ಕರ್ನಾಟಕ
Bike Wheeling: ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಕಿರಿಕ್; ಬೇಡ ಎಂದಿದ್ದಕ್ಕೆ ಲಾಂಗು, ಮಚ್ಚು ತೆಗೆದುಕೊಂಡು ಹೋದವ ಮೃತ್ಯು
Murder case: ಹಾಸನ ಹೊರವಲಯದಲ್ಲಿರುವ ಗವೇನಹಳ್ಳಿ ಬಳಿ ಯುವಕನೊಬ್ಬ ವ್ಹೀಲಿಂಗ್ ಮಾಡಲು ಮುಂದಾಗಿದ್ದಾನೆ. ಇದನ್ನು ಕಂಡ ಸ್ಥಳೀಯ ಯುವಕರು ವ್ಹೀಲಿಂಗ್ (Bike Wheeling) ಮಾಡದಂತೆ ತಾಕೀತು ಮಾಡಿದ್ದಾರೆ. ಈ ಜಗಳವು ತಾರಕಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಹಾಸನ: ವ್ಹೀಲಿಂಗ್ (Bike Wheeling) ವಿಚಾರಕ್ಕೆ ಯುವಕರ ಗುಂಪುಗಳ ನಡುವೆ ಶುರುವಾದ ಜಗಳ ಕೊಲೆಯಲ್ಲಿ (Murder Case) ಅಂತ್ಯವಾದ ಘಟನೆ ನಗರದ ಹೊರವಲಯದಲ್ಲಿರುವ ಗವೇನಹಳ್ಳಿ ಬಳಿ ನಡೆದಿದೆ.
ಆಟೋ ಚಾಲಕ ಸುಮಂತ್ (20) ಕೊಲೆಯಾದ ಯುವಕ. ಈತ ನಗರದ 80 ಫೀಟ್ ರಸ್ತೆಯ ನಿವಾಸಿ ಎಂದು ತಿಳಿದುಬಂದಿದೆ. ಸುಮಂತ್ ಗವೇನಹಳ್ಳಿ ಬಳಿ ತನ್ನ ಬೈಕ್‌ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ. ಆದರೆ, ಕಾನೂನು ಪ್ರಕಾರ ಇದು ಅಪರಾಧವಾಗಿರುವುದರಿಂದ ವೀಲಿಂಗ್ ಮಾಡದಂತೆ ಗ್ರಾಮದ ಯುವಕರು ತಡೆದಿದ್ದಾರೆ.
ಗ್ರಾಮದ ಪ್ರದೇಶದಲ್ಲಿ ವ್ಹೀಲಿಂಗ್ ಮಾಡಬಾರದು ಎಂದು ಯುವಕರು ತಡೆಯುತ್ತಿದ್ದಂತೆ ಸುಮಂತ್ ಆಕ್ರೋಶಗೊಂಡಿದ್ದಾನೆ. ಇದೇ ವಿಚಾರಕ್ಕಾಗಿ ಸುಮಂತ್ ಹಾಗೂ ಗವೇನಹಳ್ಳಿ ಗ್ರಾಮದ ಯುವಕರ ನಡುವೆ ಜಗಳ ಶುರುವಾಗಿದೆ. ಈ ವೇಳೆ ಸ್ಥಳೀಯರು ಮಧ್ಯ ಪ್ರವೇಶ ಮಾಡಿ ಸಮಾಧಾನಪಡಿಸಿ ಎಲ್ಲರನ್ನೂ ವಾಪಸ್ ಕಳುಹಿಸಿದರು.
ಆದರೆ, ಸುಮಂತ್ ಆಕ್ರೋಶ ಮಾತ್ರ ಕಡಿಮೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವನು ಅಲ್ಲಿಂದ ವಾಪಸ್ ತೆರಳಿದವನು ಸೀದಾ ತನ್ನ ಸ್ನೇಹಿತರ ಬಳಿ ಹೋಗಿದ್ದಾನೆ. ಅವರ ಗುಂಪನ್ನು ಕಟ್ಟಿಕೊಂಡು ಲಾಂಗ್, ಚಾಕು ಜತೆ ಮತ್ತೆ ಗ್ರಾಮಕ್ಕೆ ಬಂದಿದ್ದಾನೆ. ಅಲ್ಲಿ ತನಗೆ ವಿರೋಧ ವ್ಯಕ್ತಪಡಿಸಿದ ಯುವಕರನ್ನು ಹುಡುಕಿದ್ದಾನೆ.
