ಚಿಕ್ಕಮಗಳೂರು: ಜಿಲ್ಲೆಯಲ್ಲಿ ಭದ್ರಾ ನದಿ ಅಬ್ಬರಕ್ಕೆ ಜನ ಕಂಗಾಲಾಗಿದ್ದಾರೆ. ಸತತ ಮಳೆಯಿಂದ (Karnataka Rain) ಭದ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣ ಮುಳುಗಡೆಯಾಗಿದೆ. ದೋಬಿ ಹಳ್ಳ ಪ್ರವಾಹಕ್ಕೆ ಬಾಳೆಹೊನ್ನೂರಿನ ನದಿ ತಟದ ಸಂತೆ ಮಾರುಕಟ್ಟೆ, ಮನೆಗಳು, ಅಂಗಡಿ ಮಳಿಗೆಗಳು, ಕಾಫಿ, ಅಡಿಕೆ ತೋಟಗಳು ಮುಳುಗಡೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
3-4 ದಿನಗಳಿಂದ ಪ್ರವಾಹಕ್ಕೆ ಬಾಳೆಹೊನ್ನೂರು ಜನರು ನಲುಗಿದ್ದು, ತೋಟಗಳು ಮುಳುಗಡೆಯಾಗಿದ್ದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಭಾರಿ ಪ್ರಮಾಣ ನೀರಿನಿಂದ ಕಾಫಿ, ಅಡಕೆಗೆ ಕೊಳೆ ರೋಗ ಆವರಿಸುವ ಭೀತಿ ಎದುರಾಗಿದೆ. ಮತ್ತಷ್ಟು ಮಳೆ ಹೆಚ್ಚಾದರೆ ಪಟ್ಟಣದ ಹಲವು ಬಡಾವಣೆಗಳು ಜಲಾವೃತವಾಗುವ ಆತಂಕ ಎದುರಾಗಿದೆ. ಮಳೆ ಹೆಚ್ಚಾದಂತೆ ಕ್ಷಣ ಕ್ಷಣಕ್ಕೂ ಭದ್ರಾ ನೀರಿನ ಅರಿವು ಹೆಚ್ಚಾಗುತ್ತಿದೆ.
ಇದನ್ನೂ ಓದಿ | Wayanad Landslide: ವಯನಾಡು ಭೂಕುಸಿತ; ಮೃತ ಕನ್ನಡಿಗರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಮಳೆ ಅಬ್ಬರಕ್ಕೆ ರಸ್ತೆ ಬದಿ ಗುಡ್ಡ ಕುಸಿತ
ಶೃಂಗೇರಿ ತಾಲೂಕಿನ ನೆಮ್ಮಾರು ಸಮೀಪದಲ್ಲಿ ಮಳೆ ಅಬ್ಬರಕ್ಕೆ ರಸ್ತೆ ಬದಿ ಗುಡ್ಡ ಕುಸಿದಿದ್ದು, ರಸ್ತೆ ಸಂಪರ್ಕ ಸ್ಥಗಿತವಾಗೋ ಸಾಧ್ಯತೆ ಇದೆ. ಸುಮಾರು 60 ಅಡಿಯಷ್ಟು ಗುಡ್ಡದ ಮಣ್ಣು ಕುಸಿದು ಬಿದ್ದಿದ್ದು, ರಸ್ತೆ ಸಂಪರ್ಕ ಬಂದ್ ಆದಲ್ಲಿ 500ಕ್ಕೂ ಹೆಚ್ಚು ಕುಟುಂಬಗಳ ಸ್ಥಿತಿ ಅತಂತ್ರವಾಗಲಿದೆ.
ಜಲಸ್ಫೋಟದಿಂದ ರಸ್ತೆಗೆ ಬಂದು ಕೂತ ಗುಡ್ಡ
ಕಳಸದಲ್ಲಿ ಭೂಮಿಯೊಳಗೆ ಜಲಸ್ಫೋಟದಿಂದ ಗುಡ್ಡ ಜರುಗಿ ರಸ್ತೆಗೆ ಬಂದಿರುವ ಘಟನೆ ನಡೆದಿದೆ. ಇದರಿಂದ ಕಳಸ-ಬಲಿಗೆ-ಹೊರನಾಡು ಸಂಪರ್ಕ ಕಡಿತವಾಗಿದೆ.
ಭಾರಿ ಮಳೆಗೆ ಮುಳುಗಿದ ಸೇತುವೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಶಿರಸಿ ತಾಲೂಕಿನ ದೊಡ್ನಳ್ಳಿ ಭಾಗದಲ್ಲಿ ಮಳೆಗೆ ಸೇತುವೆ ಮುಳುಗಿದ್ದು, ಚಿಪಗಿ-ದೊಡ್ನಳ್ಳಿ ಸಂಪರ್ಕ ಕಡಿತಗೊಂಡಿದೆ. ಇದರಿಂದ ದೊಡ್ನಳ್ಳಿ ಭಾಗದಿಂದ ಓಡಾಡುವ ಗ್ರಾಮಸ್ಥರಿಗೆ ತೊಂದರೆಯಾಗಿದೆ.
ಸೇತುವೆ ಬಳಿ ಸಂಗ್ರಹಗೊಂಡಿದ್ದ ಮರದ ತುಂಡುಗಳನ್ನು ಸ್ಥಳೀಯರು ತೆರವುಗೊಳಿಸಿದ್ದಾರೆ. ಮಳೆಯಿಂದಾಗಿ ದೊಡ್ನಳ್ಳಿ ಪಂಚಾಯತ್ ವ್ಯಾಪ್ತಿಯ ಕೆಳಗಿನ ಎಸಳೆ ಗ್ರಾಮದಲ್ಲಿ ಜಮೀನು ಜಲಾವೃತವಾಗಿದ್ದು, 50 ಎಕರೆಗೂ ಅಧಿಕ ನಾಟಿ ಮಾಡಿದ ಗದ್ದೆ, ಕಬ್ಬಿನ ತೋಟಕ್ಕೆ ನೀರು ನುಗ್ಗಿದೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ, ಭದ್ರಾ ನದಿಗಳು
ಶಿವಮೊಗ್ಗ: ಮಲೆನಾಡಲ್ಲಿ ಮಳೆಯ ಅಬ್ಬರ ಮುಂದುವರಿದ ಹಿನ್ನೆಲೆಯಲ್ಲಿ ತುಂಗಾ, ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ತುಂಗಾ, ಭದ್ರಾ ಸಂಗಮ ಕ್ಷೇತ್ರದವಾದ ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಕೂಡಲಿ ದೇವಸ್ಥಾನದ ಬಳಿ ಸ್ನಾನಘಟ್ಟ ಮುಳುಗಡೆಯಾಗಿದೆ.
ಭದ್ರಾವತಿ ಬಳಿ 30 ಮನೆಗಳು ಸಂಪೂರ್ಣ ಜಲಾವೃತ
ಭದ್ರಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆ ಭದ್ರಾವತಿ ತಾಲೂಕಿನ ಕವಲುಗುಂದಿ ಗ್ರಾಮದಲ್ಲಿ 30 ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಭದ್ರಾವತಿ ನಗರದ ಕಾಳಜಿ ಕೇಂದ್ರಕ್ಕೆ 30 ಕುಟುಂಬಗಳನ್ನು ಶಿಫ್ಟ್ ಮಾಡಲಾಗಿದೆ. ತಡಸ ಧಡಮ್ಘಟ್ಟ ರಸ್ತೆ ಸಂಪರ್ಕ ಬಂದ್ ಅಗಿದ್ದು, ಹತ್ತಾರು ಹಳ್ಳಿಗಳ ಸಂಪರ್ಕ ಸ್ಥಗಿತಗೊಂಡಿದೆ.
