ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ (Karnataka Politics) ಹಿನ್ನೆಲೆಯಲ್ಲಿ ಇತ್ತೀಚೆಗೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್, ಇದೀಗ ಕಾರ್ಯಕ್ರಮವೊಂದರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಹಾಡಿಹೊಗಳಿರುವುದು ಕಂಡುಬಂದಿದೆ. ಉಪಮುಖ್ಯಮಂತ್ರಿಗಳು ಪ್ರಾಮಾಣಿಕವಾಗಿ ಜನರಿಗೆ ಸ್ಪಂದಿಸುತ್ತಿದ್ದಾರೆ ಎಂದು ಎಸ್.ಟಿ. ಸೋಮಶೇಖರ್ ಹೇಳಿದ್ದು, ಇದಕ್ಕೆ ವೇದಿಕೆಯಲ್ಲೇ ಆರ್.ಆರ್.ನಗರ ಶಾಸಕ ಮುನಿರತ್ನ ಟಾಂಗ್ ನೀಡಿರುವುದು ಕಂಡುಬಂದಿದೆ.
ರಾಜರಾಜೇಶ್ವರಿ ನಗರದ ಕ್ಷೇತ್ರದ ಜ್ಞಾನಭಾರತಿ ಬಿ.ಪಿ.ಎಡ್ ಮೈದಾನದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಸ್.ಟಿ. ಸೋಮಶೇಖರ್, ಬೆಂಗಳೂರಿನ ಜನ ಏನು ಬಯಸಿದ್ದರೋ ಅದನ್ನು ಡಿ.ಕೆ.ಶಿವಕುಮಾರ್ ಅವರು ಪ್ರಾಮಾಣಿಕವಾಗಿ ಈಡೇರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಅವರು ನಡೆಸಿರುವ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಹೇಳಿದರು.
ಇದು ಜಿಂದಾಬಾದ್ ಕೂಗೋ ಕಾರ್ಯಕ್ರಮವಲ್ಲ ಎಂದ ಮುನಿರತ್ನ
ಬಿಜೆಪಿ ಶಾಸಕ ಮುನಿರತ್ನ ವೇದಿಕೆಯಲ್ಲಿ ಮಾತನಾಡಲು ಮೈಕ್ ಬಳಿ ಬರುತ್ತಿದ್ದಂತೆ ಕೈ ಕಾರ್ಯಕರ್ತರು ಡಿಕೆಶಿಗೆ ಜೈಕಾರ ಕೂಗಿದರು. ಈ ವೇಳೆ ಅಸಮಾಧಾನ ಹೊರಹಾಕಿದೆ ಶಾಸಕ ಮುನಿರತ್ನ, ಇದು ಜಿಂದಾಬಾದ್ ಕೂಗುವ ಕಾರ್ಯಕ್ರಮವಲ್ಲ. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಸರ್ಕಾರದ ಕಾರ್ಯಕ್ರಮ ಎಂದು ಜೈಕಾರ ಕೂಗುತ್ತಿದ್ದವರಿಗೆ ಹೇಳುವ ಮೂಲಕ ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಎಸ್.ಟಿ. ಸೋಮಶೇಖರ್‌ಗೆ ಟಾಂಗ್ ನೀಡಿದರು.
ಯಾರೂ ಶಾಶ್ವತ ಅಲ್ಲ, ನಾವು ಮಾಡುವ ಕೆಲಸ ಶಾಶ್ವತ. ಜನ ಉಪಮುಖ್ಯಮಂತ್ರಿಗಳ ಮೇಲೆ ಸಾಕಷ್ಟು ಭರವಸೆ ಇಟ್ಟಿದ್ದಾರೆ. ನಾನು ಆರ್.ಆರ್. ನಗರ ಕ್ಷೇತ್ರದ ಬಗ್ಗೆ ಮಾತನಾಡಲ್ಲ. ನನಗೆ ದೇವರು ಕೊಟ್ಟ ಶಕ್ತಿಯಲ್ಲಿ ಅಭಿವೃದ್ಧಿ ಮಾಡಿದ್ದೇನೆ. ಉಳಿದ ಅಭಿವೃದ್ಧಿ ಬಗ್ಗೆ ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಅವರು ಕೊಡುಗೆ ನೀಡುತ್ತಾರೆ ಎಂಬ ಭರವಸೆ ಇದೆ. ಕ್ಷೇತ್ರದ ಕುಂದುಕೊರತೆಗಳನ್ನು ಜನರು ಕೇಳಬೇಕು. ನಿಮ್ಮ ಜೊತೆ ನಾವು ಇದ್ದೇವೆ. ದೇವರು ಕಣ್ಣಿಗೆ ಕಾಣಲ್ಲ, ಆದರೆ ಅಧಿಕಾರಿಗಳು ಕಣ್ಣಿಗೆ ಕಾಣುವರು. .ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆ ಆಲಿಸಿದರೆ ಜನರು ನಮ್ಮ ಹತ್ತರ ಬರಲ್ಲ ಎಂದು ಹೇಳಿದರು.
