ಬೆಂಗಳೂರು: ಮುಂದಿನ 24 ಗಂಟೆಗಳಲ್ಲಿ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು (Rain alert) ಹವಾಮಾನ ಇಲಾಖೆ ನೀಡಿದೆ. ಉತ್ತರ ಒಳನಾಡಿನ ಬೀದರ್, ಕಲಬುರಗಿ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರ, ರಾಮನಗರ, ತುಮಕೂರಿನಲ್ಲೂ ಮಳೆಯ ಅಬ್ಬರ ಇರಲಿದೆ.
ಬೆಂಗಳೂರು ನಗರದಲ್ಲಿ ಭಾಗಶ: ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿ ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಬೆಳಗಿನಜಾವ ಮಂಜು ಮುಸುಕುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 32 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮಳೆ ಪ್ರಮಾಣ ಹೀಗಿದೆ?
ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಶನಿವಾರ ಮಳೆಯಾಗಿದೆ. ಬೀದರ್‌ನ ಔರಾದ್, ಕೋಲಾರದ ಚಿಂತಾಮಣಿ, ರಾಯಲ್ಪಾಡು ತಲಾ 4 ಸೆ.ಮೀ ಮಳೆ ಆಗಿದ್ದು, ಗೇರುಸೊಪ್ಪ, ಚಿಂಚೋಳಿ, ಮಂತಾಲ, ಮನ್ನಾಳಿ, ಸಿಂದಗಿ, ಸೈದಾಪುರದಲ್ಲಿ ತಲಾ 2 ಸೆ.ಮೀ ಮಳೆಯಾಗಿದೆ.
ಬ್ರಹ್ಮಾವರ, ಬೀದರ್, ಹುಮನಾಬಾದ್, ಅಫಜಲಪುರ, ಸುಲೇಪೇಟೆ, ರಾಯಚೂರು, ಮಧುಗಿರಿ, ರಾಮನಗರ, ವೈ.ಎನ್. ಹೊಸಕೋಟೆ, ಶಿರಾ, ಶೃಂಗೇರಿ, ಕುಡುತಿನಿ, ಹರದನಹಳ್ಳಿಯಲ್ಲಿ ತಲಾ 1 ಸೆ.ಮೀ ಮಳೆಯಾಗಿದೆ. ಇನ್ನು ಪಣಂಬೂರು ಹಾಗೂ ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 35.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಬಾಗಲಕೋಟೆಯಲ್ಲಿ ಕನಿಷ್ಠ ಉಷ್ಣಾಂಶ 14.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ವೀಕೆಂಡ್ ಮೋಜಿಗೆ ಮಳೆರಾಯ ಅಡ್ಡಿ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವೀಕೆಂಡ್ ಮೋಜಿಗೆ ಮಳೆರಾಯ ಅಡ್ಡಿಯಾಗಿದ್ದ. ಉಡುಪಿಯಲ್ಲಿ ಬೆಳಗ್ಗಿನಿಂದಲೇ ತುಂತುರು ಮಳೆ ಶುರುವಾಗಿದ್ದರಿಂದ ಜನರ ಕೆಲಸ ಕಾರ್ಯಗಳಿಗೆ ಕಿರಿಕಿರಿ ಉಂಟಾಗಿತ್ತು. ಇನ್ನು ಕಳೆದ ಒಂದು ವಾರದಿಂದ ತಾಪಮಾನ 35 ರಿಂದ 37 ಡಿಗ್ರಿವರೆಗೂ ಹೆಚ್ಚಾಗಿತ್ತು. ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಕರಾವಳಿ ಜನರಿಗೆ ತುಂತುರು ಮಳೆಯಿಂದ ವಾತಾವರಣ ತಂಪಾಗಿತ್ತು. ಮುಂದಿನ ಒಂದು ವಾರಗಳ ಕಾಲ ಸಾಧಾರಣ ಮಳೆ ಆಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ.
ಆಲಿಕಲ್ಲು ಮಳೆಗೆ ಕಲ್ಲಂಗಡಿ ಬೆಳೆ ನಾಶ
ಕಲಬುರಗಿ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ಮಳೆ ಅವಾಂತರದಿಂದ ಲಕ್ಷಾಂತರ ರೂಪಾಯಿ ಕಲ್ಲಂಗಡಿ ಬೆಳೆ ನಾಶವಾಗಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಅಲ್ಲಪೂರ್ ಗ್ರಾಮದಲ್ಲಿ ಆಲಿಕಲ್ಲು ಮಳೆಯಿಂದಾಗಿ ಶರಣಗೌಡ ಪಾಟೀಲ ಎಂಬುವವರ 3.5 ಎಕರೆಯಲ್ಲಿ ಬೆಳೆದಿದ್ದ ಕಲ್ಲಂಗಡಿ ಬೆಳೆ ಹಾಳಾಗಿದೆ. 5 ಲಕ್ಷ ರೂ. ಖರ್ಚು ಮಾಡಿ ಬೆಳೆ ಬೆಳೆಯಲಾಗಿತ್ತು, 2 ದಿನದಲ್ಲಿ ಕಟಾವು ಮಾಡಲು ಬಂದಿದ್ದ ಕಲ್ಲಂಗಡಿ ಹಣ್ಣುಗಳು ಹಾಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಅವೈಜ್ಞಾನಿಕ ರಸ್ತೆ ಕಾಮಗಾರಿ
ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಯಿಂದ ಮಳೆ ನೀರು ರೈತರ ಹೊಲಕ್ಕೆ ನುಗ್ಗಿದೆ. ಪರಿಣಾಮ ಹತ್ತಾರು ಎಕರೆಗಳಷ್ಟು ಜಮೀನಿನಲ್ಲಿ ಬೆಳೆಸಿದ್ದ ಜೋಳ ಮುಳುಗಿ ನಷ್ಟವಾಗಿದೆ. ಬೀದರ್ ತಾಲೂಕಿನ ಮರಕಲ್ ಗ್ರಾಮಸ್ಥರಿಂದ ಗುತ್ತಿಗೆ ದಾರನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಟಾವಿಗೆ ಬಂದಿದ್ದ ಜೋಳ ನೀರು ಪಾಲಾಗಿದೆ ಎಂದು ರಸ್ತೆ ತಡೆದು ಮರಕಲ್ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: Bengaluru Auto Bandh: ಬೈಕ್ ಟ್ಯಾಕ್ಸಿಗೆ ವಿರೋಧ; ಇಂದು ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ
ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದವರು ರೈತರ ಬೆಳೆ ಹಾನಿ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಸ್ಥಳೀಯ ಶಾಸಕ ರಹೀಂಖಾನ್ ಭೇಟಿ ನೀಡಿ, ಸೂಕ್ತ ಪರಿಹಾರ ಕೊಡಿಸುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