ಆ ಯುವಕರು ಕಾಣುತ್ತಿದ್ದಂತೆ ಗುಂಪಿನೊಂದಿಗೆ ಮಾರಕಾಸ್ತ್ರಗಳಿಂದ ಸುಮಂತ್ ದಾಳಿ ಮಾಡಲು ಮುಂದಾಗಿದ್ದಾನೆ. ಈ ವೇಳೆ ಗವೇನಹಳ್ಳಿ ಗ್ರಾಮದ ಪ್ರಜ್ವಲ್ ಮತ್ತು ಇತರ ಯುವಕರ ಗುಂಪು ತಪ್ಪಿಸಿಕೊಂಡಿದೆ. ಮಾತ್ರವಲ್ಲದೆ, ಪ್ರತಿ ದಾಳಿ ನಡೆಸಿ ಸುಮಂತ್ ಗ್ಯಾಂಗ್ ಜತೆ ಇದ್ದ ಚಾಕು, ಲಾಂಗ್‌ಗಳನ್ನು ಕಿತ್ತುಕೊಂಡಿದ್ದಾರೆ. ಈ ವೇಳೆ ಗಲಾಟೆಯು ವಿಪರೀತಕ್ಕೆ ತಿರುಗಿ ಸುಮಂತ್ ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿದೆ.
ಇದನ್ನೂ ಓದಿ: Karnataka Election 2023: ಅಥಣಿ ಟಿಕೆಟ್ ನಿರ್ಧರಿಸೋದು ನಾನೂ ಅಲ್ಲ, ಕುಮಟಳ್ಳಿಯೂ ಅಲ್ಲ: ಲಕ್ಷ್ಮಣ ಸವದಿ
ಇದರಿಂದ ಸುಮಂತ್‌ಗೆ ತೀವ್ರ ರಕ್ತಸ್ರಾವವಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ತಕ್ಷಣವೇ ಗಾಯಾಳು ಸುಮಂತ್‌ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸುಮಂತ್ ಮೃತಪಟ್ಟಿದ್ದಾನೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ
JDS Karnataka: ಬಿಜೆಪಿಯಿಂದ ಜೆಡಿಎಸ್‌ಗೆ ಮರಳಿದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ
ಖೂಬಾ ಅವರು ಜೆಡಿಎಸ್ ಪಕ್ಷದಲ್ಲಿಯೇ ಇದ್ದವರು. ಕಾರಣಾಂತರಗಳಿಂದ ಅವರು ಪಕ್ಷ ಬಿಟ್ಟಿದ್ದರು. ಈಗ ಮರಳಿ ತಮ್ಮ ಮನೆಗೆ ವಾಪಸ್ ಆಗಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು: ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಸಮಕ್ಷಮದಲ್ಲಿ ಮರಳಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಜೆಡಿಎಸ್ ಪಕ್ಷದ ಶಾಲು ಹಾಕುವ ಮೂಲಕ ಖೂಬಾ ಅವರನ್ನು ಪಕ್ಷಕ್ಕೆ ಕುಮಾರಸ್ವಾಮಿ ಬರಮಾಡಿಕೊಂಡರು. ಶುಭ ಸಮಯ ಇದ್ದ ಕಾರಣಕ್ಕೆ ಮಾಜಿ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾಗಿ ಖೂಬಾ ಅವರು ತಿಳಿಸಿದ್ದಾರೆ.
ಜೆಡಿಎಸ್ ಪಕ್ಷದಿಂದ ಬಸವ ಕಲ್ಯಾಣ ಕ್ಷೇತ್ರವನ್ನು ಎರಡು ಅವಧಿಗೆ ಪ್ರತಿನಿಧಿಸಿದ್ದರು ಖೂಬಾ. ಕಳೆದ ಚುನಾವಣೆ ವೇಳೆ ಬಿಜೆಪಿಗೆ ಮರಳಿದ್ದರು. 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್ ಅಭ್ಯರ್ಥಿ ಬಿ. ನಾರಾಯಣ ರಾವ್ ವಿರುದ್ಧ ಸೋಲುಂಡಿದ್ದರು.
