ಸಿರುಗುಪ್ಪ (ಬಳ್ಳಾರಿ): ಮೇ 8ರಂದು ಮಧ್ಯಾಹ್ನದ ಬಳಿಕ ಆರಂಭವಾದ ಬಿರುಗಾಳಿ, ಗುಡುಗು ಸಿಡಿಲು ಸಹಿತ ಮಳೆ ರಾಜ್ಯದ ನಾನಾ ಭಾಗಗಳಲ್ಲಿ ಅನಾಹುತ ಸೃಷ್ಟಿಸಿದೆ. ಬಳ್ಳಾರಿಯಲ್ಲಿ ಸಿಡಿಲಿಗೆ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ಹಲವಾರು ಕಡೆ ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ.
ಸಿರುಗುಪ್ಪ ತಾಲೂಕಿನ ಹೊನ್ನರಹಳ್ಳಿ ಹಾಗೂ ಶ್ರೀಧರಗಡ್ಡೆ ಗ್ರಾಮದ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಭಾರಿ ಸಿಡಿಲು, ಗುಡುಗು ಸಹಿತ ಮಳೆಯಾಗಿದೆ. ಈ ವೇಳೆ, ಸಿಡಿಲಿನ ಹೊಡೆತಕ್ಕೆ ಒಬ್ಬ ಕೃಷಿ ಕಾರ್ಮಿಕ ಮಹಿಳೆ ಮೃತಪಟ್ಟಿದ್ದು, ಮತ್ತೊಬ್ಬ ಮಹಿಳೆಗೆ ಗಾಯವಾಗಿದೆ. ಮತ್ತೊಂದು ಘಟನೆಯಲ್ಲಿ ಕುರಿಗಾಹಿಯೊಬ್ಬರಿಗೆ ಗಾಯವಾಗಿರುವ ಘಟನೆ ನಡೆದಿದೆ.
ತಾಲೂಕಿನ ಹೊನ್ನರಹಳ್ಳಿ ಗ್ರಾಮದ ಭತ್ತದ ಜಮೀನಿನಲ್ಲಿ ಕೆಲಸಕ್ಕೆ ಹೋದಾಗ ಕುಡುದರಹಾಳ ಗ್ರಾಮದ ಮಂಗಮ್ಮ (40ವರ್ಷ) ಎನ್ನುವ ಮಹಿಳೆಗೆ ಸಿಡಿಲು ಬಡಿದು ತೀವ್ರ ಅಸ್ವಸ್ಥಗೊಂಡ ಮಹಿಳೆಯನ್ನು ಅಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಮೃತಪಟ್ಟಿದ್ದಾಳೆ. ಇದೇವೇಳೆ ಮೃತ ಮಹಿಳೆಯ ಜತೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹನುಮಂತಮ್ಮ(30)ಗೆ ಗಾಯವಾಗಿದ್ದು ಅದೃಷ್ಠವಾಶತ್ ಸಾವಿನಿಂದ ಪಾರಾಗಿದ್ದಾಳೆ.
ಮತ್ತೊಂದು ಘಟನೆಯಲ್ಲಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಬೆಳಗಾವಿ ಕುರಿಗಾಯಿ ಸಿದ್ದು ಕಿಲ್ಲಾರಿ (58ವರ್ಷ) ಎಡಗೈಗೆ ಸಿಡಿಲು ಬಡಿದು ಅಂಗಿ ಸುಟ್ಟು, ಚರ್ಮದ ಮೇಲೆ ಬೊಬ್ಬೆಯಾಗಿದ್ದು ಗಾಯಗೊಂಡ ಇಬ್ಬರಿಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಜೇಂದ್ರಗಡದಲ್ಲಿ ಬಸ್ ಮೇಲೆ ಉರುಳಿದ ಮರ
ಗದಗ ಜಿಲ್ಲೆಯ ಗಜೇಂದ್ರಗಡದ ಕಾಲಕಾಲೇಶ್ವರ ಬಳಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯ ನಡುವೆ ದೊಡ್ಡ ಆಲದ ಮರವೊಂದು ಚಲಿಸುತ್ತಿದ್ದ ಬಸ್ ಮೇಲೆ ಬಿದ್ದು, ಸುಮಾರು 10 ಮಂದಿಗೆ ಗಾಯಗಳಾಗಿವೆ. ಇವರಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಸಣ್ಣ ಪುಟ್ಟ ಗಾಯಾಳುಗಳನ್ನು ಗಜೇಂದ್ರಗಡ ತಾಲೂಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗಜೇಂದ್ರಗಡ ದಿಂದ ಕಾಲಕಾಲೇಶ್ವರ ಮಾರ್ಗವಾಗಿ ಅಮೀನಗಡಕ್ಕೆ ಹೊರಟಿದ್ದ ಬಸ್ ಇದಾಗಿದ್ದು, ಬಸ್‌ನಲ್ಲಿ ಸುಮಾರು 25 ಜನ ಪ್ರಯಾಣ ಮಾಡುತ್ತಿದ್ದರು. ಬಸ್ ಸಂಪೂರ್ಣ ಜಖಂ ಆಗಿದೆ.
ಹೊನ್ನಾಳಿಯಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಅಬ್ಬರ
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಿಂಚು ಗುಡುಗು ಸಿಡಿಲು ಸಹಿತ ಭಾರಿ ಅಬ್ಬರದಿಂದ ಮಳೆ ಸುರಿದಿದೆ. ಸಂಜೆ ಏಳು ಗಂಟೆಗೆ ಸರಿಯಾಗಿ ಮಿಂಚು ಗುಡುಗಿನಿಂದ ಕೂಡಿದ ಭಾರಿ ಮಳೆಯಾಗಿದೆ. ಸಾರ್ವಜನಿಕರಿಗೂ ಹಾಗೂ ಸಂಚಾರಕ್ಕೆ ಭಾರಿ ಅಡಚಣೆಯಾಗಿದೆ.
ತೆಂಗಿನ ಮರಕ್ಕೆ ಬಡಿದ ಸಿಡಿಲು
ನ್ಯಾಮತಿಯಲ್ಲಿ ಸೋಮವಾರ ಸಂಜೆ ಸಿಡಿಲಿನ ಆರ್ಭಟಕ್ಕೆ ಗ್ರಾಮ ಪಂಚಾಯಿತಿ ಕಚೇರಿಯ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡಿದೆ.. ಸ್ಥಳಕ್ಕೆ ಹೊನ್ನಾಳಿಯ ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದರು.
ರಾಜ್ಯಾದ್ಯಂತ ಇನ್ನು ಐದು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕೆಲವು ಜಿಲ್ಲೆಗಳಲ್ಲಿ ಚುನಾವಣಾ ದಿನವಾದ ಮೇ 10ರಂದು ಕೂಡಾ ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : Weather Report: ಮೋಚಾ ಎಫೆಕ್ಟ್‌ಗೆ ಈ 5 ಜಿಲ್ಲೆಗಳಲ್ಲಿ ಇನ್ನೊಂದು ವಾರ ಭರ್ಜರಿ ಮಳೆ; ಮತದಾನ ದಿನವೂ ಮಳೆಯಾಗುವುದೆ?