ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಉಚ್ಚ್ರಾಯದ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಬೆಳಗಾವಿ ಗಡಿಗೆ ಬಂದು ತಂಟೆ ಮಾಡುತ್ತಿದ್ದ ಏಕನಾಥ ಶಿಂಧೆ ಈಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುತ್ತಿದ್ದಾರೆ. ಹೀಗಾಗಿ ಗಡಿ ವಿವಾದ ಮತ್ತೆ ಭುಗಿಲೇಳುತ್ತಾ ಎಂಬ ಅನುಮಾನ ಗಡಿ ಭಾಗದ ಕನ್ನಡಿಗರನ್ನು ಕಾಡುತ್ತಿದೆ.
ಈ ಹಿಂದೆ ಅಂದರೆ ೧೯೮೫ರಲ್ಲಿ ಗಡಿಗೆ ಬಂದು ಪ್ರತಿಭಟನೆ ನಡೆಸುತ್ತಿದ್ದ ಶಿಂಧೆಯನ್ನು ರಾಜ್ಯದ ಪೊಲೀಸರು ಬಂಧಿಸಿ ಜೈಲಿನಲ್ಲಿಟ್ಟಿದ್ದರು. ಸುಮಾರು ೪೦ ದಿನಗಳ ಕಾಲ ಆಗ ಏಕನಾಥ ಶಿಂಧೆ ಬಳ್ಳಾರಿ ಜೈಲೂಟದ ರುಚಿ ಸವಿದಿದ್ದರು! ಗಡಿಯಲ್ಲಿ ಈಗಲೂ ವಿವಾದಗಳು ಕೊನೆಗೊಂಡಿಲ್ಲ. ಎಂಇಎಸ್ ಪುಂಡರು ಯಾವುದಾದರೂ ವಿಷಯ ಕೆದಕಿ ಜಗಳ ಕಾಯುತ್ತಲೇ ಇರುತ್ತಾರೆ. ಈಗ ಇಂಥ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದ ಶಿಂಧೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುತ್ತಿರುವುದರಿಂದ ಎರಡು ರಾಜ್ಯಗಳ ಸಂಬಂಧಗಳ ಮೇಲೆ ಯಾವ ರೀತಿಯ ಪರಿಣಾಮಗಳಾಗಬಹುದು ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಆಕ್ರಮಣಕಾರಿ ವ್ಯಕ್ತಿತ್ವದ ಶಿಂಧೆ ಗಡಿ ಜಿಲ್ಲೆಯಲ್ಲಿ ಹುಟ್ಟಿದವರೇನೂ ಅಲ್ಲ. ಕರ್ನಾಟಕಕ್ಕೆ ಹೊಂದಿಕೊಂಡಿರುವ ಸಾಂಗ್ಲಿ ಜಿಲ್ಲೆಯ ಪಕ್ಕದಲ್ಲಿರುವ ಸಾತಾರ ಜಿಲ್ಲೆಯ ಜವಳಿ ತಾಲೂಕಿನವರು. ಮರಾಠ ಕುಟುಂಬದಲ್ಲಿ ೧೯೬೪ರ ಫೆಬ್ರವರಿ ೯ರಂದು ಜನಿಸಿದ ಅವರು ಚಿಕ್ಕವರಿದ್ದಾಗಲೇ ಠಾಣೆ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದರು.
ದಿನಗೂಲಿ ಕೆಲಸ ಮಾಡುತ್ತಾ, ಆಟೋ ಚಾಲಕರಾಗಿ ಬದುಕುಕಟ್ಟಿಕೊಂಡಿದ್ದ ಶಿಂಧೆ, ೮೦ರ ದಶಕದಲ್ಲಿಯೇ ಶಿವಸೇನೆಯ ಹೋರಾಟದಿಂದ ಆಕರ್ಷಿತರಾಗಿ ಪಕ್ಷ ಸೇರಿದ್ದರು. ಅವರ ಆಕ್ರಮಣಕಾರಿ ನಿಲುವು, ನಾಯಕತ್ವ ಗುಣ ಶಿವಸೇನೆಯ ನಾಯಕರನ್ನೂ ಸೆಳೆದಿತ್ತು. ರಾಜಕೀಯ ಲಾಭಕ್ಕಾಗಿ ಆಗ ಶಿವಸೇನೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವನ್ನು ದೊಡ್ಡದು ಮಾಡಿದಾಗ ಇದರ ಹೋರಾಟದ ಮುಂಚೂಣಿಗೆ ಬಂದ ಏಕನಾಥ ಶಿಂಧೆ, ಗಡಿಯಲ್ಲಿ ಮತ್ತು ಕರ್ನಾಟಕದ ಒಳಗೆ ನಡೆದ ಹಲವಾರು ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು.
ಶಿವಸೇನೆಯು ಬೆಳಗಾವಿಗೆ ಸಂಬಂಧಿಸಿದಂತೆ ಕ್ಯಾತೆ ತೆಗೆದಾಗಲೆಲ್ಲ ಶಿಂಧೆ, ಬಾಳಾಸಾಹೇಬ್ ಠಾಕ್ರೆ ಅವರೊಂದಿಗೆ ನಿಲ್ಲುತ್ತಿದ್ದರು. ಗಡಿ ವಿಷಯದ ಕುರಿತು ಹಲವಾರು ಬಾರಿ ಅವರು ಹೇಳಿಕೆ ನೀಡಿದ್ದಿದೆ. ಆದರೆ ಕಳೆದ ಎರಡು ದಶಕಗಳಲ್ಲಿ ಅವರು ತಣ್ಣಗಾಗಿದ್ದರು. ಇತ್ತೀಚೆಗಂತೂ ಗಡಿವಿವಾದದ ಕುರಿತು ಪ್ರತಿಕ್ರಿಯೆ ನೀಡುವುದನ್ನೇ ನಿಲ್ಲಿಸಿದ್ದರು.
ಈಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುತ್ತಿರುವ ಏಕನಾಥ ಶಿಂಧೆ ಹಳೆಯದ್ದನ್ನು ಅಲ್ಲಿಯೇ ಬಿಟ್ಟು, ರಾಜ್ಯದೊಂದಿಗೆ ಉತ್ತಮ ಸಂಬಂಧ ಬೆಳೆಸಲು ಮುಂದಾಗಲಿದ್ದಾರೆ ಎಂಬ ಬಗ್ಗೆ ಕುತೂಹಲ ಮೂಡಿದೆ.
ಇದನ್ನೂ ಓದಿ| Maha politics | ಏಕನಾಥ್ ಶಿಂಧೆ; ಅಂದು ಆಟೋ ಡ್ರೈವರ್, ಇಂದು ಮಹಾ ಸರ್ಕಾರದ ಚಾಲಕ!