ಈ ಕುರಿತು ಮಾತನಾಡಿದ ಕುಮಾರಸ್ವಾಮಿ, ಖೂಬಾ ಅವರು ಜೆಡಿಎಸ್ ಪಕ್ಷದಲ್ಲಿಯೇ ಇದ್ದವರು. ಕಾರಣಾಂತರಗಳಿಂದ ಅವರು ಪಕ್ಷ ಬಿಟ್ಟಿದ್ದರು. ಈಗ ಮರಳಿ ತಮ್ಮ ಮನೆಗೆ ವಾಪಸ್ ಆಗಿದ್ದಾರೆ. ಒಳ್ಳೆಯ ಸಮಯ ಇದೆ ಎನ್ನುವ ಕಾರಣಕ್ಕೆ ಬಂದು ಪಕ್ಷಕ್ಕೆ ಸೇರಿದರು. ಶೀಘ್ರದಲ್ಲಿಯೇ ಅವರು ಪಕ್ಷದ ರಾಜ್ಯದ ಕಚೇರಿಯಲ್ಲಿ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ ಬಂಡೆಪ್ಪ ಕಾಷೆಂಪೂರ್ ಮತ್ತಿತರೆ ಹಿರಿಯ ನಾಯಕರ ಸಮಕ್ಷಮದಲ್ಲಿ ತಮ್ಮ ಬೆಂಬಲಿಗರ ಜತೆ ಪಕ್ಷಕ್ಕೆ ಅಧಿಕೃತವಾಗಿ ಸೇರಿಕೊಳ್ಳಲಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.
ಇದನ್ನೂ ಓದಿ: ರಾಮ ರಾಮ! ಶ್ರೀರಾಮನ ಕಾಲಿನ ಮೇಲೆ ನಿಂತು ಪ್ರತಿಮೆಗೆ ಹೂವಿನ ಹಾರ ಹಾಕಿದ ಬಸವಕಲ್ಯಾಣ ಬಿಜೆಪಿ ಶಾಸಕ!
ಕರ್ನಾಟಕ
MySugar Factory: ಮೈಶುಗರ್ ಕಾರ್ಖಾನೆಗೆ ಬಾಕಿ ಇರುವ 17.42 ಕೋಟಿ ರೂ. ಬಿಡುಗಡೆ ಮಾಡಿ: ದಿನೇಶ್ ಗೂಳಿಗೌಡ
Dinesh Gooligowda: ಮೈಶುಗರ್ ಕಾರ್ಖಾನೆಗೆ ಸರ್ಕಾರದಿಂದ 17.42 ಕೋಟಿ ರೂಪಾಯಿ ಬಾಕಿ ಅನುದಾನ ಬಿಡುಗಡೆಯಾಗಬೇಕಿದ್ದು, ಈ ಹಣವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಬೆಂಗಳೂರು: ಮೈಸೂರು ಸಕ್ಕರೆ ಕಾರ್ಖಾನೆಯ (MySugar Factory) ಪುನಶ್ಚೇತನಕ್ಕೆ ಮಂಜೂರಾಗಿರುವ ಹಣದಲ್ಲಿ ಬಾಕಿ ಉಳಿಕೆಯಾಗಿರುವ 17.42 ಕೋಟಿ ರೂಪಾಯಿಯನ್ನು ಶೀಘ್ರವೇ ಬಿಡುಗಡೆ ಮಾಡಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರನ್ನು ಶುಕ್ರವಾರ (ಮಾ. 31) ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಬರುವ ಜೂನ್‌ನಿಂದಲೇ ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಅರೆಯುವ ಪ್ರಕ್ರಿಯೆ ಆರಂಭವಾಗಲಿದೆ. ಇದೇ ವೇಳೆ ಕಾರ್ಖಾನೆಯಲ್ಲಿ ಮುಂಚಿತವಾಗಿ ಹಣದ ಅವಶ್ಯಕತೆ ಇರುತ್ತದೆ. ರೈತರಿಗೆ ಮುಂಗಡ ಪಾವತಿ ಸೇರಿದಂತೆ ಕಬ್ಬು ಅರೆಯುವ ಸಂಬಂಧ ಅನೇಕ ಖರ್ಚು ವೆಚ್ಚಗಳು ಇರುತ್ತವೆ. ಆದರೆ, ಇಂತಹ ಸಂದರ್ಭದಲ್ಲಿ ಬರಬೇಕಾದ ಅನುದಾನವು ಬಿಡುಗಡೆಯಾಗದೇ ಹೋದರೆ ರೈತರಿಗೆ ಬಹಳವೇ ತೊಂದರೆಯಾಗಲಿದೆ. ಹೀಗಾಗಿ ಈ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ದಿನೇಶ್ ಗೂಳಿಗೌಡ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Karnataka Election: ಜೆಡಿಎಸ್, ಬಿಜೆಪಿಯ ತಲಾ ಒಂದು ವಿಕೆಟ್ ಪತನ: A.T. ರಾಮಸ್ವಾಮಿ, N.Y. ಗೋಪಾಲಕೃಷ್ಣ ರಾಜೀನಾಮೆ
ಅಲ್ಲದೆ, ಜಿಲ್ಲೆಯಲ್ಲಿ 6112 ಎಕರೆ ಪ್ರದೇಶದಲ್ಲಿ 305600 ಮೆಟ್ರಿಕ್ ಟನ್ ಕಬ್ಬು ಬೆಳೆದ 3395 ರೈತರು 2023 ಮತ್ತು 24ನೇ ಸಾಲಿಗೆ ಕಬ್ಬು ಸರಬರಾಜು ಮಾಡಲು ಈಗಾಗಲೇ ನೋಂದಣಿ ಮಾಡಿಸಿಕೊಂಡಿದ್ದಾರೆ. ಇವರೆಲ್ಲರೂ ಜೂನ್‌ನಿಂದಲೇ ಕಬ್ಬು ಪೂರೈಕೆಯನ್ನು ಪ್ರಾರಂಭಿಸಬಹುದಾಗಿದ್ದು, ಇವರಿಗೆ ಆ ಸಮಯದಲ್ಲಿ ಯಾವುದೇ ತೊಂದರೆಯಾಗದಂತೆ ಹಣದ ಪಾವತಿಯಾಗಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಬಾಕಿ ಇರುವ ಅನುದಾನ ಬಿಡುಗಡೆಯಾಗಬೇಕಿದೆ ಎಂದು ದಿನೇಶ್ ಗೂಳಿಗೌಡ ಅವರು ಪತ್ರದ ಮೂಲಕ ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಮನವಿ ಪತ್ರದಲ್ಲೇನಿದೆ?
ಮಂಡ್ಯ ಜಿಲ್ಲೆಯ ಜನತೆಯ, ರೈತರ ಜೀವನಾಡಿಯಾಗಿರುವ ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಜೂನ್ ತಿಂಗಳಿನಲ್ಲೀಯೇ ಕಬ್ಬು ಅರೆಯುವ ಕೆಲಸವನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಈ ಸಾಲಿನಲ್ಲಿ ಒಟ್ಟಾರೆ ಸುಮಾರು 6 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಫೆಬ್ರವರಿ, ಮಾರ್ಚ್ ಎರಡು ತಿಂಗಳಲ್ಲಿ 3 ಲಕ್ಷ ಟನ್ ಕಬ್ಬು ಸರಬರಾಜು ಮಾಡುವುದಾಗಿ ರೈತರು ಈಗಾಗಲೇ ಕಾರ್ಖಾನೆಯೊಟ್ಟಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಕಾರ್ಖಾನೆಯಲ್ಲಿ ಯಂತ್ರಗಳ ರಿಪೇರಿ, ಹಾಗೂ ಕಬ್ಬು ನುರಿಸುವ ತಯಾರಿ ಕಾರ್ಯಕ್ಕೆ ಹಣಕಾಸಿನ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಈಗ ಸರ್ಕಾರದ ಸಹಕಾರ ಬಹಳ ಮುಖ್ಯವಾಗುತ್ತದೆ.
