Site icon Vistara News

Karnataka Politics | ಉತ್ತರ ಕರ್ನಾಟಕದಲ್ಲಿ ಅಹಿಂದ ಅಸ್ತ್ರ; ಒಂದೇ ವೇದಿಕೆಯಲ್ಲಿ ಐವರು ಜಾರಕಿಹೊಳಿ ಸಹೋದರರು?

jarakiholi family Ahinda samavesha ramesh jarakiholi sathish jarakihili

ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಅಹಿಂದ ಅಸ್ತ್ರ ಪ್ರಯೋಗಕ್ಕೆ ಜಾರಕಿಹೊಳಿ ಸಹೋದರರು ಸಿದ್ಧತೆ ನಡೆಸುತ್ತಿದ್ದು, ಜಿಲ್ಲೆಯನ್ನು ತಮ್ಮ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸಲು ತೀರ್ಮಾನಿಸಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ (Karnataka Politics) ತಮ್ಮ ಪ್ರಭೆಯನ್ನು ಹೆಚ್ಚಿಸಿಕೊಳ್ಳುವುದರ ಜತೆಗೆ ವಿರೋಧಿಗಳನ್ನು ಹಣಿಯಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಮಾವೇಶ ನಡೆಸಲು ಭರದ ಸಿದ್ಧತೆಯನ್ನು ಕೈಗೊಂಡಿದ್ದು, ಜನವರಿ ತಿಂಗಳಲ್ಲಿ ಬೃಹತ್ ಸಮಾವೇಶ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ. ಆದರೆ, ಇದನ್ನು ಪಕ್ಷಾತೀತವಾಗಿ ನಡೆಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಒಂದು ಸಂದೇಶವನ್ನು ರವಾನಿಸುವ ಬಗ್ಗೆಯೂ ಪ್ಲ್ಯಾನ್‌ ಮಾಡಿದ್ದಾರೆನ್ನಲಾಗಿದೆ.

ಒಂದೇ ವೇದಿಕೆಯಲ್ಲಿ ಐದೂ ಸಹೋದರರು!
ಐವರು ಸಹೋದರರಾದ ರಮೇಶ್, ಸತೀಶ್, ಬಾಲಚಂದ್ರ, ಲಖನ್, ಭೀಮಶಿ ಜಾರಕಿಹೊಳಿ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಮೂಲಕ ಜನ ಎಂದು ಬಂದಾಗ ಪಕ್ಷ ಎಂಬುದನ್ನು ನಾವು ನೋಡುವುದಿಲ್ಲ ಎಂಬ ಸಂದೇಶವನ್ನು ಜನರಿಗೆ ನೀಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಅಹಿಂದ ಅಸ್ತ್ರದ ಮೂಲಕ ಮತ್ತೊಮ್ಮೆ ಜಿಲ್ಲೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿ ಜಾರಕಿಹೊಳಿ ಕುಟುಂಬ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಜಾತಿ ಲೆಕ್ಕಾಚಾರ
ಈ ಸಮಾವೇಶ ಮುಖಾಂತರ ಎಸ್‌ಸಿ, ವಾಲ್ಮೀಕಿ, ಉಪ್ಪಾರ, ಹಣಬರ, ಕುರುಬ, ಮುಸ್ಲಿಂ ಸಮಾಜವನ್ನು ಒಂದುಗೂಡಿಸುವ ಲೆಕ್ಕಾಚಾರವನ್ನು ಹೊಂದಲಾಗಿದೆ. ಈ ಸಮಾವೇಶವನ್ನು ನಡೆಸಲು ಮಾಜಿ ಸಚಿವ ರಮೇಶ್ ‌ಜಾರಕಿಹೊಳಿ ಅವರು ಬಿಜೆಪಿ ನಾಯಕರ ಅನುಮತಿಯನ್ನು ಕೋರಿದ್ದು, ಅನುಮತಿ ಸಿಕ್ಕರೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ ನಿರ್ಧಾರ ಮಾಡಿದ್ದಾರೆ. ಒಟ್ಟಾರೆ ಐದು ಲಕ್ಷ ಜನರನ್ನು ಸೇರಿಸಿ ರಾಜಕೀಯವಾಗಿ ಶಕ್ತಿ ಪ್ರದರ್ಶನಕ್ಕೆ ಜಾರಕಿಹೊಳಿ ಸಹೋದರರು ತೀರ್ಮಾನ ಮಾಡಿದ್ದಾರೆ ಎಂದು ಜಾರಕಿಹೊಳಿ ಕುಟುಂಬದ ಉನ್ನತ ಮೂಲಗಳಿಂದ ವಿಸ್ತಾರ ನ್ಯೂಸ್‌ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ | Sathish Jarakiholi | ಸೂಲಿಬೆಲೆ ಜತೆ ಚರ್ಚೆಗೆ ರೆಡಿ; ಮೊದಲು ಚಿನ್ನದ ರಸ್ತೆ ಎಲ್ಲಿದೆ ಹುಡುಕೋಣ: ಸತೀಶ್‌ ಜಾರಕಿಹೊಳಿ

Exit mobile version