ಚಾಮರಾಜನಗರ: “ನರೇಂದ್ರ ಮೋದಿ, ಅಮಿತ್ ಶಾ ಬಿಟ್ಟರೆ ಬಿಜೆಪಿಯಲ್ಲಿ ಪ್ರಚಾರಕ್ಕೆ ಯಾವುದೇ ಮುಖಗಳಿಲ್ಲʼʼ ಎಂಬ ಕಾಂಗ್ರೆಸ್ ಆರೋಪಕ್ಕೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ತಿರುಗೇಟು ನೀಡಿದ್ದಾರೆ. ʻʻನಮಗೆ ಮೋದಿ, ಅಮಿತ್ ಶಾ ಇದಾರೆ. ನಿಮಗ್ಯಾರು ಇದ್ದಾರೆ ? ನಿಮಗೆ ಯಾರು ಗತಿನೇ ಇಲ್ವಲ್ಲಾ?ʼʼ ಎಂದು ಗೇಲಿ ಮಾಡಿದ್ದಾರೆ.
ʻʻಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕರೆದುಕೊಂಡ ಹೋದ ಕಡೆ ನೀವು ಠೇವಣಿ ಕಳೆದುಕೊಂಡಿದ್ದೀರಿ. ನಾವು ಈಗ ನಾಲ್ಕು ತಂಡದಲ್ಲಿ 50 ಜನ ರಾಜ್ಯದ ನಾಯಕರು ಯಾತ್ರೆ ಹೊರಟಿದ್ದೇವೆ. ನೀವು ಎಷ್ಟು ಜನ ಹೊರಟ್ಟಿದ್ದೀರಾ?
ಕಾಂಗ್ರೆಸ್‌ನಲ್ಲಿ ವೆಂಕ, ನಾಣಿ, ಸೀನ ಅದರಲ್ಲಿ ಸೀನ ಇಲ್ಲ. ಅದರಲ್ಲೂ ವೆಂಕ, ನಾಣಿ ಇಬ್ಬರೇ ಇರೋದು. ಅದು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಾತ್ರ” ಎಂದು ಹೇಳಿದ್ದಾರೆ ಈಶ್ವರಪ್ಪ.
ʻʻನೀವು ಬಿಜೆಪಿ ಮೇಲೆ ಭ್ರಷ್ಟಾಚಾರದ ಆರೋಪ ಮಾಡ್ತಿದ್ದೀರಲ್ಲಾ.. ಭ್ರಷ್ಟಾಚಾರ ಮಾಡಿ ತಿಹಾರ್ ಜೈಲಿಗೆ ಹೋಗಿದ್ಯಾರು? ನಿಮ್ಮ ಹತ್ತಿರ ಎಷ್ಟು ಕೋಟಿ ರೂ. ಅಕ್ರಮ ಹಣ ಇತ್ತು ಅಂತ ಎಲ್ಲರಿಗೂ ಗೊತ್ತಾಗಿದೆ. ಬಂಡಲ್‌ಗಟ್ಟಲೇ ಹಣ, ಬಾಕ್ಸ್‌ಗಟ್ಟಲೇ ಅಕ್ರಮ ದಾಖಲಾತಿಗಳು ನಿಮ್ಮ ಬಳಿ ಇರೋದನ್ನು ಜನ ನೋಡಿದ್ದಾರೆ. ನೀವು ಬೇಲ್ ಮೇಲೆ ಇದೀರಿ. ನೀವು ಭ್ರಷ್ಟಾಚಾರದ ಬಗ್ಗೆ ಮಾತನಾಡ್ತೀರಿʼʼ ಎಂದು ಡಿ.ಕೆ. ಶಿವಕುಮಾರ್ ಅವರನ್ನು ಈಶ್ವರಪ್ಪ ತರಾಟೆಗೆ ತೆಗೆದುಕೊಂಡರು.
ʻʻಸಿದ್ದರಾಮಯ್ಯ ಅವರು ಅರ್ಕಾವತಿ ಡಿ-ನೋಟಿಫೀಕೇಶನ್ ವಿಚಾರದಲ್ಲಿ 8000 ಕೋಟಿ ರೂ. ಭ್ರಷ್ಟಾಚಾರ ನಡೆಸಿದ್ದಾರೆ. ಅಕ್ರಮ ಡಿನೋಟಿಫಿಕೇಶನ್ ಬಗ್ಗೆ ಕೆಂಪಣ್ಣ ಆಯೋಗವೇ ವರದಿ ನೀಡಿದೆ.
ಸಿದ್ದರಾಮಯ್ಯ ಮತ್ತು ಡಿಕೆಶಿ ಜೈಲು ಬೇಲ್ ಮೇಲಿರುವವರು. ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ” ಎಂದು ಆಕ್ರೋಶ ಹೊರಗೆಡಹಿದರು.
ʻʻಸಿದ್ದರಾಮಯ್ಯ ನಾನು ಕುರುಬರ ನಾಯಕ ಎಂದು ಹೇಳುತ್ತಾರೆ. ಡಿ.ಕೆ.ಶಿವಕುಮಾರ್ ಒಕ್ಕಲಿಗರ ನಾಯಕ ಎಂದು ಹೇಳ್ತಿದ್ದಾರೆ. ಇವರು ಯಾವ ಸೀಮೆಯ ಜಾತ್ಯತೀತವಾದಿಗಳು?ʼʼ ಎಂದು ಮಲೆಮಹದೇಶ್ವರ ಬೆಟ್ಟದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : Karnataka Politics : ಈಶ್ವರಪ್ಪರನ್ನು ಮಹಿಷಾಸುರನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