಕ್ಕೆ ಸೆ.೧೯ರಂದು ಹೈಕೋರ್ಟ್ ಸೂಚಿಸಿತ್ತು.
ಪ್ರಸಕ್ತ ವರ್ಷದ ಸಿಇಟಿ ರ‍್ಯಾಂಕಿಂಗ್‌ನಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳ ಅಂಕ ಪರಿಗಣಿಸದ್ದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಕೋರ್ಟ್ ಮೊರೆಹೋದ ಕಾರಣ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಕೋರ್ಟ್ ನಿರ್ದೇಶನದ ಬಳಿಕ ಸರ್ಕಾರ ಸಮನ್ವಯ ಸೂತ್ರ ರಚನೆಗೆ ಸಮಿತಿ ರಚಿಸಿತ್ತು. ಈಗ ಸಮಿತಿಯ ವರದಿಯನ್ನು ಹೈಕೋರ್ಟ್ ಮನ್ನಿಸಿದೆ.
ಇದನ್ನೂ ಓದಿ | KCET 2022 | ಸಿಇಟಿ ರ‍್ಯಾಂಕಿಂಗ್ ಪಟ್ಟಿ ಬಿಕ್ಕಟ್ಟು; ಸರ್ಕಾರದ ಬಳಿ ಪರಿಹಾರ ಸೂತ್ರವಿದೆಯೇ?