Site icon Vistara News

Karnataka Politics: ಸ್ಥಾನ ಭದ್ರಪಡಿಸಲು ದೆಹಲಿಯಲ್ಲಿ ಸಿಎಂ, ಡಿಸಿಎಂ ಪ್ರಯತ್ನ: ಎನ್.ರವಿಕುಮಾರ್ ಟೀಕೆ

Karnataka Politics

ಬೆಂಗಳೂರು: ಕರ್ನಾಟಕದಲ್ಲಿ ಅಭಿವೃದ್ಧಿ ಸಂಪೂರ್ಣವಾಗಿ ನೆಲ ಕಚ್ಚಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು (Karnataka Politics) ದೆಹಲಿಯಲ್ಲಿ ಪ್ರಯತ್ನ ನಡೆಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಕಳೆದೊಂದು ವರ್ಷದಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಬಗ್ಗೆ ಈಗ ದೆಹಲಿಯಲ್ಲಿ ವಿಪರೀತ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ, ಗ್ಯಾರಂಟಿಗಳನ್ನು ಸರಿಯಾಗಿ ತಲುಪಿಸುತ್ತಿಲ್ಲ, ಭ್ರಷ್ಟಾಚಾರ ಮೇರೆ ಮೀರಿದೆ ಎಂದು ಟೀಕಿಸಿದರು.

ಹುಚ್ಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಮಂತ್ರಿಗಳು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುತ್ತಿದ್ದಾರೆ. ಕೆಲವು ಸಚಿವರು ಡಿಸಿಎಂ ಆಗಲು ಪ್ರಯತ್ನ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ಏನಾದರೂ ಮಾಡಿ ಮುಖ್ಯಮಂತ್ರಿಯಾಗಿ ಮಾಡಲು ಅವರ ಪರ ಇರುವವರಿಂದ ಪ್ರಯತ್ನ ನಡೆದಿದೆ. ಇದೆಲ್ಲವನ್ನೂ ನೋಡಿದರೆ ಕರ್ನಾಟಕದಲ್ಲಿ ಅಭಿವೃದ್ಧಿಗೆ ಜಾಗ ಇಲ್ಲ ಎಂಬಂತಾಗಿದೆ ಎಂದು ಆಕ್ಷೇಪಿಸಿದರು.

ರೈತರು, ಕಾರ್ಮಿಕರು, ವಿದ್ಯಾರ್ಥಿಗಳ ಗೋಳು ಗಮನಿಸುವವರು ಯಾರೂ ಇಲ್ಲ. ಖಜಾನೆ ಸಂಪೂರ್ಣ ಖಾಲಿಯಾಗಿದೆ. ಖಜಾನೆ ತುಂಬಿಸಲು ರಾಜ್ಯ ಸರ್ಕಾರವು ಹಾಲಿನ ದರ ಏರಿಸಿದೆ. ಪೆಟ್ರೋಲ್- ಡೀಸೆಲ್ ದರ ಏರಿಸಿದೆ. ಮದ್ಯದ ದರ ಹೆಚ್ಚಿಸಿದೆ, ರಿಜಿಸ್ಟ್ರೇಷನ್ ಶುಲ್ಕವನ್ನೂ ಏರಿಸಿದೆ. ಹೀಗೆ ಬೆಲೆ ಏರಿಕೆಯ ಪರ್ವವನ್ನು ಸರ್ಕಾರ ಕೈಗೊಂಡಿದೆ ಎಂದು ದೂರಿದರು.

ಹಾಲು ಉತ್ಪಾದಕರ 957 ಕೋಟಿ ರೂ. ಬಾಕಿ ಹಣವನ್ನು ಸರ್ಕಾರ ಇನ್ನೂ ನೀಡಿಲ್ಲ. ರೈತರಿಗೆ 4 ಸಾವಿರ ಕೊಡಬೇಕಾದುದನ್ನು ನಿಲ್ಲಿಸಿದೆ. ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಕೂಡ ಸ್ಥಗಿತವಾಗಿದೆ. 4 ಲಕ್ಷ ಕೂಲಿ ಕಾರ್ಮಿಕರ ಮಕ್ಕಳ ಸ್ಕಾಲರ್‌ಶಿಪ್ ಕೂಡ ನೀಡಿಲ್ಲ ಎಂದು ಆರೋಪಿಸಿದರು.