ಸ್ಥಗಿತಗೊಂಡಿರುವ ಮೈಶುಗರ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಸರ್ಕಾರವು ನಿರ್ಧರಿಸಿ, ಮುಂದಿನ ಎರಡು ವರ್ಷಗಳ ಕಾಲ ಪ್ರಾಯೋಗಿಕವಾಗಿ ಸರ್ಕಾರದ ವತಿಯಿಂದಲೇ ಕಾರ್ಖಾನೆಯನ್ನು ನಡೆಸಲಾಗುವುದು. ಕಾರ್ಖಾನೆಯ ಯಂತ್ರೋಪಕರಣ ದುರಸ್ತಿಗಾಗಿ 50 ಕೋಟಿ ರೂ.ಗಳನ್ನು ಒದಗಿಸುವುದಲ್ಲದೆ, ಹಣಕಾಸು ಸಂಸ್ಥೆಗಳಿಂದ ದುಡಿಯುವ ಬಂಡವಾಳವನ್ನು ಪಡೆಯಲು ವ್ಯವಸ್ಥೆ ಮಾಡಲಾಗುವುದು ಎಂದು 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾಗಿತ್ತು. ಅದರಂತೆ ಯಂತ್ರೋಪಕರಣಗಳ ದುರಸ್ತಿ ಮತ್ತು ಓವರ್-ಹಾಲಿಂಗ್ ಕೆಲಸಗಳಿಗೆ, ಸಾಮಗ್ರಿ ಖರೀದಿ ಮತ್ತು ಗುತ್ತಿಗೆ ಕೆಲಸಗಳನ್ನು ಕೈಗೊಳ್ಳಲು, ಕಬ್ಬು ಕಟಾವು ಮಾಡುವ ಮೇಸ್ತ್ರಿಗಳಿಗೆ ಮುಂಗಡ ಹಣ ಪಾವತಿಸಲು, ನೌಕರರಿಗೆ ಸ್ವಯಂ ನಿವೃತ್ತಿ ಸೌಲಭ್ಯ ಪಾವತಿಸುವುದಕ್ಕಾಗಿ 32.58 ಕೋಟಿ ರೂ. ಅನುದಾನವನ್ನು ಇದುವರೆಗೆ ಬಿಡುಗಡೆಗೊಳಿಸಲಾಗಿದೆ. ಬಾಕಿ ಉಳಿದಿರುವ 17.42 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸುವ ಕ್ರಮವಹಿಸಲಾಗುತ್ತಿದೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: Fire tragedy : ಹೊಸಕೋಟೆಯಲ್ಲಿ ಭೀಕರ ದುರಂತ; ಗ್ಯಾಸ್ ಸಿಲಿಂಡರ್ ಲೀಕ್ ಆಗಿ 7 ಕಾರ್ಮಿಕರ ದಾರುಣ ಸಾವು
ಆದ್ದರಿಂದ ಈಗಾಗಲೇ ಸರ್ಕಾರ ನೀಡಿ ಬಜೆಟ್‌ನಲ್ಲಿ ಘೋಷಿಸಿದ್ದ 50 ಕೋಟಿ ರೂಪಾಯಿಯಲ್ಲಿ ಬಾಕಿ ಇರುವ 17.42 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಕೊಡಬೇಕು ಎಂದು ಮಂಡ್ಯ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಅವರ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ದಿನೇಶ್ ಗೂಳಿಗೌಡ ಅವರು ಪತ್ರದ ಮೂಲಕ ಕೋರಿದ್ದಾರೆ.
ಕರ್ನಾಟಕ
Mysterious death : ನಿರ್ಜನ ಪ್ರದೇಶದಲ್ಲಿ 8 ವರ್ಷದ ಬಾಲಕನ ಶವ ಪತ್ತೆ; ದುಷ್ಕರ್ಮಿಗಳು ಕೊಲೆ ಮಾಡಿ ಎಸೆದ ಶಂಕೆ
ಎಂಟು ವರ್ಷದ ಬಾಲಕನೊಬ್ಬನ ಶವ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ (Mysterious death). ಯಾರೋ ದುಷ್ಕರ್ಮಿಗಳು ಕೊಂದು ಎಸೆದಿರುವ ಶಂಕೆ ಇದೆ.
ಹುಬ್ಬಳ್ಳಿ: ಇಲ್ಲಿನ ದೊಡ್ಡ ಮನಿ ಕಾಲೊನಿಯ ಪಾಳು ಬಿದ್ದ ನಿರ್ಜನ ಜಾಗದಲ್ಲಿ ಎಂಟು ವರ್ಷದ ಬಾಲಕನೊಬ್ಬನ ಶವ ಪತ್ತೆಯಾಗಿದ್ದು, ಪರಿಸರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಆತನನ್ನು ಕೊಲೆ ಮಾಡಿ ಎಸೆದಿರುವ (Mysterious death) ಸಂಶಯವಿದೆ.