ಉಕ್ಕಿ ಹರಿಯುತ್ತಿರುವ ತುಂಗಭದ್ರಾ ನದಿ
ದಾವಣಗೆರೆ: ಮಲೆನಾಡಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ತುಂಗಾ ಹಾಗೂ ಭದ್ರ ಎರಡು ಜಲಾಶಯಗಳಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಹಳ್ಳಿಗಳ ರಸ್ತೆ ಸಂಪರ್ಕ ಕಡಿತವಾಗಿದೆ.
ಪುಣ್ಯಕ್ಷೇತ್ರ ಉಕ್ಕಡಗಾತ್ರಿ ತುಮ್ಮಿನಕಟ್ಟೆ, ಪತೇಪುರ್ ರಸ್ತೆ ಸಂಪರ್ಕ ಕಡಿತವಾಗಿದ್ದು, ತುಂಗಾಭದ್ರ ನದಿ ಪ್ರವಾಹದಿಂದ ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ. ಸೇತುವೆ ಮುಳುಗಡೆಯಿಂದ ಸುಮಾರು 10 ಕಿ.ಮೀ ಸುತ್ತಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಸೇತುವೆ ಮುಳುಗಡೆಯಿಂದ ಶ್ರೀ ಕ್ಷೇತ್ರ ಉಕ್ಕಡಗಾತ್ರಿ ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ನದಿ ಪ್ರವಾಹದಿಂದ ತರಕಾರಿ ಬೆಳೆ, ಭತ್ತದ ಗದ್ದೆ, ಅಡಿಕೆ ತೆಂಗಿನ ತೋಟಗಳು ಜಲಾವೃತವಾಗಿವೆ. ಇದರಿಂದ ರೈತರು ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದಾರೆ.
ಇದನ್ನೂ ಓದಿ | Wayanad Landslide: ಭೂಕುಸಿತದ ಬಗ್ಗೆ ಒಂದು ವಾರ ಮೊದಲೇ ನೀಡಲಾಗಿತ್ತಾ ಎಚ್ಚರಿಕೆ? ಕೇಂದ್ರದ ಸೂಚನೆ ನಿರ್ಲಕ್ಷಿಸಿತ್ತಾ ಕೇರಳ ಸರ್ಕಾರ?
ಕೊಪ್ಪಳದಲ್ಲಿ ಪ್ರವಾಹ ಭೀತಿ
ಕೊಪ್ಪಳ: ನೀರಿನ ಪ್ರಮಾಣ ಮತ್ತೆ ಏರಿಕೆಯಾದ ಹಿನ್ನೆಲೆ ತುಂಗಭದ್ರಾ ಜಲಾಶಯದಿಂದ ನದಿಗೆ 1.39 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ಮತ್ತೆ ಚಿಕ್ಕಜಂತಕಲ್ ಸೇತುವೆ ಮುಳುಗಿದ್ದು, ವಿರುಪಾಪುರಗಡ್ಡೆ, ನವವೃಂದಾವನ ಗಡ್ಡೆಗೆ ಸಂಪರ್ಕ ಕಡಿತಗೊಂಡಿದೆ.
ಆನೆಗೊಂದಿಯ ಬಳಿಯ ಶ್ರೀಕೃಷ್ಣದೇವರಾಯ ಸಮಾಧಿ, ಬೆನ್ನೂರು ಹೊಳೆಬಸವೇಶ್ವರ ದೇವಸ್ಥಾನ ಜಲಾವೃತವಾಗಿದ್ದು, ನೀರಿನ ಪ್ರಮಾಣ ಹೆಚ್ಚಾದರೆ ಕೃಷಿ ಭೂಮಿಗೆ ನೀರು ನುಗ್ಗುವ ಸಾಧ್ಯತೆ ಇದೆ.