ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲ ಅವರು ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರ ಕುರಿತು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ,
ಅಧಿಕಾರಿಗಳ ಸಭೆ ಮಾಡಿರೋದು ಖಂಡನೀಯ. ಕಾಂಗ್ರೆಸ್ ಪಕ್ಷದಿಂದ ಅಧಿಕಾರ ದುರ್ಬಳಕೆ ಆಗಿದೆ. ಇದಕ್ಕೆ ಅವಕಾಶ ಕೊಡಬಾರದು. ನಾವು ಈ ಸಂಬಂಧ ರಾಜ್ಯಪಾಲ ಪಾಲರಿಗೆ ದೂರು ಕೊಡ್ತೀವಿ. ರಾಜ್ಯಪಾಲರು ಕಾಂಗ್ರೆಸ್ ಕಿವಿ ಹಿಂಡೋ ಕೆಲಸ ಮಾಡಬೇಕು ಎಂದು ಮನವಿ ಮಾಡ್ತೀವಿ.
ಸುರ್ಜೇವಾಲ ಅವರ ಸಭೆ ಉದ್ದೇಶ ಏನು ಗೊತ್ತಿಲ್ಲ. ಸರ್ಕಾರದ ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳು ಭಾಗವಹಿಸಬಾರದು. ಇದರಲ್ಲಿ ಕಾನೂನು ಉಲ್ಲಂಘನೆ ಆಗಿದೆ. ಕಾನೂನು ಉಲ್ಲಂಘನೆ ಮಾಡುವುದೇ ಕಾಂಗ್ರೆಸ್ ಕೆಲಸ. ಈ ಬಗ್ಗೆ ಕ್ರಮ ಆಗಬೇಕು ಎಂದರು.
ಈ ಬಗ್ಗೆ ಸ್ಪಷ್ಟನೆ ನೀಡಲು ಸಿಎಂ ಸೇರಿ ಅನೇಕರು ಪ್ರಯತ್ನಿಸುತ್ತಿದ್ದಾರಾದರೂ ವಿಚಿತ್ರ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಸುರ್ಜೇವಾಲಾ ಅವರು ಇದ್ದ ಸಭೆ ಅಧಿಕೃತ ಅಲ್ಲ. ಅಧಿಕಾರಿಗಳ ಸಭೆ ಅಲ್ಲ ಅದು. ಸುರ್ಜೇವಾಲಾ ಅಧಿಕೃತ ಸಭೆ ನಡೆಸಿಲ್ಲ. ಶಾಸಕರ ಜತೆ ಚರ್ಚೆ ಮಾಡಿದಾರೆ. ಡಿಸಿಎಂ ಪಾಲ್ಗೊಂಡಿದ್ದ ಸಭೆ ಅದು. ಚುನಾವಣೆ ಬಗ್ಗೆ ಚರ್ಚೆ ಮಾಡಲು ಕರೆದ ಸಭೆ ಅದು. ಕುಮಾರಸ್ವಾಮಿ ಸುಮ್ನೆ ಆರೋಪ ಮಾಡ್ತಾರೆ. ಸುರ್ಜೇವಾಲಾ ಅವರು ಅಧಿಕಾರಿಗಳ ಸಭೆ ಕರೆಯೋಕ್ಕಾಗುತ್ತಾ? ಬಿಜೆಪಿಯವ್ರು ರಾಜ್ಯಪಾಲರಿಗೆ ದೂರು ಕೊಡಲಿ ಬೇಕಾದರೆ ಎಂದು ತಿಳಿಸಿದ್ದಾರೆ.