ನದೀಮ್ ಹಸನಸಾಬ್ ಹುಬ್ಬಳ್ಳಿ (8) ಮೃತ ಬಾಲಕ. ಗುರುವಾರ ಸಂಜೆಯಿಂದ ನಾಪತ್ತೆಯಾಗಿದ್ದ ಈ ಹುಡುಗನಿಗಾಗಿ ಎಲ್ಲ ಕಡೆ ಹುಡುಕಾಟ ನಡೆದಿತ್ತು. ಪೋಷಕರು ಪೊಲೀಸರಿಗೂ ದೂರು ನೀಡಿದ್ದರು. ಆದರೆ, ಎಲ್ಲೂ ಆತ ಪತ್ತೆಯಾಗಿರಲಿಲ್ಲ.
ಶುಕ್ರವಾಗ ಕುರುಚಲು ಗಿಡಗಳಿರುವ ನಿರ್ಜನ ಪ್ರದೇಶದಲ್ಲಿ ಆತನ ಶವ ಪತ್ತೆಯಾಗಿದ್ದು, ಹಲವು ಸಂಶಯಗಳನ್ನು ಹುಟ್ಟುಹಾಕಿದೆ.
ಮೂರನೇ ತರಗತಿಯಲ್ಲಿ ಓದುತ್ತಿರುವ ಈ ಹುಡುಗನಿಗೆ ಶಾಲೆಗೆ ರಜೆ ಸಿಕ್ಕಿದೆ. ಹೀಗಾಗಿ ಆತ ಘಂಟಿಕೇರಿಯಲ್ಲಿರುವ ಅಜ್ಜಿ ಮನೆಗೆ ಬಂದಿದ್ದ. ಸಂಜೆಯವರೆಗೂ ಆಟವಾಡುತ್ತಿದ್ದ ಆತ ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿದ್ದ. ಶುಕ್ರವಾರ ಮನೆಯಿಂದ ಸ್ವಲ್ಪ ದೂರದಲ್ಲಿರುವ ದೊಡ್ಡಮನಿ ಕಾಲನಿಯ ಪಾಳುಬಿದ್ದ ಜಾಗದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಎಸೆದಿರುವ ಶಂಕೆಯನ್ನು ವ್ಯಕ್ತಪಡಿಸಲಾಗುತ್ತಿದೆಯಾದರೂ ಇಷ್ಟು ಸಣ್ಣ ಹುಡುಗನನ್ನು ಯಾಕೆ ಕೊಲೆ ಮಾಡಿದರು ಎಂಬ ಸಂಶಯವಿದೆ. ಕುಟುಂಬದ ವಿವರಗಳು, ಈ ಭಾಗದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಹಂತಕರನ್ನು ಪತ್ತೆ ಹಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ʼಕಾಂತಾರ’ ಚಿತ್ರದ ದೃಶ್ಯ ಕಳಿಸಿ ಕೊಲೆ ಬೆದರಿಕೆ! ದೂರು ದಾಖಲು
ಬೆಂಗಳೂರು: ʼಕಾಂತಾರʼ ಚಲನಚಿತ್ರದ ದೃಶ್ಯವೊಂದು ಕೊಲೆ ಬೆದರಿಕೆಗೆ ಬಳಕೆಯಾಗಿರುವ ವಿಲಕ್ಷಣ ಘಟನೆ ನಡೆದಿದೆ. ಜಮೀನು ವ್ಯಾಜ್ಯ ಸಂಬಂಧ ಹಿರಿಯ ನಾಗರಿಕರೊಬ್ಬರಿಗೆ ಹೀಗೆ ಕೊಲೆ ಬೆದರಿಕೆ ಹಾಕಲಾಗಿದೆ.
