ಬೆಂಗಳೂರು: ಹೈಕೋರ್ಟ್ ಆದೇಶದನ್ವಯ ಎಸಿಬಿ ರಚನೆ ರದ್ದುಪಡಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಲೋಕಾಯುಕ್ತಕ್ಕೆ (Karnataka Lokayukta) ಕಡತ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಇದೆಲ್ಲದರ ನಡುವೆ ಎಸಿಬಿಯಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ಎಲ್ಲಿಗೆ ನಿಯೋಜಿಸಬೇಕೆಂಬ ಹೊಸ ತಲೆನೋವು ಪೊಲೀಸ್ ಇಲಾಖೆಗೆ ಎದುರಾಗಿದೆ.
ಲೋಕಾಯುಕ್ತಕ್ಕೆ ಪರ್ಯಾಯವಾಗಿ ಎಸಿಬಿಯನ್ನು ರಚನೆ ಮಾಡಿದ್ದ ರಾಜ್ಯ ಸರ್ಕಾರ ಆಯಕಟ್ಟಿನ ಜಾಗಗಳಲ್ಲಿ ಇನ್ಸ್‌ಪೆಕ್ಟರ್, ಡಿವೈಎಸ್‌ಪಿ, ಎಸ್‌ಪಿ ಹಂತದ ಅಧಿಕಾರಿಗಳನ್ನು ನಿಯೋಜನೆ ಮಾಡಿತ್ತು. ರಾಜ್ಯಾದ್ಯಂತ ಎಸಿಬಿಯಲ್ಲಿ 75 ಮಂದಿ ಇನ್ಸ್‌ಪೆಕ್ಟರ್‌ಗಳು ಕಾರ್ಯನಿರ್ವಹಿಸುತ್ತಿದ್ದರೆ, 45 ಡಿವೈಎಸ್‌ಪಿ, 9 ಮಂದಿ ಎಸ್‌ಪಿ ದರ್ಜೆಯ ಅಧಿಕಾರಿಗಳು ಇದ್ದಾರೆ. ಈಗ ಎಸಿಬಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಇಷ್ಟೂ ಮಂದಿ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿ ಮಾಡುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಲೋಕಾಯುಕ್ತದಲ್ಲಿ ಸ್ಥಳವಿಲ್ಲ!
ಈಗ ಎಸಿಬಿಯಲ್ಲಿ ಇದ್ದ ಪೊಲೀಸ್ ಅಧಿಕಾರಿಗಳನ್ನು ಲೋಕಾಯುಕ್ತಕ್ಕೆ ನಿಯೋಜನೆ ಮಾಡೋಣ ಎಂದರೆ ಅಲ್ಲಿ ಇನ್ಸ್‌ಪೆಕ್ಟರ್, ಡಿವೈಎಸ್‌ಪಿ ಹುದ್ದೆಗಳು ಭರ್ತಿಯಾಗಿವೆ. ಉಳಿದ ಎಲ್ಲ ಪೊಲೀಸ್ ವಿಭಾಗದಲ್ಲೂ ಹುದ್ದೆಗೆ ತಕ್ಕಷ್ಟು ಅಧಿಕಾರಿಗಳೂ ಇದ್ದಾರೆ. ಈ ಸಂದರ್ಭದಲ್ಲಿ ಎಸಿಬಿಯಲ್ಲಿ ಇರುವ ಅಧಿಕಾರಿಗಳಿಗೆ ಹೇಗೆ ಸ್ಥಳ ನಿಯೋಜನೆ ಮಾಡಬೇಕು ಎಂಬ ಚಿಂತೆ ಪೊಲೀಸ್ ಉನ್ನತ ಅಧಿಕಾರಿಗಳಿಗೆ ಕಾಡತೊಡಗಿದೆ.
ಕೆಲವರದ್ದೇ ಸಮಸ್ಯೆ!
ಎಸ್‌ಪಿ ಹುದ್ದೆಯಲ್ಲಿ ಇರುವವರಲ್ಲಿ ಹೆಚ್ಚಾಗಿ ಐಪಿಎಸ್, ಕೆಎಸ್‌ಪಿಎಸ್ ಅಧಿಕಾರಿಗಳು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇವರಿಗೆ ಯಾವುದಾದರೂ ಹುದ್ದೆಗೆ ವರ್ಗಾವಣೆ ಮಾಡಬಹುದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ಸ್‌ಪೆಕ್ಟರ್ ಮತ್ತು ಡಿವೈಎಸ್‌ಪಿಗಳಿಗೆ ಸ್ಥಳ ನಿಯುಕ್ತಿ ಮಾಡೋದು ಸರ್ಕಾರಕ್ಕೆ ಸವಾಲಾಗಿದೆ.
ಇದನ್ನೂ ಓದಿ | ಲೋಕಾಯುಕ್ತಕ್ಕೆ ಅಧಿಕಾರ ಕೊಟ್ಟರೆ ಸಾಲದು, ಬೇಕಾದ ಸಿಬ್ಬಂದಿ ಕೊಟ್ಟರೆ ಸಲಾಂ ಮಾಡುವೆ; ನ್ಯಾ.ಸಂತೋಷ್ ಹೆಗ್ಡೆ