ಗೃಹಸಚಿವ ಡಾ. ಜಿ. ಪರಮೇಶ್ವರ್ ಈ ಕುರಿತು ಪ್ರತಿಕ್ರಿಯಿಸಿ, ಡಿಸಿಎಂ ಡಿ.ಕೆ. ಶಿವಕುಮಾರ್ ಸಭೆ ಕರೆದಿದ್ದಾರೆ. ಅದು ಅಫಿಷಿಯಲ್ ಮಿಟಿಂಗ್ ಅಲ್ಲ. ವಿಧಾನಸೌಧದಲ್ಲಿ ಸಭೆ ಮಾಡಿದಾಗ ಸುರ್ಜೆವಾಲ ಬಂದಿದ್ದರೆ ಅದು ತಪ್ಪು. ಖಾಸಗಿ ಸಭೆ ಮಾಡುವಾಗ ಬಂದಿದ್ದಾರೆ. ಹೈಕಮಾಂಡ್‌ನವರು ಮಾಡ್ತಾರೆ ಎನ್ನುವ ಅಗತ್ಯವಿಲ್ಲ. ಹೈಕಮಾಂಡ್ ಒಳ್ಳೆಯ ಕೆಲಸ ಮಾಡಲು ಸೂಚನೆ ಕೊಡುತ್ತದೆ. ಒಳ್ಳೆಯ ಸರ್ಕಾರ ನಡೆಸಬೇಕು ಎಂದು ಹೇಳುತ್ತದೆ. ಹಿಂದೆ ಮಂತ್ರಿಗಳ ರಿವ್ಯೂ ಮಾಡುತ್ತಿದ್ದರು. ಅಧಿಕಾರಿಗಳು ಮಂತ್ರಿಗಳ ಜತೆ ಮಾತಾಡುವ ಸಂದರ್ಭದಲ್ಲಿ ಇವರು ಹೋಗಿದ್ದಾರೆ. ಅವರು ಅಧಿಕಾರಗಳನ್ನು ಪ್ರಶ್ನೆ ಮಾಡಿ ಉತ್ತರ ಕೊಡಿ ಎಂದು ಕೇಳಿಲ್ಲ. ಬಿಜೆಪಿಯವರು ದೂರು ಕೊಡಲಿ ಬಿಡಿ ಎಂದಿದ್ದಾರೆ.
ಸ್ವತಃ ಸಭೆಯಲ್ಲಿ ಉಪಸ್ಥಿತರಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿದ್ದಾರೆ. ಮೊದಲು ಈ ಕುರಿತು ಪ್ರಶ್ನಿಸಿದಾಗ, ನಾನು ಇದರ ಬಗ್ಗೆ ಮಾತನಾಡುವ ಹಾಗಿಲ್ಲ ಎಂದು ಹೇಳಿ ಹೊರಟುಹೋದರು. ನಂತರ ಮತ್ತೆ ಆಗಮಿಸಿದಾಗ ಪ್ರತಿಕ್ರಿಯಿಸಿ, ನಾವು ಹೊಟೇಲ್‌ಗೆ ಹೋಗಿದ್ದು ನಿಜ. 11 ಗಂಟೆಗೆ ಡಿಸಿಎಂ ಪರಿಶೀಲನೆ ಸಭೆ ಆರಂಭವಾಗಬೇಕಿತ್ತು. ನಾವು ಅವರಿಗೆ ಬ್ರೀಫಿಂಗ್ ಮಾಡಲು ಹೋಗಿದ್ದೆವು. ನಾನು ಹಾಗು ನಗರಾಭಿವೃದ್ಧ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಇದ್ದೆವು. ಡಿಸಿಎಂ ಅವರನ್ನು ಕರೆದುಕೊಂಡು ಹೋಗಲು ಕಾಯುತ್ತಾ ಇದ್ದೆವು. ನಾವು ಹೊಟೇಲ್‌ಗೆ ಬೆಳಿಗ್ಗೆ 11.10ಕ್ಕೆ ಹೋಗಿದ್ದೆವು. 11.30ಕ್ಕೆ ನಾವು ಕೆಳಕ್ಕಿಳಿದು ಬಂದೆವು. ಬಿಜೆಪಿಯ ಆರೋಪಗಳಿಗೆ ನಾವು ಉತ್ತರ ನೀಡಲು ಆಗೋದಿಲ್ಲ ಎಂದಿದ್ದಾರೆ.
ಒಟ್ಟಿನಲ್ಲಿ ಸಭೆ ನಡೆದಿದ್ದರ ಔಚಿತ್ರ ಹಾಗೂ ಅದರ ಕಾನೂನಾತ್ಮಕ ಅಂಶಗಳ ಕುರಿತು ಉತ್ತರಗಳನ್ನು ನೀಡಲಾಗದೆ ಸರ್ಕಾರ ಹಾಗೂ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ವಿಸ್ತಾರ TOP 10 NEWS: BBMP ಸಭೆಯಲ್ಲಿ ಸುರ್ಜೆವಾಲ ಪ್ರತ್ಯಕ್ಷದಿಂದ, MRF ಷೇರು ದರ 1 ಲಕ್ಷ ರೂ.ವರೆಗಿನ ಪ್ರಮುಖ ಸುದ್ದಿಗಳಿವು