ಬೆಂಗಳೂರು: ಅವಳಿಗೆ ಆಗ ಇನ್ನೂ 18 ತುಂಬಿರಲಿಲ್ಲ. ಸೋದರ ಸಂಬಂಧಿಯೊಬ್ಬ ಆಕೆಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಸಖ್ಯ ಬೆಳೆಸಿದ್ದ (Sexual harrassment). ಆಕೆ ಗರ್ಭಿಣಿಯಾದಾಗ ಊರಿನವರ ಮುಂದೆ ಮದುವೆಯಾಗುವುದಾಗಿ ಮಾತುಕೊಟ್ಟಿದ್ದ. ಆಕೆಗೆ ಹೆರಿಗೆಯಾದಾಗ ತಪ್ಪಿಸಿಕೊಂಡಿದ್ದ. ಇನ್ನೊಂದು ಕಡೆ ಕೋರ್ಟ್ ಕೂಡಾ ಆತನನ್ನು ಖುಲಾಸೆಗೊಳಿಸಿತು. ಎರಡೂ ಕಡೆ ಮೋಸಕ್ಕೊಳಗಾದ ಯುವತಿ ಮತ್ತೆ ಕೋರ್ಟ್ ಮೆಟ್ಟಿಲು ಹತ್ತಿದ್ದಳು. ಈಗ ಕೊನೆಗೆ ಆತನನ್ನು ಖುಲಾಸೆಗೊಳಿಸಿದೆ ವಿಚಾರಣಾಧೀನ ನ್ಯಾಯಾಲಯ ಆದೇಶವನ್ನು ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್ (Karnataka High court) ಆತನಿಗೆ ಶಿಕ್ಷೆ ವಿಧಿಸುವಂತೆ ಆದೇಶ ಮಾಡಿದೆ. ಡಿಎನ್‌ಎ ಪರೀಕ್ಷೆ ವರದಿ ಇಲ್ಲ ಎಂಬ ಕಾರಣಕ್ಕೆ ಆತನಿಗೆ ಆವತ್ತು ಖುಲಾಸೆಯಾಗಿತ್ತು. ಆದರೆ, ಇದನ್ನು ಹೈಕೋರ್ಟ್ ಒಪ್ಪಿಲ್ಲ.
ಇದು ಮಡಿಕೇರಿಯ ಮಡೆ ಗ್ರಾಮದ ವಿಜಯ ಅಲಿಯಾಸ್ ವಿಜಯಕುಮಾರ್ ಎಂಬಾತನ ಮೇಲಿರುವ ಅತ್ಯಾಚಾರದ ಕೇಸು. 2016ರ ಮಾರ್ಚ್ 10ರಂದು ಕೊಡಗಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆತನನ್ನು ಖುಲಾಸೆಗೊಳಿಸಿತ್ತು. ಇದನ್ನು ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಕೆ ಎಸ್ ಮುದಗಲ್ ಮತ್ತು ರಾಜೇಂದ್ರ ಬದಾಮಿಕರ್ ಅವರ ನೇತೃತ್ವದ ವಿಭಾಗೀಯ ಪೀಠವು ಪುರಸ್ಕರಿಸಿದೆ.
ಹಾಗಿದ್ದರೆ ಹೈಕೋರ್ಟ್ ಆದೇಶದಲ್ಲಿ ಹೇಳಿದ್ದೇನು?
- ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ರೂಪಿಸಲಾಗಿರುವ ನಿಯಮಗಳಿಗೆ ಪೂರಕವಾಗಿ ಅಧಿಕೃತ ಸಾಕ್ಷ್ಯಗಳನ್ನು ವಿಚಾರಣಾಧೀನ ನ್ಯಾಯಾಲಯವು ಪರಿಗಣಿಸದೇ ಆರೋಪಿಯನ್ನು ಖುಲಾಸೆಗೊಳಿಸುವ ಮೂಲಕ ಕಾನೂನುಬಾಹಿರವಾಗಿ ನಡೆದುಕೊಂಡಿದೆ.
- ನಿಷಿದ್ಧವಾಗಿರುವ 15 ವರ್ಷದ ತನ್ನ ಸೋದರ ಸಂಬಂಧಿಯ ಜೊತೆ ಸಂಭೋಗ ನಡೆಸಿರುವುದಲ್ಲದೇ ಆಕೆಗೆ ವಂಚಿಸಿರುವುದನ್ನು ಪರಿಗಣಿಸಲು ವಿಚಾರಣಾಧೀನ ನ್ಯಾಯಾಲಯ ವಿಫಲವಾಗಿದೆ.
- ಆರೋಪಿಯನ್ನು ಖುಲಾಸೆ ಮಾಡಿರುವ ಆದೇಶವು ನ್ಯಾಯದಾನಕ್ಕೆ ಮಾರಕವಾಗಿದ್ದು, ಅದನ್ನು ಬದಿಗೆ ಸರಿಸಲು ಅರ್ಹವಾಗಿದೆ.