ಕುಣಿಗಲ್‌ನಲ್ಲಿ ನರಸಿಂಹಮೂರ್ತಿ ಎಂಬ ಹಿರಿಯ ನಾಗರಿಕರಿಗೆ ಶರತ್ ಕುಮಾರ್ ಎಂಬಾತ ಹೀಗೆ ಹತ್ಯೆ ಬೆದರಿಕೆ ಒಡ್ಡಿದ್ದಾನೆ. ಕುಣಿಗಲ್‌ನಲ್ಲಿ ಪತ್ನಿ ಹೆಸರಿನಲ್ಲಿ ನರಸಿಂಹ ಮೂರ್ತಿ ಎರಡು ಎಕರೆ ಜಮೀನು ಖರೀದಿ ಮಾಡಿದ್ದರು. ಈ ಜಮೀನಿನ ಕುರಿತು ಶರತ್ ಕುಮಾರ್ ಎಂಬಾತ ತಗಾದೆ ತೆಗೆದಿದ್ದ. ಜಮೀನಿಗೆ ಈತ ಅತಿಕ್ರಮ ಪ್ರವೇಶ ಮಾಡಿದ್ದಾನೆ ಎಂದು ಈ ಹಿಂದೆ ನರಸಿಂಹಮೂರ್ತಿ ದೂರು ನೀಡಿದ್ದರು. ಸದ್ಯ ಜಮೀನು ವ್ಯಾಜ್ಯ ನ್ಯಾಯಾಲಯದಲ್ಲಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಶರತ್ ಕುಮಾರ್ ತನಗೆ ಕೊಲೆ ಬೆದರಿಕೆ ಹಾಕುತ್ತಿದ್ದಾನೆ. ವಾಟ್ಸ್ಯಾಪ್ ಮೂಲಕ ʼಕಾಂತಾರʼ ಚಿತ್ರದ ದೃಶ್ಯಗಳನ್ನು ಕಳಿಸಿ ಇದೇ ರೀತಿ ಸಾಯ್ತೀಯ ಎಂದು ಬೆದರಿಕೆ ಹಾಕಿದ್ದಾನೆ ಎಂದು ನರಸಿಂಹಮೂರ್ತಿ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಎಫ್‌ಐಆರ್‌ನಲ್ಲಿ ಕೂಡ ಉಲ್ಲೇಖಿಸಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕಿರುಕುಳ, ಕೊಲೆ ಬೆದರಿಕೆ ದೂರು ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ ಮಂಗಳೂರಿನ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಮೃತರು ಮೈಸೂರಿನವರು
ಕರ್ನಾಟಕ
Fire tragedy : ಹೊಸಕೋಟೆಯಲ್ಲಿ ಭೀಕರ ದುರಂತ; ಗ್ಯಾಸ್ ಸಿಲಿಂಡರ್ ಲೀಕ್ ಆಗಿ 7 ಕಾರ್ಮಿಕರ ದಾರುಣ ಸಾವು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೇಡಹಳ್ಳಿಯಲ್ಲಿ ವಾರದ ಹಿಂದೆ ಸಂಭವಿಸಿದ ಗ್ಯಾಸ್ ಲೀಕೇಜ್ ಪ್ರಕರಣದಲ್ಲಿ ಗಾಯಗೊಂಡಿದ್ದವರು ದಿನಕ್ಕೊಬ್ಬರಂತೆ ಸಾಯುತ್ತಿದ್ದು, ಈಗ ಸಾವಿನ ಸಂಖ್ಯೆ ಏಳಕ್ಕೇರಿದೆ.
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಕಳೆದ ಭಾನುವಾರ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸೋರಿಕೆ (Fire tragedy) ಪ್ರಕರಣವೊಂದು ಏಳು ಮಂದಿಯ ಪ್ರಾಣವನ್ನೇ ಕಸಿದಿದೆ. ಸಾವನ್ನಪ್ಪಿದವರೆಲ್ಲರೂ ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ಕಾರ್ಮಿಕರಾಗಿರುವುದರಿಂದ ಆರು ದಿನಗಳ ಕಳೆದರೂ ಇದರ ಸ್ಪಷ್ಟ ಮಾಹಿತಿ ಹೊರಬಿದ್ದಿರಲಿಲ್ಲ.