ಅಧಿಕಾರಿಗಳ ವಿರುದ್ಧ ಎಸ್‌ಟಿಎಸ್ ಅಸಮಾಧಾನ
ನನ್ನ ಕ್ಷೇತ್ರದಲ್ಲಿರುವ ಐದು ಕಸದ ಘಟಕಗಳನ್ನು ಸ್ಥಳಾಂತರ ಮಾಡುವಂತೆ ಮನವಿ ಮಾಡಿದ್ದೆ. ಅದಕ್ಕೆ ಸಿಎಂ, ಡಿಸಿಎಂ ಸ್ಪಂದಿಸಿದ್ದಾರೆ. ಕಸವನ್ನು ಒಂದೇ ಕಡೆ ಡಂಪ್ ಮಾಡಲು ಬಜೆಟ್‌ನಲ್ಲಿ ಅನುದಾನ ನೀಡಿದ್ದಾರೆ. ಅದಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣ ಆಗಿದೆ. ಕನಕಪುರ ರಸ್ತೆಯಲ್ಲಿ ಓಡಾಡಲು ಆಗುತ್ತಿರಲಿಲ್ಲ. ಆದರೆ ನಮ್ಮ ಸಂಸದರು ಡಿ.ಕೆ. ಸುರೇಶ್ ರಸ್ತೆ ಮಾಡಿ ಕೊಟ್ಟಿದ್ದಾರೆ. 110 ಹಳ್ಳಿಗೆ ಕುಡಿಯುವ ನೀರು ತರುವ ಕೆಲಸ ಮಾಡಿದ್ದು, ಕೆಂಪೇಗೌಡ ಲೇಔಟ್‌ನಲ್ಲಿ ಅಭಿವೃದ್ಧಿ ಮಾಡಬೇಕಿದೆ. ರೈತರಿಗೆ ಸೈಟ್ ನೀಡುವ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ | BY Vijayendra: ʼವಿಜಯʼ ಸಾರಥ್ಯಕ್ಕೆ 100 ದಿನ; ಕಾರ್ಯಕರ್ತರ ಮನಗೆದ್ದ ವಿಜಯೇಂದ್ರಗೆ ಈಗ ಲೋಕಸಭೆಯೇ ಟಾರ್ಗೆಟ್!
ಫೆರಿಪೆರಲ್ ರಸ್ತೆ ನಿರ್ಮಾಣ ಮಾಡುವಾಗ ರೈತರಿಗೆ ಪರಿಹಾರ ನೀಡಬೇಕು. ಕೆಂಗೇರಿ ಬಳಿ ಫ್ಲೈಓವರ್ ನಿರ್ಮಾಣಕ್ಕೆ ಮನವಿ ಮಾಡಿದ್ದೇನೆ. ನೀವು ಯಶವಂತಪುರ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದೀರಿ. ಶುದ್ಧಕುಡಿಯುವ ನೀರಿನ ಘಟಕಗಳ ನಿರ್ವಹಣೆ ವಿಫಲವಾಗಿದೆ. ಟೆಂಡರ್ ಮಾಡುವಾಗ ನನ್ನನ್ನು ಕೇಳಲಿಲ್ಲ. ಸ್ಥಳೀಯ ಬಿಬಿಎಂಪಿ ಅಧಿಕಾರಿಗಳು ಅನಧಿಕೃತವಾಗಿ ಟೆಂಡರ್ ಮಾಡಿದ್ದಾರೆ. ಆಫೀಸರ್ಸ್ ಶಾಸಕರನ್ನು ಕಡೆಗಣನೆ ಮಾಡಿದ್ದಾರೆ ಎಂದು ಕಿಡಿಕಾರಿದರು.