ಬೇಲಿಯೇ ಎದ್ದು ಹೊಲ ಮೇಯುವ ಹಾಗೆ

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ದದ್ದಲ್ ಅವರು ಹಗರಣದ ತನಿಖೆ ತೀವ್ರಗೊಳಿಸಲು ಹೇಳಿದ್ದಾರೆ. ಇದು ಒಂದು ರೀತಿ ಬೇಲಿಯೇ ಎದ್ದು ಹೊಲ ಮೇಯುವ ಸಂದರ್ಭದಂತಿದೆ. ದದ್ದಲ್ ಅವರು ಮೊದಲು ರಾಜೀನಾಮೆ ಕೊಡಬೇಕು ಎಂದು ರವಿಕುಮಾರ್ ಅವರು ಆಗ್ರಹಿಸಿದರು.

ಹಣ ಅಕ್ರಮ ವರ್ಗಾವಣೆ ಕುರಿತು ಸಭೆ ನಡೆಸಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, 700 ಖಾತೆಗೆ ಹಣ ಹಾಕಿದ ಸಂಬಂಧ, 187 ಕೋಟಿ ಹಗಲುದರೋಡೆ ಆದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. 3ರಂದು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದರು.

ಗದಗದಲ್ಲಿ ಸರಗಳ್ಳತನ ಮಾಡುವ ಅಮ್ಜದ್ ಅಲಿ ಎಂಬ ಆರೋಪಿಯು ಸಹಚರರ ಜೊತೆ 4 ಜನ ಪೊಲೀಸರಿಗೆ ಹಲ್ಲೆ ಮಾಡಿದ್ದು, ಇದು ಕಾನೂನು- ಸುವ್ಯವಸ್ಥೆ ಕುಸಿತದ ಸ್ಪಷ್ಟ ಉದಾಹರಣೆ. ಅಮ್ಜದ್ ಅಲಿಯನ್ನು ಕಾಪಾಡುವವರು ಯಾರು? ಪೊಲೀಸರು, ಎಸ್ಪಿ ಇದರೊಳಗೆ ಶಾಮೀಲಾಗಿದ್ದಾರಾ? ಇದರ ಕುರಿತು ಗೃಹ ಸಚಿವ ಪರಮೇಶ್ವರ್ ಅವರು ತನಿಖೆ ನಡೆಸಬೇಕೆಂದು ಕೋರಿದರು.

ಜುಲೈ 4ರಂದು ರಾಜ್ಯ ಕಾರ್ಯಕಾರಿ ಸಮಿತಿ ಸಭೆ

ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯು ಜುಲೈ 4ರಂದು ಅರಮನೆ ಮೈದಾನದ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ನಡೆಯಲಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಉದ್ಘಾಟಿಸಲಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರದ ಸಚಿವರು, ಶಾಸಕರು, ಸಂಸದರು ಭಾಗವಹಿಸಲಿದ್ದಾರೆ ಎಂದರು.

ಇದನ್ನೂ ಓದಿ | CM Post: ಬಿ.ಕೆ.ಹರಿಪ್ರಸಾದ್‌ರನ್ನು ಸಿಎಂ ಮಾಡಲು ಪ್ರಣವಾನಂದ ಶ್ರೀ ಒತ್ತಾಯ; ಕೇಳೋದ್ರಲ್ಲಿ ತಪ್ಪಿಲ್ಲ ಎಂದ ಜಮೀರ್‌

ಕೇಂದ್ರದಲ್ಲಿ ಎನ್‍ಡಿಎ ಮೂರನೇ ಬಾರಿ ಅಧಿಕಾರ ಪಡೆದ ಸಾಧನೆ ಸಂಬಂಧ ಅಭಿನಂದನೆ ಸಲ್ಲಿಸಲಾಗುವುದು. ಪ್ರಧಾನಿಯವರನ್ನು ಇದೇವೇಳೆ ಅಭಿನಂದಿಸುತ್ತೇವೆ. ರಾಜ್ಯ ಸರ್ಕಾರದ ವೈಫಲ್ಯವನ್ನು, ಭ್ರಷ್ಟಾಚಾರ, ದರ ಏರಿಕೆಯನ್ನು ಖಂಡಿಸುವ ಇನ್ನೊಂದು ನಿರ್ಣಯವನ್ನೂ ಅಂಗೀಕರಿಸುತ್ತೇವೆ. ಪಕ್ಷ ಸಂಘಟನೆ ಕುರಿತು ಚರ್ಚಿಸಲಿದ್ದೇವೆ ಎಂದು ವಿವರ ನೀಡಿದರು.

Exit mobile version