ಹೊಸಕೋಟೆ ತಾಲೂಕಿನ ಮೇಡಹಳ್ಳಿಯಲ್ಲಿ ಕಳೆದ ಭಾನುವಾರ ಶೆಡ್ ಒಂದರಲ್ಲಿ ರಾತ್ರಿ ಅನಿಲ ಸೋರಿಕೆ ಆಗಿದ್ದು, ರಾತ್ರಿ ಯಾರೋ ಕರೆಂಟ್ ಹಾಕಿದಾಗ ಬೆಂಕಿ ಹತ್ತಿಕೊಂಡು ಎಂಟು ಮಂದಿಗೆ ಬೆಂಕಿಯ ಗಾಯಗಳಾಗಿದ್ದವು. ಆರಂಭಿಕ ಹಂತದಲ್ಲಿ ಇದೇನೂ ತುಂಬ ದೊಡ್ಡ ಅವಘಡದಂತೆ ಕಾಣಿಸಿರಲಿಲ್ಲ. ಆದರೆ, ದಿನ ಕಳೆದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಒಬ್ಬೊಬ್ಬರಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದ ಈಗ ಎಂಟು ಮಂದಿಯಲ್ಲಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ಕಾರ್ಮಿಕರನ್ನು ಕರೆದುಕೊಂಡು ಬಂದು ಇಲ್ಲಿ ಕಾಮಗಾರಿಗಳಲ್ಲಿ ದುಡಿಸಿಕೊಳ್ಳಲಾಗುತ್ತಿತ್ತು. ಅವರಿಗೆ ಒಂದು ಶೆಡ್‌ನಲ್ಲಿ ವಾಸವಾಗಿರಲು ವ್ಯವಸ್ಥೆ ಮಾಡಲಾಗಿತ್ತು. ಕಳೆದ ಭಾನುವಾರ ರಾತ್ರಿಯೂ ಈ ಕಾರ್ಮಿಕರು ಮೇಡಹಳ್ಳಿಯ ಅಂತಹುದೇ ಒಂದು ಶೆಡ್‌ನಲ್ಲಿ ಮಲಗಿದ್ದರು. ಹೊರಗಡೆ ಊಟ ಮಾಡಿಕೊಂಡು ಬಂದು ಅವರು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆಗ ಯಾವುದೋ ಕಾರಣದಿಂದ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿತ್ತು.
ನಡುವೆ ರಾತ್ರಿ ಯಾರೋ ಲೈಟ್ ಆನ್ ಮಾಡಿದಾಗ ಸೋರಿಕೆಯಾದ ಅನಿಲದಿಂದಾಗಿ ಬೆಂಕಿ ಹತ್ತಿಕೊಂಡಿತ್ತು. ಇದರಿಂದ ಮಲಗಿದ್ದವರಿಗೆಲ್ಲ ಸುಟ್ಟ ಗಾಯಗಳಾಗಿತ್ತು. ಅವರನ್ನು ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಆರೋಗ್ಯವಾಗಿದ್ದಾರೆ ಎಂಬಂತೆ ಕಂಡುಬಂದ ಇವರ ದೇಹದ ಒಳಗೆ ಬೆಂದ ಗಾಯಗಳು ಘಾಸಿಗೊಳಿಸಿತ್ತು. ಹೀಗಾಗಿ ದಿನ ಕಳೆದಂತೆ ಒಬ್ಬೊಬ್ಬರೇ ಪ್ರಾಣ ಕಳೆದುಕೊಳ್ಳಲಾರಂಭಿಸಿದ್ದಾರೆ. ಶುಕ್ರವಾರ ಏಳನೇ ಸಾವು ಸಂಭವಿಸಿದೆ.
ಅಮಿತ್, ಸನೋಜ್, ನೀರಜ್, ಸೋಮಯ್ ಗುಪ್ತಾ, ತಿಲಕ್ ರಾಮ್, ಲಕ್ಷ್ಮಣ್ ಮತ್ತು ಚಂದ್ರಭಾನ್ ಮೃತ ಕಾರ್ಮಿಕರು. ಈ ಘಟನೆಗೆ ಸಂಬಂಧಿಸಿ ಅರವಿಂದ ಗುಪ್ತಾ, ಮತ್ತು ಬಾಸ್ಕರ್ ಎಂಬುವವರ ವಿರುದ್ದ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶದಿಂದ, ಬಿಹಾರದಿಂದ ಕಾರ್ಮಿಕರನ್ನು ಕರೆತರುವ ಲೇಬರ್ ಕಂಟ್ರಾಕ್ಟರ್‌ಗಳು ಮತ್ತು ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಕೆಲಸಕ್ಕಾಗಿ ಕರೆತಂದು ಸೂಕ್ತ ಮೂಲ ಸೌಕರ್ಯ ನೀಡದ ಕಾರಣ ಅವಘಡ ಸಂಭವಿಸಿದೆ. ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Road Accident: ನೆಲಮಂಗಲದ ಬಳಿ ಲಾರಿ ಹರಿದು ಯುವತಿ ಸ್ಥಳದಲ್ಲೇ ಸಾವು
-
ಸುವಚನ10 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ7 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಪ್ರಮುಖ ಸುದ್ದಿ16 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕರ್ನಾಟಕ8 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಕ್ರಿಕೆಟ್23 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ವೈರಲ್ ನ್ಯೂಸ್23 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ20 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್20 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