ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್ (Karnataka High court) ಮೆಟ್ಟಿಲೇರಿದ್ದ ಸಾಮಾಜಿಕ ಜಾಲತಾಣ ಕಂಪನಿ ಟ್ವಿಟರ್ಗೆ (Twitter) ತೀವ್ರ ಹಿನ್ನಡೆಯಾಗಿದೆ. ಕೇಂದ್ರದ ವಿರುದ್ಧ ಟ್ವಿಟರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, 50 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ. ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ‘ಟ್ವೀಟ್ಗಳನ್ನು ತೆಗೆದುಹಾಕಿ, ಟ್ವಿಟರ್ ಅಕೌಂಟ್ (Twitter Account)ಗಳನ್ನು ಬ್ಲಾಕ್ ಮಾಡಿ ಎಂದು ಟ್ವಿಟರ್ ಕಂಪನಿಗೆ ಆದೇಶ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ’ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯ್ದೆಗಳನ್ನು (ಈಗ ಹಿಂಪಡೆಯಲಾಗಿದೆ) ವಿರೋಧಿಸಿ ರೈತರು ದೆಹಲಿ ಗಡಿ ಭಾಗಗಳಲ್ಲಿ 2020ರ ಆಗಸ್ಟ್ನಿಂದ 2021ರ ಡಿಸೆಂಬರ್ವರೆಗೆ ಪ್ರತಿಭಟನೆ ನಡೆಸಿದ್ದರು. ಹಾಗೇ, 2020ರಿಂದ ಕೊವಿಡ್ 19 ಸಾಂಕ್ರಾಮಿಕವೂ ಪ್ರಾರಂಭವಾಯಿತು. ಈ ರೈತರ ಪ್ರತಿಭಟನೆ ಮತ್ತು ಕೊವಿಡ್ 19 ಬಗ್ಗೆ ಟ್ವಿಟರ್ನಲ್ಲಿ 2021ರಿಂದ 2022ರ ನಡುವೆ ಹಲವು ತಪ್ಪು ಮಾಹಿತಿಗಳು ಟ್ವೀಟ್ ಆಗಿದ್ದವು. ಕೆಲವು ಟ್ವಿಟರ್ ಅಕೌಂಟ್ಗಳಂತೂ ಬರೀ ಸುಳ್ಳು ವಿಷಯಗಳನ್ನೇ ಟ್ವೀಟ್ ಮಾಡಿದ್ದವು. ಫೇಕ್ ನ್ಯೂಸ್ಗಳನ್ನು ಹಬ್ಬಿಸುತ್ತಿರುವ ಆರೋಪ ಕೇಳಿಬಂದಿತ್ತು.
ರೈತರ ಪ್ರತಿಭಟನೆ, ಕೊವಿಡ್ 19 ಬಗ್ಗೆ ಹೀಗೆ ಸದಾ ತಪ್ಪು ಮಾಹಿತಿ ನೀಡುತ್ತಿರುವ ಒಂದಷ್ಟು ಟ್ವಿಟರ್ ಅಕೌಂಟ್ಗಳನ್ನು ಬ್ಲಾಕ್ ಮಾಡುವಂತೆ ಮತ್ತು ಅಂಥ ಟ್ವೀಟ್ಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಟ್ವಿಟರ್ಗೆ ಸೂಚನೆ ನೀಡಿತ್ತು. ಆದರೆ ಟ್ವಿಟರ್ ಕೇಂದ್ರದ ಆದೇಶ ಪಾಲಿಸುವ ಬದಲು, ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿ, ಕೇಂದ್ರದ ಆದೇಶವನ್ನು ಪ್ರಶ್ನಿಸಿತ್ತು. ಪ್ರತಿ ಅರ್ಜಿ ಸಲ್ಲಿಸಿದ್ದ ಕೇಂದ್ರ ಸರ್ಕಾರ ‘ಹಲವು ವರ್ಷಗಳಿಂದಲೂ ಟ್ವಿಟರ್ ನಿಯಮ ತಪ್ಪುತ್ತಿದೆ. ಕೇಂದ್ರ ಸರ್ಕಾರದ ಐಟಿ ನಿಯಮಗಳನ್ನು ಪಾಲಿಸುತ್ತಿಲ್ಲ’ ಎಂದು ಹೇಳಿತ್ತು.
ಇಂದು ಆದೇಶ ನೀಡಿದ ನ್ಯಾಯಮೂರ್ತಿ ದೀಕ್ಷಿತ್ ‘ಕೇಂದ್ರ ಸರ್ಕಾರದ ಐಟಿ ನಿಯಮಗಳನ್ನು ಪಾಲಿಸದೆ ಇರುವುದಕ್ಕೆ ಟ್ವಿಟರ್ ಸಮರ್ಪಕ ಕಾರಣ ನೀಡಿಲ್ಲ. ಕೇಂದ್ರದ ಬೇಡಿಕೆಯನ್ನು ಯಾಕೆ ಪೂರೈಸಿಲ್ಲ ಎಂಬುದಕ್ಕೂ ಉತ್ತರ ನೀಡಿಲ್ಲ. ಟ್ವಿಟರ್ ಒಬ್ಬ ರೈತನಲ್ಲ, ಸಾಮಾನ್ಯ ಪ್ರಜೆಯೂ ಅಲ್ಲ. ಅದೊಂದು ಬಿಲಿಯನೇರ್ ಕಂಪನಿ. ನಿಯಮಗಳಿಗೆ ಅನುಸಾರವಾಗಿ ನಡೆಯಲೇಬೇಕಾಗುತ್ತದೆ’ ಎಂದು ಹೇಳಿದ್ದಾರೆ. ಹಾಗೇ, ‘45 ದಿನಗಳ ಒಳಗೆ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದಲ್ಲಿ 50 ಲಕ್ಷ ರೂಪಾಯಿ ಠೇವಣಿ ಇಡಬೇಕು. ಅವಧಿ ಮೀರಿದರೆ ದಿನಕ್ಕೆ 5 ಸಾವಿರ ರೂ.ಹೆಚ್ಚುವರಿ ದಂಡದಂತೆ ಮೊತ್ತ ಅಧಿಕವಾಗುತ್ತದೆ’ ಎಂದು ಟ್ವಿಟರ್ಗೆ ಸೂಚಿಸಿದ್ದಾರೆ.