ಬೆಂಗಳೂರು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ (Karnataka Rain) ಜನಜೀವನ ಅಸ್ತವ್ಯಸ್ತಗೊಂಡಿದ್ದು ಮಾತ್ರವಲ್ಲದೆ, ರೈತರಿಗೂ ಸಂಕಷ್ಟವನ್ನು ತಂದೊಡ್ಡಿದೆ. ಕಲಬುರಗಿ ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಆಗಿದೆ. ಇತ್ತ ಯಾದಗಿರಿ ಜಿಲ್ಲೆಯಲ್ಲೂ ವರುಣನ ಅಬ್ಬರ ಜೋರಾಗಿತ್ತು. ತಡರಾತ್ರಿಯಿಂದ ಸುರಿದ ಭಾರಿ ಮಳೆಗೆ ರಸ್ತೆಗಳು ಜಲಾವೃತಗೊಂಡಿತ್ತು.
ಯಾದಗಿರಿಯ ರೈಲ್ವೆ ನಿಲ್ದಾಣ ರಸ್ತೆ ಜಲಾವೃತಗೊಂಡು ವಾಹನ ಸವಾರರು ಪರದಾಡಬೇಕಾಯಿತು. ಗೋಡಿಹಾಳ ಗ್ರಾಮದಲ್ಲಿ ಮರಗಳು ಧರೆಗುರುಳಿದ್ದವು. ಭೀಮರಾಯ ಅವರಿಗೆ ಸೇರಿದ ದನದ ಕೊಟ್ಟಿಗೆಯೊಂದು ಕುಸಿದಿದೆ. ಇನ್ನು ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ಬೆಳೆಗೆ ಹಾನಿಯಾಗಿದೆ. ಲಕ್ಷಾಂತರ ಬೆಲೆ ಬಾಳುವ ಮೆಣಸಿನಕಾಯಿ, ಭತ್ತದ ತೆನೆಗಳು ಆಲಿಕಲ್ಲು ಮಳೆಗೆ ನೆಲಕಚ್ಚಿವೆ.
ಜಮೀನಿನಲ್ಲಿ ಒಣಗಿ ಹಾಕಿದ್ದ ಮೆಣಸಿನಕಾಯಿ ನೀರುಪಾಲಾಗಿ, 10 ಲಕ್ಷ ರೂಪಾಯಿ ಬೆಲೆ ಬಾಳುವ 100 ಕ್ವಿಂಟಾಲ್ ಮೆಣಸಿನಕಾಯಿಗೆ ಹಾನಿ ಆಗಿದೆ. ಸರ್ಕಾರ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದರು. ಬೃಹತ್ ಗಾತ್ರದ ಆಲಿಕಲ್ಲು ಬಿದ್ದ ಕಾರಣದಿಂದಾಗಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹಳಿಸಗರ ಗ್ರಾಮದಲ್ಲಿ ಅಪಾರ ಪ್ರಮಾಣದ ಪಪ್ಪಾಯಿ ಬೆಳೆಗೆ ಹಾನಿ ಆಗಿದೆ. ಹೀಗಾಗಿ ಬೆಳೆ ಹಾನಿ ಸ್ಥಳಕ್ಕೆ ಶಹಾಪುರ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ, ಜಿಲ್ಲಾಧಿಕಾರಿ ಸ್ನೇಹಲ್ ಆರ್. ಭೇಟಿ ನೀಡಿದರು. ಇದೇ ವೇಳೆ ರೈತರ ಸಮಸ್ಯೆ ಆಲಿಸಿ ಪರಿಹಾರ ಒದಗಿಸುವ ಭರವಸೆ ನೀಡಿದರು.
ಇದನ್ನೂ ಓದಿ: Bike Wheeling: ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಕಿರಿಕ್; ಬೇಡ ಎಂದಿದ್ದಕ್ಕೆ ಲಾಂಗು, ಮಚ್ಚು ತೆಗೆದುಕೊಂಡು ಹೋದವ ಮೃತ್ಯು
ಕೋಲಾರದಲ್ಲಿ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಮಾವು ಹಾಗೂ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿವೆ. ಶುಕ್ರವಾರ ಹಲವೆಡೆ ಆಲಿಕಲ್ಲು ಮಳೆಯಾಗಿ ಪಪ್ಪಾಯಿ, ಟೊಮೆಟೊ, ಮಾವು ಸೇರಿದಂತೆ ಇತರೆ ಬೆಳೆಗಳು ಹಾಳಾಗೊಳಪಟ್ಟಿವೆ. ಬ್ಯಾಲಹಳ್ಳಿ ಗ್ರಾಮದ ಪ್ರಕಾಶ್ ಎಂಬುವವರಿಗೆ ಸೇರಿದ 21 ಎಕರೆ ಪಪ್ಪಾಯಿ ತೋಟವು ನೆಲಕಚ್ಚಿದೆ. ಪಪ್ಪಾಯಿ ತೋಟ ನಾಶವಾಗಿ ಒಂದೂವರೆ ಕೋಟಿ ನಷ್ಟವಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