Site icon Vistara News

Border Dispute | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ, ಅಮಿತ್‌ ಶಾರನ್ನು ಭೇಟಿಯಾದ ಶಿವಸೇನೆ, ಎನ್‌ಸಿಪಿ, 14ಕ್ಕೆ ಸಿಎಂಗಳ ಸಭೆ?

Supriya Sule Meets Amit Shah

ನವದೆಹಲಿ: ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ಬಿಕ್ಕಟ್ಟು (Border Dispute) ಈಗ ಕೇಂದ್ರ ಸರ್ಕಾರದ ಅಂಗಳ ತಲುಪಿದೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಎನ್‌ಸಿಪಿ ಹಾಗೂ ಶಿವಸೇನೆ (ಉದ್ಧವ್‌ ಠಾಕ್ರೆ ಬಣ) ಸಂಸದರನ್ನು ಒಳಗೊಂಡ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ನೇತೃತ್ವದ ನಿಯೋಗವು ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದು, ಕರ್ನಾಟಕದ ವಿರುದ್ಧ ದೂರು ನೀಡಿದೆ. ಗಡಿ ಬಿಕ್ಕಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದೂ ನಿಯೋಗವು ಮನವಿ ಮಾಡಿದೆ.

ಅಮಿತ್‌ ಶಾ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭೆ ಶಿವಸೇನೆ ಸದಸ್ಯೆ ಪ್ರಿಯಾಂಕಾ ಚತುರ್ವೇದಿ, “ಗಡಿ ಬಿಕ್ಕಟ್ಟಿನ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡುತ್ತಿರುವ ಹೇಳಿಕೆಗಳು, ಕರ್ನಾಟಕದಲ್ಲಿರುವ ಮರಾಠಿಗರ ಮೇಲೆ ದಾಳಿ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದೇವೆ. ಮಹಾರಾಷ್ಟ್ರದ ಜನರ ಹಿತಾಸಕ್ತಿ ಕಾಪಾಡುವುದಾಗಿ ಅಮಿತ್‌ ಶಾ ಅವರು ಭರವಸೆ ನೀಡಿದ್ದಾರೆ” ಎಂದು ಹೇಳಿದರು.

ಡಿಸೆಂಬರ್‌ ೧೪ರಂದು ಸಿಎಂಗಳ ಸಭೆ?
ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ತೀವ್ರತರವಾಗಿ ಭುಗಿಲೆದ್ದಿರುವ ಗಡಿ ಬಿಕ್ಕಟ್ಟು ಕುರಿತು ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಡಿಸೆಂಬರ್‌ ೧೪ರಂದು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ. ಮಹಾರಾಷ್ಟ್ರದಲ್ಲಿಯೂ ಬಿಜೆಪಿಯು ಸರ್ಕಾರದ ಭಾಗವಾಗಿದೆ. ಹೀಗಿರುವಾಗ ವಿವಾದ ಭುಗಿಲೆದ್ದಿರುವುದು, ಇದನ್ನು ಉದ್ಧವ್‌ ಠಾಕ್ರೆ ಬಣದ ಶಿವಸೇನೆ ಹಾಗೂ ಎನ್‌ಸಿಪಿಯು ಇನ್ನಷ್ಟು ಕಾವೇರಿಸುತ್ತಿರುವುದು ಬಿಜೆಪಿಗೆ ಅಪಾಯಕಾರಿಯಾಗುವ ಸಾಧ್ಯತೆ ಇದೆ. ಹಾಗಾಗಿ, ಅಮಿತ್‌ ಶಾ ಅವರು ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Border Dispute | ಎಲೆಕ್ಷನ್ ಗೆಲ್ಲಲು ಮಹಾರಾಷ್ಟ್ರದ ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರಿಸಲಿದೆ ಬಿಜೆಪಿ: ಠಾಕ್ರೆ ಆರೋಪ

Exit mobile version