- ಅತ್ಯಾಚಾರ ಪ್ರಕರಣಗಳಲ್ಲಿ ವಂಶವಾಹಿ ಪರೀಕ್ಷೆ ನಡೆಸಿಲ್ಲ ಎಂಬ ಅಂಶವನ್ನು ವಿಚಾರಣೆಯ ಹಣೆಬರಹ ನಿರ್ಧರಿಸಲು ಅನುಮತಿಸಲಾಗದು ಎಂದು ಸುಪ್ರೀಂ ಕೋರ್ಟ್ ವೀರೇಂದ್ರ ಪ್ರಕರಣದಲ್ಲಿ ತಿಳಿಸಿದೆ ಎಂದು ಹೈಕೋರ್ಟ್ ನೆನಪಿಸಿದೆ.
ಮೂಲ ಘಟನೆ ನಡೆದಿದ್ದು 2008ರಲ್ಲಿ.. ಈಗ ಆಕೆ ಎಲ್ಲಿದ್ದಾಳೆ?
ಅತ್ಯಾಚಾರದ ಮೂಲ ಘಟನೆ ನಡೆದಿರುವುದು 2008ರಲ್ಲಿ. ಆಕೆ ಜನಿಸಿದ್ದು 1992ರ ಫೆಬ್ರವರಿ 29ರಂದು. ಆರೋಪಿಯು ಆಕೆಯ ಚಿಕ್ಕಪ್ಪನ ಮಗ. 2008ರ ಆ ದಿನ ಆರೋಪಿಯ ಜಮೀನಿಗೆ ಕೂಲಿ ಕೆಲಸಕ್ಕೆ ತೆರಳಿದ್ದ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಬಳಸಿಕೊಂಡಿದ್ದ.
ಇದರಿಂದ ಆಕೆ ಗರ್ಭಿಣಿಯಾಗಿದ್ದು, ವಿಚಾರ ಪೋಷಕರ ಗಮನಕ್ಕೆ ಬಂದಿತ್ತು. ಮಗುವನ್ನು ತೆಗೆಸಿದರೆ ಮದುವೆಯಾಗುವುದಾಗಿ ಆತ ಷರತ್ತು ವಿಧಿಸಿದ್ದ. ಊರಿನವರ ಪಂಚಾಯಿತಿಯಲ್ಲಿ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ತಿಳಿಸಿದ್ದ. ಆದರೆ, ಬಳಿಕ ನಾಪತ್ತೆಯಾಗಿದ್ದ. ಹೀಗಾಗಿ, ಆತನ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 376 ಮತ್ತು 420ರ ಪ್ರಕರಣ ದಾಖಲಿಸಲಾಗಿತ್ತು. ಈ ನಡುವೆ ಸಂತ್ರಸ್ತೆಗೆ ಈ ಸಂಬಂಧದಿಂದ ಹೆಣ್ಣು ಮಗು ಹುಟ್ಟಿತ್ತು. ಬಳಿಕ ಆಕೆ ಮತ್ತೊಂದು ಮದುವೆಯಾಗಿದ್ದರು. ಈ ಸಂಬಂಧದಿಂದ ಮತ್ತೊಂದು ಮಗುವಿದೆ.
ವಿಚಾರಣಾಧೀನ ನ್ಯಾಯಾಲಯ ಏನು ಹೇಳಿತ್ತು?
ವಿಚಾರಣಾಧೀನ ನ್ಯಾಯಾಲಯವು ಸಂತ್ರಸ್ತೆಯ ವಯಸ್ಸು ಸಾಬೀತಾಗಿಲ್ಲ. ಆರೋಪಿ ಮತ್ತು ಸಂತ್ರಸ್ತೆಯ ನಡುವಿನ ಸಂಬಂಧ ಒಪ್ಪಿತವಾಗಿತ್ತು. ಆರೋಪಿಯು ಸಂತ್ರಸ್ತೆಯ ಜೊತೆಗೆ ಹೊಂದಿದ್ದ ಸಂಭೋಗದಿಂದ ಆಕೆ ಗರ್ಭಿಣಿಯಾಗಿದ್ದಳು ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಂಶವಾಹಿ ಪರೀಕ್ಷೆ ವರದಿ ಸಲ್ಲಿಸಿಲ್ಲ ಎಂದು ಕಾರಣಗಳನ್ನು ನೀಡಿ, ಆರೋಪಿಯನ್ನು ಖುಲಾಸೆಗೊಳಿಸಿತ್ತು.
ಇದನ್ನೂ ಓದಿ: High court Relief : ಅಪರಾಧಿಯ ಮದುವೆಗಾಗಿ ಭರ್ಜರಿ ರಿಲೀಫ್, 60 ದಿನ ಪೆರೋಲ್!