ಬೆಂಗಳೂರು: ಕೊರೊನಾ ಬಿಕ್ಕಟ್ಟಿನಿಂದ ಉಂಟಾದ ನಷ್ಟ ತೂಗಿಸಲು ಹಲವು ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದವು. ಈಗ ಆರ್ಥಿಕ ಸುಧಾರಣೆಯಾಗುತ್ತಿದ್ದರೂ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವುದು ಮಾತ್ರ ನಿಂತಿಲ್ಲ. ಇದೇ ರೀತಿ ಬೈಜೂಸ್ ಇ-ಲರ್ನಿಂಗ್ (BYJU’s Layoff) ಸಂಸ್ಥೆಯು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿರುವ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಕೇರಳದಲ್ಲಿ ಈಗಾಗಲೇ ಬೈಜೂಸ್ ಕಂಪನಿಯು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಇದೇ ಕಾರಣಕ್ಕೆ ಅಲ್ಲಿನ ನೌಕರರು ರಾಜ್ಯ ಕಾರ್ಮಿಕ ಸಚಿವ ವಿ. ಶಿವಕುಟ್ಟಿ ಅವರನ್ನು ಭೇಟಿಯಾಗಿ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ತಿಳಿದುಬಂದಿದೆ. “ಕೇಂದ್ರ ಕಚೇರಿಯಲ್ಲಿರುವ ಸಿಬ್ಬಂದಿಯನ್ನು ಬಲವಂತವಾಗಿ ಕೆಲಸದಿಂದ ತೆಗೆದುಹಾಕಲಾಗುತ್ತಿದೆ” ಎಂದು ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನ ನೌಕರರ ಒಕ್ಕೂಟ (KITU)ದ ಕಾರ್ಯದರ್ಶಿ ಸೂರಜ್ ನಿದಿಯಂಗ ಹೇಳಿದ್ದಾರೆ.
ಬೈಜೂಸ್ ಹೇಳುವುದೇನು?
“ಬೆಂಗಳೂರಿನ ಕಚೇರಿಯಲ್ಲಿ ಯಾವುದೇ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿಲ್ಲ” ಎಂದು ಬೈಜೂಸ್ ಸ್ಪಷ್ಟನೆ ನೀಡಿದೆ. “ಕೇರಳದಲ್ಲಿಯೂ ಯಾವುದೇ ಸಿಬ್ಬಂದಿಯನ್ನು ಬಲವಂತವಾಗಿ ಕೆಲಸದಿಂದ ತೆಗೆದುಹಾಕಿಲ್ಲ. ಬೆಂಗಳೂರಿನಲ್ಲೂ ವಜಾಗೊಳಿಸಿಲ್ಲ. ಬೈಜೂಸ್ ಒಂದು ಜವಾಬ್ದಾರಿಯುತ ಸಂಸ್ಥೆಯಾಗಿದ್ದು, ಮೌಲ್ಯಗಳಿಗೆ ಬೆಲೆ ಕೊಡುತ್ತದೆ” ಎಂದು ಸ್ಪಷ್ಟನೆ ನೀಡಿದೆ. ನಷ್ಟದ ಹಿನ್ನೆಲೆಯಲ್ಲಿ ಕೇರಳದ ತಿರುವನಂತಪುರಂನಲ್ಲಿರುವ ಬೈಜೂಸ್ ಕಚೇರಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Twitter | ಎಲಾನ್ ಮಸ್ಕ್ ತೆಕ್ಕೆಗೆ ಟ್ವಿಟರ್, ಸಿಇಒ ಪರಾಗ್ ಅಗ್ರವಾಲ್ ವಜಾ